Advertisement

ಕಾಕಾಲ್‌ ಕೈರುಚಿ ಆಗ್ತದೆ ಬಾಯಿ ರುಚಿ!

05:57 AM Feb 23, 2019 | |

ದಿನಕ್ಕೊಂದು ಬಗೆಯ ವಿಶೇಷ ತಿಂಡಿಗಳನ್ನು ಪರಿಚಯಿಸಿ, ಆ ಮೂಲಕವೇ ಗ್ರಾಹಕರ ಮನ ಗೆದ್ದಿರುವುದು ಕಾಕಾಲ್‌ ಕೈ ರುಚಿ ಹೋಟೆಲ್‌ನ ಹೆಗ್ಗಳಿಕೆ.

Advertisement

ಬೆಂಗಳೂರಿನಲ್ಲಿ ವಿಭಿನ್ನ ರುಚಿ, ವೈವಿಧ್ಯಗಳ ಆಹಾರ ಶೈಲಿಯನ್ನು ಪರಿಚಯಿಸುವ ಹಲವು ಉಪಾಹಾರ ಮಂದಿರಗಳಿವೆ. ಸಾಮಾನ್ಯವಾಗಿ ಯಾವುದೇ ಹೋಟೆಲ್‌ ಆಗಲಿ, ಗ್ರಾಹಕರ ಆಸಕ್ತಿ ಸಾಮಾನ್ಯ ತಿಂಡಿಗಳತ್ತ ಹೋಗುವುದಿಲ್ಲ. ಆದರೆ ಒಂದೇ ಕಡೆ ವೈವಿಧ್ಯಮಯ ಆಹಾರ ಸಿಗುತ್ತದೆ ಎಂದರೆ ಎಷ್ಟೇ ದೂರವಾದರೂ ಗ್ರಾಹಕರು ಹುಡುಕಿಕೊಂಡು ಹೋಗುತ್ತಾರೆ. ವಿಶೇಷ ತಿಂಡಿಗಳನ್ನು ಪರಿಚಯಿಸಿ, ಆ ಮೂಲಕವೇ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಹೋಟೆಲ್‌ ಕಾಕಾಲ್‌ ಕೈರುಚಿ.  ಇದರ ಮಾಲೀಕರು ಛಾಯಾ ಕಾಕಾಲ್‌ ಮತ್ತು ಸತೀಶ್‌ ಕಾಕಾಲ್‌ ದಂಪತಿ.  ಇವರು ಮೂಲತಃ ಸಾಗರದ ಹೆಗ್ಗೋಡಿನವರು. ಇವರಿಗೆ ಮೊದಲಿನಿಂದಲೂ ಹೋಟೆಲ್‌ ನಂಟು ಇದೆ.  ಈ ಹಿಂದೆ ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆಯುತ್ತಿದ್ದ ಕಲಾವಿದರಿಗಾಗಿ ಇವರ ತಂದೆ ಪ್ರತಿದಿನ ರುಚಿಕರವಾದ ಫ‌ಲಹಾರ ಮತ್ತು ಊಟದ ವ್ಯವಸ್ಥೆ ಮಾಡುತ್ತಿದ್ದರು. ಅಂದಿನಿಂದಲೂ ಇವರ ಕೈರುಚಿಗೆ ಸೋಲದವರಿಲ್ಲ.

ಕಾಕಾಲ್‌ ದಂಪತಿ, ಬೆಂಗಳೂರಿಗೆ ಬಂದ ಮೇಲೆ 2001ರಲ್ಲಿ  ಕ್ಯಾಟರಿಂಗ್‌ ಸರ್ವಿಸ್‌ ಅನ್ನು ಆರಂಭಿಸಿ, ಸಾಫ್ಟ್ವೇರ್‌ ಕಂಪನಿಗಳಿಗೆ ಊಟ ತಿಂಡಿ ಸರಬರಾಜು ಮಾಡುತ್ತಿದ್ದರು.  ನಂತರ 2010ರಲ್ಲಿ ಆರ್‌.ಬಿ.ಐ.ಲೇಔಟ್‌ ಜೆ.ಪಿ.ನಗರದಲ್ಲಿ ಆರಂಭಿಸಿದ “ಕಾಕಾಲ್‌ ಕೈರುಚಿ’ ಹೋಟೆಲ್‌, ಆಹಾರ ವೈವಿಧ್ಯತೆಯಿಂದ ಸಾವಿರಾರು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸತೀಶ್‌ ಮೂಲತಃ ಎಲೆಕ್ಟ್ರಾನಿಕ್‌ ಇಂಜಿನಿಯರ್‌. ಆದರೂ ಇವರನ್ನು ಆಕರ್ಷಿಸಿದ್ದು ಹೋಟೆಲ್‌ ಉದ್ಯಮ. 

ಏನೇನು ಸ್ಪೆಷಲ್‌ ಗೊತ್ತಾ?
ಕಡುಬು, ಹಾಲುಬಾಯಿ, ಆಲೂಬೋಂಡ, ಬೋಂಡಾ ಸೂಪ್‌, ತರಕಾರಿ ಪಾಯಸಗಳು, ಪಕೋಡಾ, ರವಾ ವಡೆ, ಮಂಗಳೂರು ಬನ್ಸ್‌, ಚೋಲೆ ಬಟೂರ, ಕ್ಯಾರೆಟ್‌ ಹಲ್ವ, ಕೋಂಬೋ (ಕೇಸರಿಬಾತ್‌, ಖಾರಾಬಾತ್‌, ಮಸಾಲ ದೋಸಾ, ಒಂದು ಇಡ್ಲಿ, ಒಂದು ವಡಾ, ಕಾಫಿ), ಅಕ್ಕಿರೊಟ್ಟಿ, ಆಲೂ ಪರೋಟ, ನೀರು ದೋಸೆ, ಕೇರಳ ಪರೋಟ, ರವಾ ಆನಿಯನ್‌ ದೋಸೆ, ಓಪನ್‌ ದೋಸೆ, ಆನಿಯನ್‌ ಮಸಾಲ ದೋಸೆ, ರಾಗಿ ದೋಸೆ, ಪೈನಾಪಲ್‌ ದೋಸೆ, ಒತ್ತು ಶಾವಿಗೆ, ಅವಲಕ್ಕಿ ಬಾತ್‌. ಜೊತೆಗೆ ಪ್ರತಿದಿನವೂ ಒಂದೊಂದು ವಿಶೇಷ ರೈಸ್‌ ಐಟಂ, ಪಲಾವ್‌, ಪುಳಿಯೊಗರೆ, ರೈಸ್‌ ಬಾತ್‌, ವಾಂಗಿ ಬಾತ್‌ ಇತ್ಯಾದಿ.

ಶುಚಿಯೇ ರುಚಿ
ಇಲ್ಲಿನ ಅಡುಗೆಯಲ್ಲಿ ಯಾವುದೇ ಕೃತಕ ಬಣ್ಣವನ್ನು ಬಳಸುವುದಿಲ್ಲ. ತರಕಾರಿ, ಬೇಳೆ, ದವಸ ಧಾನ್ಯಗಳನ್ನು ನಿಗದಿಪಡಿಸಿದ ಒಂದು ಸ್ಥಳದಲ್ಲಿ ಶುದ್ಧೀಕರಿಸಿ ನಂತರ ಎಲ್ಲಾ ಶಾಖೆಗಳಿಗೆ ರವಾನಿಸಲಾಗುತ್ತದೆ. ಶುಚಿ ಮತ್ತು ರುಚಿಯ ಕಡೆಗೆ ಹೆಚ್ಚಿನ ಗಮನ ಹರಿಸಲು ಇದರಿಂದ ಸಾಧ್ಯವಾಗುತ್ತದೆ. ಎಲ್ಲಾ ಶಾಖೆಗಳಲ್ಲಿ ಒಂದೇ ರುಚಿ, ಗುಣಮಟ್ಟ ಕಾಪಾಡಲು ದೋಸೆ ಹಿಟ್ಟು, ಇಡ್ಲಿ ಹಿಟ್ಟನ್ನು ಒಂದೇ ಕಡೆಯಲ್ಲಿ ತಯಾರಿಸಿ ಬೇರೆ ಬೇರೆ ಶಾಖೆಗಳಿಗೆ ವರ್ಗಾಯಿಸುತ್ತಾರೆ.

Advertisement

ವಿಶೇಷ ಆಫ‌ರ್‌
ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಒಂದು ಆಹಾರ ತೆಗೆದುಕೊಂಡರೆ  ಇನ್ನೊಂದು ಉಚಿತ. 

ಹವ್ಯಕ ಅಡುಗೆ
ಇಲ್ಲಿ ಹವ್ಯಕರ ಅಡುಗೆ ಸ್ಪೆಷಲ್‌. ತಂಬುಳಿ, ಗೊಜ್ಜು ಹುಳಿ, ಚಟ್ನಿ ಹಾಗೂ ಹವ್ಯಕರು ಮಾಡುವ ವಿಶೇಷವಾದ ಖಾದ್ಯಗಳು ಲಭ್ಯ.  

ಹಬ್ಬದೂಟದ ವಿಶೇಷ
ಸಾಂಪ್ರದಾಯಿಕ ಉಡುಗೆ ತೊಟ್ಟ ಕೆಲಸಗಾರರು ಸಂಕ್ರಾಂತಿ , ದೀಪಾವಳಿ, ಗಣೇಶ ಚತುರ್ಥಿ, ಯುಗಾದಿ ಹಬ್ಬಗಳಲ್ಲಿ ಅದಕ್ಕೆ ಸಂಬಂಧಿಸಿದ ಭಿನ್ನ ಭಕ್ಷ್ಯಗಳನ್ನು ಬಡಿಸಲು ಕಾದಿರುತ್ತಾರೆ.  

“ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಆಹಾರದ ಗುಣಮಟ್ಟ ಕಾಪಾಡುವಲ್ಲಿ ಶ್ರಮವಹಿಸುತ್ತೇವೆ. ವೈವಿಧ್ಯಮಯ ಖಾದ್ಯಗಳನ್ನು ಪರಿಚಯಿಸಿ ಗ್ರಾಹಕರನ್ನು ತೃಪ್ತಿಪಡಿಸುವುದೇ ನಮ್ಮ ಗುರಿ’
ಸತೀಶ್‌ ಕಾಕಾಲ್‌

ಸೆಲೆಬ್ರಿಟಿಗಳ ಫೇವರಿಟ್‌
ಸಿನಿಮಾ ತಾರೆಯರಾದ ಶ್ರೀಧರ್‌, ಸುಧಾರಾಣಿ, ದಿಗಂತ್‌ ಅವರಲ್ಲದೆ ರಾಜಕಾರಣಿಗಳೂ ಇಲ್ಲಿನ ರುಚಿಗೆ ಮನಸೋತಿದ್ದಾರೆ. 

ಬಳಕೂರು ವಿ.ಎಸ್‌. ನಾಯಕ 

Advertisement

Udayavani is now on Telegram. Click here to join our channel and stay updated with the latest news.

Next