Advertisement

ಕಾಕನ ಕೋಟೆಯ ಕಾಡ ಕುಸುಮಗಳು….

03:31 PM Mar 24, 2018 | |

ಹೆಗ್ಗಡದೇವನ ಕೋಟೆಯ ಹೊಸಹಳ್ಳಿ ಹಾಡಿಗೆ ತಲುಪಿದಾಗ ಮಧ್ಯಾಹ್ನ ಹನ್ನೊಂದು ಗಂಟೆ. ಸೂರ್ಯ ಮಾರುದೂರ ಬಂದಿದ್ದರೂ ಚುಮುಚುಮು ಚಳಿ, ಬೆಚ್ಚನೆಯ ಬಿಸಿಲು. ಹಾಡಿಯ ಪುಟ್ಟ ಗೂಡಿನ ಮುಂದೆ ಮುದುಕನೊಬ್ಬ ಕಂಬಳಿ ಹೊದ್ದು ಮಲಗಿದ್ದ. ಮಕ್ಕಳ ಗುಂಪೊಂದು ಮಧ್ಯದಲ್ಲಿ ಹೆಣ್ಣುಮಗಳನ್ನು ಕೂರಿಸಿಕೊಂಡು ಹೇನು ಹಿಡಿಯುವ ಕಾಯಕದಲ್ಲಿ ನಿರತವಾಗಿತ್ತು. ಉಳಿದವರು ಬಿಸಿಲಿಗೆ ಮೈಯೊಡ್ಡಿ ಬಿಸಿಲು ಕಾಯಿಸುತ್ತಾ ಕುಳಿತಿದ್ದರು. ಗುಂಪಿಗೆ ತಾಕಿಕೊಂಡೇ ನಾಯಿಯೊಂದು ಮಲಗಿ ನಿದ್ರೆಗೆ ಜಾರಿತ್ತು.

Advertisement

ಸಾಮಾನ್ಯವಾಗಿ ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ವಯಸ್ಸಿಗೆ ಬಂದ ಯುವಕರು,ಮಕ್ಕಳು ಕಾಣುವುದೇ ಇಲ್ಲ. ಆದರೆ ಈ ಹಾಡಿಯಲ್ಲಿ ಮಕ್ಕಳ ಸೈನ್ಯವೇ ನೆರೆದಿತ್ತು. ಇದನ್ನು ನೋಡಿ ಆಶ್ಚರ್ಯವಾಯಿತು. ಹಳ್ಳಿಗಳಲ್ಲಿ ವೃದ್ಧರ ಕಾಲಯಾಪನೆ. ಹಾಡಿಗಳಲ್ಲಿ ಮಕ್ಕಳ ಕಲರವ.

ಹಿರಿಯರು ಕೂಲಿ ಅರಸಿ ನಾಡಿಗೆ ಹೊರಟಿದ್ದರೆ, ಮಕ್ಕಳು ಹಾಡಿಯಲ್ಲಿ ಹೇನು ಹಿಡಿಯುತ್ತಾ, ಬಾಳೆಯ ತೋಟಕ್ಕೆ ನೀರು ಬಿಡುತ್ತಾ ಪರಿಸರದ ನಡುವೆ ಸ್ವತ್ಛಂದವಾಗಿ ಆಟವಾಡುತ್ತಾ ಇದ್ದವು. ಕೆಲವು ಮಕ್ಕಳು ಬರಿ ಮೈಯಲ್ಲೂ, ಉಳಿದವು ಹರಿದ ಅಂಗಿಯಲ್ಲೂ ತಮ್ಮಷ್ಟಕ್ಕೆ ಆಡಿಕೊಳ್ಳುತ್ತಿದ್ದವು. ಕಾರಿನಲ್ಲಿ ಹೋದ ನಮ್ಮನ್ನು ಕುತೂಹಲದಿಂದ ಒಮ್ಮೆ ದಿಟ್ಟಿಸಿ ನೋಡಿ ಮತ್ತೆ ತಮ್ಮ ಕಾಯಕದಲ್ಲಿ ತಲ್ಲೀನರಾದವು.

ಮುದುಕನ್ಯಾಕೆ ಹಾಗೆ ನಿರ್ಜೀವವಾಗಿ ಮಲಗಿದ್ದಾನೆ ಎಂದು ಕೇಳಿದರೆ “ತಿಂಗಳಿಂದ ಹಕ್ಕಿಜ್ವರ ಬಂದಿದೆ ಸಾಮಿ. ಮಾತಿಲ್ಲ ಕತೆ ಇಲ್ಲ. ಸುಮ್ಮನೆ ಒಂದೇ ತಪ ಮಲಗಿದ್ದಾನೆ’ ಎಂದು ಹೆಂಗಸೊಬ್ಬಳು ನಿರ್ಭಾವುಕವಾಗಿ ಹೇಳಿ ಶೂನ್ಯದತ್ತ ದೃಷ್ಟಿ ಬೀರಿದಳು.

Advertisement

ಮೈಸೂರು ಜಿಲ್ಲೆಗೆ ಸೇರಿದ ಹೆಗ್ಗಡದೇವನ ಕೋಟೆಯನ್ನು 16 ನೇ ಶತಮಾನಕ್ಕಿಂತ ಮುಂಚೆ ನವಿಲುನಾಡು ಎಂದು ಕರೆಯಲಾಗುತ್ತಿತ್ತು. ನಂತರ ನುಗು ನಾಡಾಗಿ ಅರಸರ ಆಳ್ವಿಕೆಗೆ ಒಳಪಟ್ಟಾಗ “ಹೆಗ್ಗಡ ದೇವ’ ಎಂಬ ಪಾಳೆಗಾರನ ಆಡಳಿತಕ್ಕೆ ಒಳಪಟ್ಟು ಹೆಗ್ಗಡದೇವನ ಕೋಟೆಯಾಯಿತು. ಕಾಲನಂತರ ಹೆಗ್ಗಡದೇವನಿಗೂ ಗಿರಿಜನರಿಗೂ ಘರ್ಷಣೆ ನಡೆದು ಮೈಸೂರು ರಾಜರು ಬಂದು ಪರಿಶೀಲಿಸಿ, ಕಬಿನಿ ನದಿ ಹರಿಯುತ್ತಿದ್ದ ಕಾಕನಕೋಟೆಯನ್ನು ಗಿರಿಜನರ ಸುಪರ್ದಿಗೆ ಕೊಟ್ಟರಂತೆ. ಅಲ್ಲಿ ಮದ್ದಾನೆಗಳನ್ನು ಪಳಗಿಸಲಾಗುತ್ತಿತ್ತು ಎಂದು ಚರಿತ್ರೆಯ ತುಣುಕುಗಳನ್ನು ಗಿರಿಜನರು ಹೇಳುತ್ತಾರೆ. ನೇಸರ ನೋಡು,ನೇಸರ ನೋಡು ‘ ಎಂಬ ರಮ್ಯ ಹಾಡು ಹೊಂದಿರುವ ಕಾಕನ ಕೋಟೆ ಸಿನಿಮಾ ನೋಡಿದ್ದವರಿಗೆ ಕಾಕನ ಕೋಟೆಯ ವೈಭವ ಗೊತ್ತಾಗುತ್ತದೆ. ಇಂತಹ ದೈರ್ಯಶಾಲಿ ಗಿರಿಜನರು ಇಂದು ಅತಂತ್ರರಾಗಿದ್ದಾರೆ.

ಆದಿವಾಸಿಗಳು,ಜೇನು ಕರುಬರು, ಬೆಟ್ಟಕುರುಬರನ್ನು ಕಾಡಿನಿಂದ ಎತ್ತಂಗಡಿಮಾಡಿದ ಮೇಲೆ ಕಾಡಂಚಿನಲ್ಲಿ ಪುನರ್ವಸತಿ ಕಲ್ಪಿಸಿದಾಗ ನೆಲೆನಿಂತ ಕಾಡಿನ ಜಾnನವೂ ಇರದ, ನಾಡಿನ ನಾಗರಿಕತೆಯ ಗಂಧಗಾಳಿಯೂ ಗೊತ್ತಿಲ್ಲದಂತಿದ್ದಾರೆ.

ಇದು ಈ ತಲೆಮಾರಿನ ಮಕ್ಕಳ ತ್ರಿಶಂಕು ಸ್ಥಿತಿ. ಇಂತಹ ಕಾಡಿನ ಕುಸುಮಗಳ ಅತಂತ್ರ ಬದುಕನ್ನು ಕಂಡ ನಮಗೆ “ಅಭಿವೃದ್ಧಿ’ಯ ಇನ್ನೊಂದು ಮುಖ ಗೋಚರಿಸಿತು.

ಎಪ್ಪತ್ತರ ದಶಕದಲ್ಲಿ ಹೆಗ್ಗಡದೇವನ ಕೋಟೆ ತಾಲೂಕು ಒಂದರಲ್ಲೇ ಮೂರು ಅಣೆಕಟ್ಟುಗಳನ್ನು ಕಟ್ಟಲಾಯಿತು. ನುಗು, ತಾರಕ, ಕಬಿನಿ ಅಣೆಕಟ್ಟುಗಳು. ಇದರಲ್ಲಿ ಕಬಿನಿ ದೊಡ್ಡದು. ಇದರೊಂದಿಗೆ ಆದಿವಾಸಿ ಗಿರಿಜನರ ಬದುಕು ಮುಳುಗಡೆಯಾಯಿತು.

ಕಬಿನಿ ಹಿನ್ನೀರು ಚಾಚಿಕೊಂಡಿರುವ 61 ಚ.ಕಿ.ಮೀ. ವ್ಯಾಪ್ತಿಯ 14 ಗಿರಿಜನರ ಹಾಡಿಯ ಸಾವಿರ ಕುಟುಂಬಗಳು ಅತಂತ್ರವಾದವು. ಒಟ್ಟು 22 ಹಳ್ಳಿಗಳು ಮುಳುಗಡೆಯಾದವು. ಹಳ್ಳಿಗಳ ಕಂದಾಯ ಭೂಮಿಯ ವಿಸ್ತೀರ್ಣ 9 ಸಾವಿರ ಎಕರೆಗಳು. ಪರ್ಯಾಯವಾಗಿ ಇವರಿಗೆ ಹದಿನಾಲ್ಕುಸಾವಿರ ಎಕರೆ ಪ್ರದೇಶವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಅರಣ್ಯಭೂಮಿಯೂ ಸೇರಿದೆ. ಆದರೆ ಆದಿವಾಸಿಗಳಿಗೆ ಸೇರಬೇಕಿದ್ದ ಭೂಮಿ ನ್ಯಾಯಯುತವಾಗಿ ಸಿಗಲಿಲ್ಲ. ಕೆಲವರಿಗೆ ಮಾತ್ರ ಭೂಮಿ ಮಂಜೂರಾತಿ ಸಿಕ್ಕಿದೆ. ಆ ಭೂಮಿ ಇಂದು ಹೊಸಹಳ್ಳಿ ಹಾಡಿ, ಅಣ್ಣೂರು ಹಾಡಿ,ಮಂಚೇಗೌಡನ ಹಾಡಿ ಹೀಗೆ ವಿವಿಧ ಹಾಡಿಗಳಲ್ಲಿ ಹಂಚಿ ಹರಿದುಹೋಗಿದೆ.

ಕಾಡುಮೇಡು ಅಲೆಯುತ್ತಾ, ಹೊಳೆಕಂಡಲ್ಲಿ ಈಜುತ್ತಾ ಪ್ರಕೃತಿಯ ನಿಗೂಢಗಳ ಜೊತೆಗೆ ಜೀಸುತ್ತಾ ಸ್ವತ್ಛಂದವಾಗಿದ್ದವರನ್ನು ನಾಡಿನ ಸಂಪರ್ಕಕ್ಕೆ ತಂದು ಅವರಿಗೆ ನಾಗರಿಕತೆಯನ್ನು ಕಲಿಸದ, ನಾಲ್ಕುಗೋಡೆಗಳ ಒಳಗಿನ ಶಾಲೆಯೆಂಬ ಪಂಜರದಲ್ಲಿ ಬಂಧಿಸಿ ನೀರಿನಿಂದ ಹೊರತೆಗೆದ ಮೀನಿನಂತೆ ಅವರ ಬದುಕು ಅಯೋಮಯವಾಗಿದೆ.

ಕಾಡಿನಿಂದ ಹೊರಬಂದ ಆದಿವಾಸಿಗಳಲ್ಲಿ ಕೆಲವರು ಪ್ರಯೋಗಶೀಲ ರೈತರಾಗಿ ಯಶಸ್ವಿಯಾಗಿದ್ದಾರೆ. ಕಳೆದ ಮುವತ್ತು ವರ್ಷಗಳಿಂದ ಕಾಳು ಮೆಣಸು ಬೆಳೆಯುತ್ತಿದ್ದಾರೆ ಎಂದು ಗೆಳೆಯ ಕ್ಷೀರಸಾಗರ ಹೇಳಿದಾಗ ನಮಗೆ ಆಶ್ಚರ್ಯವಾಯಿತು. ಕುತೂಹಲದಿಂದ ಇದನ್ನು ಕಾಣಲು ಹಾಡಿಗೆ ಹೊರಟು ನಿಂತಾಗ ಸಹಜ ಕೃಷಿಯ ಬಗ್ಗೆ ಆಸಕ್ತಿ ಇರುವ ನಮ್ಮ ತಂಡವನ್ನು ಕೋಟೆಯಲ್ಲಿ ಆದಿವಾಸಿ ಹೋರಾಟಗಾರ ಸೋಮಣ್ಣ, ನಿಸರ್ಗ ಸಿದ್ದರಾಜು ಕೂಡಿಕೊಂಡರು. ಎನ್‌.ಬೇಗೂರು ವ್ಯಾಪ್ತಿಗೆ ಸೇರಿದ ಹೊಸಹಳ್ಳಿ ಹಾಡಿಯನ್ನು ಕಚ್ಚಾರಸ್ತೆಯಲ್ಲಿ ಏರುತ್ತಾ ಇಳಿಯುತ್ತಾ ಸಾಗಿದ ನಮ್ಮ ಕಾರು ಕಡೆಗೂ ಹಾಡಿ ತಲುಪಿತು. 

ಕಾಳು ಮೆಣಸು ಬೇಸಾಯ ಕಾಣಲು ಹೋದವರಿಗೆ ಎದುರಿಗೆ ಮೊದಲು ಕಂಡದ್ದು ಮಕ್ಕಳ ಸೈನ್ಯ. ಅವರನ್ನು ಕಂಡು ಮಾತಿಗಿಳಿದಾಗ ಕಾಡಂಚಿನಲ್ಲಿ ಕಮರುತ್ತಿರುವ ಕುಸುಮಗಳ ಇನ್ನೊಂದು ಬರ್ಬರ ಬದುಕಿನ ಅನಾವರಣವಾಯಿತು.

ಕೆಂಚ,ಬೀರ,ರಾಮ,ರತ್ನಿ, ಕುಸುಮ,ಗಿಣಿಯ, ಮಾರ ಇಷ್ಟು ಮಕ್ಕಳನ್ನು ಮಾತನಾಡಿಸಿ..
ಲೋ ನೀವ್‌ ಶಾಲೆಗೆ ಹೋಗಲ್ವಾ ಅಂದರೆ.. ಹೋಗ್ತಿàವಿ, ಇಂವಾ ಸಿಕ್ಸುತು, ಇಂವಾ ಸಿಕ್ಸಸ್ತು. ಅವಳು ಎಂಟನೇತರಗತಿ ಓದಿ ಶಾಲೆ ಬಿಟ್ಟಿದ್ದಾಳೆ. ಅವನು ಎಸ್ಸೆಸ್ಸೆಲ್ಸಿವರೆಗೆ ಓದಿದ್ದಾನೆ ಎನ್ನುತ್ತವೆ. ಬಹುತೇಕ ಎಲ್ಲ ಮಕ್ಕಳು ಶಿಕ್ಷಣ ಮುಂದುವರಿಸದೆ ಅರ್ಧಕ್ಕೇ ಶಾಲೆ ಬಿಟ್ಟವರೇ.

ಕಾಳು ಮೆಣಸಿನ ತೋಟದಲ್ಲಿ ಕೆಲಸಮಾಡುತ್ತಿದ್ದ ಕೃಷ್ಣ, ಕರಿಯ, ಮಹದೇವ, ರಾಮಕುಮಾರ್‌ ಅವರನ್ನು ಕೇಳಿದರೆ ಅವರೂ ಕೂಡ ಶಾಲೆಗೆ ಹೋಗಿ ಅರ್ಧಕ್ಕೆ ಬಿಟ್ಟವರೇ. ತಮಗೆ ಜಮೀನಿನ ಕೆಲಸವೇ ಇಷ್ಟ. ತೋಟ ಅಗೆತ ಮಾಡೋದು, ಉಳುಮೆ ಮಾಡೋದು, ಗಿಡ ಸವರೋದು,ಮೆಣಸು ಬೆಳೆಸೋದೆ ಖುಷಿ ಎನ್ನುತ್ತಾರೆ.

ರಾಜ್ಯದಲ್ಲಿ ಒಟ್ಟು 122 ಆಶ್ರಮ ಶಾಲೆಗಳಿವೆ. ಸುಮಾರು ಹನ್ನೆರಡು ಸಾವಿರ ಮಕ್ಕಳು ಅಲ್ಲಿ ಕಲಿಯುತ್ತಿದ್ದಾರೆ. ವಿದ್ಯಾ ಇಲಾಖೆಯು ಶಿಕ್ಷಣವನ್ನು ಕಲಿಸುವುದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಆದಿವಾಸಿಗಳು, ಗಿರಿಜನರು ಇರುವ ಕಡೆಗೆ ವಿದ್ಯಾ ಇಲಾಖೆ ಕೈ ಚಾಚುವುದಿಲ್ಲ. ಏಕೆಂದರೆ ಈ ಗಿರಿಜನರ ಹಾಡಿ, ಸಮಾಜ ಕಲ್ಯಾಣ ಇಲಾಖೆಯ ಸುಪರ್ದಿಗೆ ಬರುತ್ತದೆ.  ಆದಿವಾಸಿ, ಗಿರಿಜನರ ಅಭಿವೃದ್ಧಿ ಹೆಸರಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತವೆ. ಆದರೆ ಹಾಡಿಗಳ ಮಕ್ಕಳನ್ನು ಕಂಡು ಮಾತನಾಡಿಸಿದರೆ ಈ ಹಣವೆಲ್ಲಾ ಸದುಪಯೋಗವಾಗಿದೆ ಎಂಬುದಕ್ಕೆ ಸಣ್ಣ ಸಾಕ್ಷಿಯೂ ಸಿಗುವುದಿಲ್ಲ, ಹಾಗಾದರೆ ಅಭಿವೃದ್ಧಿಯ ಹೆಸರಿನಲ್ಲಿ ಬಿಡುಗಡೆಯಾದ ಹಣ ಯಾರ ಜೇಬು ಸೇರಿತು? ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ.

ಕಾಡಿನ ಒಳಗೆ ಮತ್ತು ಅಂಚುಗಳಲ್ಲಿರುವ ಹಾಡಿಗಳ ಸಮೀಪ ಇರುವ ಆಶ್ರಮ ಶಾಲೆ ಮತ್ತು ವಿವೇಕಾನಂದ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಗಳಲ್ಲಿ ಸಾಮಾನ್ಯವಾಗಿ ಒಂದರಿಂದ ಏಳನೇ ತರಗತಿವರೆಗೆ ಮಾತ್ರ ಕಲಿಸಲಾಗುತ್ತದೆ. ನಂತರ ಪ್ರೌಢಶಾಲೆ ಕಲಿಯಲು ಸ್ವಲ್ಪ ದೂರಕ್ಕೆ ಹೋಗಬೇಕು. ಇದು ಆದಿವಾಸಿ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಲು ಇರುವ ಪ್ರಮುಖ ಕಾರಣಗಳಲ್ಲಿ ಒಂದು.

ಆಶ್ರಮ ಶಾಲೆಗಳಲ್ಲಿ ಶಿಕ್ಷಣ ಮತ್ತು ವಾಸ್ತವ್ಯ ಇದ್ದರೂ ಇಲ್ಲಿ ಉಳಿಯುವ ಮಕ್ಕಳ ಸಂಖ್ಯೆ ಕಡಿಮೆ. ಇದಕ್ಕೆ ಕಾರಣ,  ಆದಿವಾಸಿ ಮಕ್ಕಳು ತಾಯಿಯ ಆಸರೆ ಬಿಟ್ಟು ಇರಲು ಇಷ್ಟಪಡುವುದಿಲ್ಲ. ಶಾಲೆ ಬಿಟ್ಟ ನಂತರ ಮನೆಗೆ ಬರುವುದೆಂದರೆ ಅವರಿಗೆ ಸ್ವಾತಂತ್ರ ಸಿಕ್ಕಂತೆ. ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗುವುದಕ್ಕಿಂತ ಸ್ವತ್ಛಂದವಾಗಿರಲು ಬಯಸುತ್ತಾರೆ ಎನ್ನುತ್ತಾರೆ ಆದಿವಾಸಿಗಳ ಸಮಸ್ಯೆಗಳ ನಿವಾರಣೆಗೆ ಕಳೆದ ಮೂರು ದಶಕಗಳಿಂದಲ್ಲೂ ಹೋರಾಟ ಮಾಡುತ್ತಾ ಬಂದಿರುವ ಗೆಳೆಯ ಕ್ಷೀರಸಾಗರ.

ಹೈಸ್ಕೂಲು ಹಾಡಿಯಿಂದ ದೂರ ಇರುವುದು. ಮಕ್ಕಳು ಏಳನೇ ತರಗತಿ ಓದಿದ ನಂತರ ಶಾಲೆಗೆ ಕಳಿಸುವ ಬದಲು ಮನೆ ಕೆಲಸದಲ್ಲಿ, ನೆರವಾಗಲೆಂದು ಮಕ್ಕಳನ್ನು ಕೂಲಿಗೆ ಕಳಿಸುವುದು ಇಲ್ಲಿ ಸಾಮಾನ್ಯ. ಮತ್ತೂಂದು ಸಂಗತಿ ಏನೆಂದರೆ, ಆಶ್ರಮ ಶಾಲೆಯ ನಂತರ ಕೆಲವರು ಎಸ್‌ಎಸ್‌ಎಲ್‌ಸಿ ಪಾಸುಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂದರೆ ಅವರಿಗೆ ಯಾವುದೇ ನೌಕರಿ ಸಿಕ್ಕಿಲ್ಲ. ಹಾಗಾಗಿ ಇತರರಿಗೆ ಹೋಲಿಸಿದರೆ ಗಿರಿಜನರಲ್ಲಿ ಎಸ್‌ಎಸ್‌ಎಲ್‌ಸಿ ಓದಿದವರ ಸಂಖ್ಯೆ ಕಡಿಮೆ. ಪ್ರಾಥಮಿಕಶಾಲೆಯ ನಂತರ ಸಮಾಜಕಲ್ಯಾಣ ಇಲಾಖೆ ನಡೆಸುವ ಆಶ್ರಮಶಾಲೆಗಳ ಶಿಕ್ಷಕರು ಗಿರಿಜನರ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಗಿರಿಜನ, ಆದಿವಾಸಿಗಳ ಸಂಸ್ಕೃತಿ ಆಚಾರವಿಚಾರಗಳನ್ನು ತಿಳಿಯದವರೇ ಅಧ್ಯಾಪಕರಾಗಿರುತ್ತಾರೆ. ಹೀಗಾಗಿ ಆದಿವಾಸಿಗಳಲ್ಲಿ ಶಿಕ್ಷಣ ಮಹತ್ವದ ವಿಷಯವಾಗಿಲ್ಲ.

ಹೆಡಿಯಾಲಕ್ಕೆ ಸೇರಿದ ಕೊತ್ತನಹಾಡಿ ಸುತ್ತಮುತ್ತ ಆದಿವಾಸಿ ಜನಾಂಗಕ್ಕೆ ಸೇರಿದ ಬಾಲ ಕಾರ್ಮಿಕರೇ ಹೆಚ್ಚಾಗಿ ಜಮೀನುಗಳಲ್ಲಿ ದುಡಿಯುತ್ತಾರೆ. ಸಣ್ಣ ವಯಸ್ಸಿಗೇ ದುಶ್ಚಟಗಳ ದಾಸರಾದ ಮಕ್ಕಳು ಕುಡಿತ,ಧೂಮಪಾನಕ್ಕೆ ಬಲಿಯಾಗಿ ಇಡೀ ಜನಾಂಗವೇ ನಾಶದ ಹಂತ ತಲುಪಿದೆ.

ಅಭಿವೃದ್ಧಿ ಎಂಬ ರಥದ ಗಾಲಿಗೆ ಸಿಲುಕಿ ಅಪಾಯದ ಅಂಚಿನಲ್ಲಿರುವ ಇಂತಹ ಕಾಡಿನ ಕುಸುಮಗಳ ಬದುಕು ಅರಳಬೇಕು.ಆದಿವಾಸಿಗಳಲ್ಲಿ ಇರುವ ಹತ್ತಾರು ಜನಾಂಗಗಳು ನಾಶದ ಅಂಚಿನಲ್ಲಿವೆ. ಅವರನ್ನು ಉಳಿಸಿ ಬೆಳೆಸಿ ಕೊಳ್ಳಲು ಸರಕಾರಗಳು,ನಾಗರಿಕ ಸಮಾಜ ಮುಂದಾಗಬೇಕು. 2006 ರಲ್ಲಿ ಅರಣ್ಯವಾಸಿ ಗಿರಿಜನರಿಗೆ ಅರಣ್ಯದ ಮೇಲಿನ ಹಕ್ಕನ್ನು ದೊರಕಿಸಿಕೊಡುವ ಕಾಯ್ದೆ ಬಂದಿದ್ದರೂ ಹಲವಾರು ಕಾರಣಗಳಿಂದ ಇದು ಕಾರ್ಯರೂಪಕ್ಕೆ ಬಂದಿಲ್ಲ. ಬಹುತೇಕ ಗಿರಿಜನರು ಹಕ್ಕಿದ್ದರು ಭೂಮಿ ಪಡೆಯುವಲ್ಲಿ ಫ‌ಲರಾಗಿದ್ದಾರೆ. ಹೋರಾಟದ ನಡುವೆಯೇ ಬದುಕಿರುವ ಗಿರಿಜನ ಮಕ್ಕಳೆಂಬ ಕಾಡ ಕುಸುಮಗಳು ಬದುಕು ನಮ್ಮೆಲ್ಲರ ಕಣ್ಮುಂದೆಯೇ ಕಮರಿ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಅಂಥದೊಂದು ದುರ್ಭರ ಪ್ರಸಂಗ ಎದುರಾಗುವ ಮೊದಲೇ ಗಿರಿಜನರ ಗೋಳು ಆಲಿಸಲು, ಅವರ ಬದುಕಿಗೆ ಹೊಸ ರೂಪು ಕೊಡಲು ಮುಂದಾಗಬೇಕಾದ ಹೊಣೆ ಎಲ್ಲರದ್ದೂ ಆಗಿದೆ. 

ಚಿನ್ನಸ್ವಾಮಿ ವಡ್ಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next