ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎಸ್ಪಿ ಅಭ್ಯರ್ಥಿ, ಹಾಲಿ ಸಂಸದೆ ತಬಸ್ಸುಂ ಹಸನ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರದೀಪ್ ಚೌಧರಿ ನಡುವೆ ನೇರ ಸ್ಪರ್ಧೆ ಇದೆ. 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಹುಕುಮ್ ಸಿಂಗ್ ಬಿಜೆಪಿ ಸಂಸದರಾಗಿದ್ದರು. ಕಳೆದ ವರ್ಷ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆ ಯಲ್ಲಿ ಎಸ್ಪಿ, ಬಿಎಸ್ಪಿ ಬೆಂಬಲಿತ ರಾಷ್ಟ್ರೀಯ ಲೋಕದಳದಿಂದ (ಆರ್‌ಎಲ್‌ಡಿ )ಸ್ಪರ್ಧಿಸಿದ್ದ ತಬಸ್ಸುಂ ಹಸನ್ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಹುಕುಮ್ ಸಿಂಗ್ ಪುತ್ರಿ ಮ್ರಿಗಾಂಕಾ ಸಿಂಗ್ 44 ಸಾವಿರ ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.
ಎಸ್ಪಿ ಪ್ಲಸ್ ಪಾಯಿಂಟ್: ಉಪಚುನಾವಣೆಯಲ್ಲಿ ಆರ್‌ಎಲ್‌ಡಿಯಿಂದ ಸಂಸದೆಯಾಗಿದ್ದ ತಬಸ್ಸುಂ ಈ ಬಾರಿ ಅಖೀಲೇಶ್‌ರ ಎಸ್ಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಮ್ರಿಗಾಂಕಾ ಸಿಂಗ್ ಬದಲಿಗೆ ಎರಡು ಬಾರಿ ಶಾಸಕರಾಗಿದ್ದ ಪ್ರದೀಪ್ ಚೌಧರಿಗೆ ಬಿಜೆಪಿ ಟಿಕೆಟ್ ನೀಡಿದೆ. ಉ.ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಆರ್‌ಎಲ್‌ಡಿ ಹೊಂದಾಣಿಕೆ ಮಾಡಿಕೊಂಡು ಎಸ್ಪಿಗೆ ಬೆಂಬಲ ಘೋಷಿಸಿವೆ. ಇದು ಬಿಜೆಪಿಗೆ ಕಠಿಣ ಸವಾಲಾಗಿ ಪರಿಣಮಿಸಿದೆ. ಕಳೆದ ಬಾರಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಮತವಿಭಜನೆಯಿಂದ ಅಭೂತಪೂರ್ವ ಜಯ ಸಾಧಿಸಿದ್ದ ಕಮಲ ಪಡೆಗೆ ಮೋದಿ ಅಲೆ ಕ್ಷೀಣಿಸಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ನಿರ್ಣಾಯವಾಗಿರುವುದಿಂದ ಮುಸ್ಲಿಂ ಅಭ್ಯರ್ಥಿಗೆ ನೆರವಾಗಲಿದೆ.
ಬಿಜೆಪಿ ಪ್ಲಸ್ ಪಾಯಿಂಟ್: ಕೈರಾನಾ ಕ್ಷೇತ್ರವು ಮೊದಲಿಗೆ ಬಿಜೆಪಿ ಹಿಡಿತದಲ್ಲಿತ್ತು. ಹುಕುಮ್ ಸಿಂಗ್ ನಿಧನದಿಂದ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದೆ. ಇದರ ಜೊತೆಗೆ ಬಿಎಸ್ಪಿ-ಎಸ್ಪಿ, ಆರ್‌ಎಲ್‌ಡಿ ದೋಸ್ತಿಯಾಗಿವೆ. ಇದಕ್ಕೆ ಪ್ರತಿತಂತ್ರ ಹಣೆದಿರುವ ಬಿಜೆಪಿಯು, ಎಸ್ಪಿಯಿಂದ 6 ಬಾರಿ ಶಾಸಕರಾಗಿದ್ದ ಮಾಜಿ ಸಚಿವ ಚೌಧರಿ ವಿರೇಂದ್ರ ಸಿಂಗ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ. ಇವರು ಗುಜ್ಜರ್ ಸಮುದಾದ ಪ್ರಬಲ ನಾಯಕರಾಗಿದ್ದಾರೆ. ಹುಕುಮ್ ಕೂಡ ಗುಜ್ಜರ್‌ಗೆ ಸೇರಿದ್ದರು.
ಜಾತಿ ಲೆಕ್ಕಾಚಾರ: ಕೈರಾನಾದಲ್ಲಿ 10 ಲಕ್ಷ ಜನಸಂಖ್ಯೆ ಪೈಕಿ ಮುಸ್ಲಿಂ-5.8 ಲಕ್ಷ, ದಲಿತ-2.5 ಲಕ್ಷ, ಜಾಟ್-1.7 ಲಕ್ಷ, ಗುಜ್ಜಾರ್-1.55 ಲಕ್ಷ ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಗಣನೀಯವಾಗಿವೆ. ಹಿಂದುಗಳನ್ನು ಬಲವಂತವಾಗಿ ಹೊರದಬ್ಬಲಾಗುತ್ತಿದೆ, ಕೈರಾನಾ “ಮಿನಿ ಕಾಶ್ಮೀರ’ ಆಗುತ್ತಿದೆ ಎಂಬ ಅಪವಾದಗಳು ಕೇಳಿ ಬಂದಿವೆ. ಈ ಕುರಿತು ಹಿಂದೆ ಹುಕುಮ್ ಸಿಂಗ್ ಅವರು ಅಂಕಿ ಅಂಶಗಳೊಂದಿಗೆ ದಾಖಲೆ ಬಿಡುಗಡೆ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.