Advertisement

ಕೈಕೊಟ್ಟ ವರುಣ ದೇವ: ಕಂಗಾಲಾದ ರೈತ

02:21 PM Nov 15, 2018 | |

ಮಾಲೂರು: ಪ್ರಸಕ್ತ ವರ್ಷದಲ್ಲಿ ವರುಣ ದೇವ ಕೈಕೊಟ್ಟ ಕಾರಣ ರೈತರ ಪ್ರಮುಖ ಆಹಾರ ಧಾನ್ಯವಾಗಿರುವರಾಗಿ ಮತ್ತು ರಾಸುಗಳ ಒಣ ಹುಲ್ಲಿನ ಅಭಾವವನ್ನು ಎದುರಿಸುತ್ತಿರುವ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಮಳೆಗಾಲದ ಆರಂಭದಲ್ಲಿ ಮುಂಗಾರು ಹಂಗಾಮಿನ ಮಳೆಗಳು ವಾಡಿಕೆ ಮಳೆಗಿಂತ ಕಡಿಮೆಯಾಗಿತ್ತು. ಅಲ್ಲದೇ, ಸಕಾಲದಲ್ಲಿ ಮಳೆ ಬಾರದ ಕಾರಣ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದವು. ಬಹು ಪಾಲು ರೈತರು ಬಿತ್ತನೆಯನ್ನೇ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ, ರೈತಾಪಿ ವರ್ಗದ ಪ್ರಮುಖ ಆಹಾರ ಧಾನ್ಯವಾದ ರಾಗಿ ಬೆಳೆ ಬಿತ್ತನೆ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ಆದರೂ, ಅಲ್ಪಸ್ವಲ್ಪ ಬಿತ್ತನೆಯಾಗಿರುವ ರಾಗಿ ಬೆಳೆ ಕೈ ತಪ್ಪುವ ಭೀತಿಯಲ್ಲಿದ್ದಾರೆ ರೈತರು.

Advertisement

ರಾಗಿಯೂ ಇಲ್ಲ, ರಾಸುಗಳಿಗೆ ಹುಲ್ಲೂ ಇಲ್ಲ: ಇದೇ ರೀತಿ, ರಾಗಿ ಬಿತ್ತನೆಯಿಂದ ರಾಸುಗಳಿಗೆ ಸಮೃದ್ಧವಾದ ಒಣ ಹುಲ್ಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬೇಸಾಯದಲ್ಲಿ ಉಂಟಾಗಿರುವ ನಷ್ಟದಿಂದ ರಾಗಿಯೂ ಇಲ್ಲ ಮತ್ತು ರಾಸುಗಳಿಗೆ ಹುಲ್ಲೂ ಸಿಗದಂತಾಗಿದೆ. ಇದರಿಂದ, ರೈತರ ಪರಿಸ್ಥಿತಿ ಡೋಲಾಯಮಾನವಾಗಿದೆ. 

ಕೈಕೊಟ್ಟ ಹಿಂಗಾರು ಮಳೆ, ಒಣಗಿದ ಬೆಳೆ: ಪೂರ್ವ ಮುಂಗಾರಿನ ಮಳೆಗಳು ಸ್ವಲ್ಪ ಮಟ್ಟಿಗೆ ಸುರಿದಿದ್ದರಿಂದ ರೈತರಲ್ಲಿ ಉಲ್ಲಾಸ ಮೂಡಿಸಿದ್ದವು. ಇದರಿಂದ ರಾಸುಗಳನ್ನು ಹೊಂದಿರುವ ಕೆಲ ರೈತರು ಹೊಲಗಳಲ್ಲಿ ತಕ್ಕಮಟ್ಟಿಗಿನ ಬಿತ್ತನೆ ಮಾಡಿದ್ದರು. ಆದರೆ, ನಂತರ ಸುರಿದ ಅಲ್ಪಸ್ವಲ್ಪ ಮಳೆಯಲ್ಲಿಯೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ರೈತರು ರಾಗಿ ಬೇಸಾಯದ ಜೊತೆಗೆ ಮಿಶ್ರ ಬೇಸಾಯವಾಗಿ ಸಾಲು ಪದ್ಧತಿಯಲ್ಲಿ ಅವರೆ, ತೊಗರಿ ಮತ್ತು ಅಲಸಂದಿಗಳನ್ನು ಬಿತ್ತುವ ಕಾರ್ಯ ಮಾಡಿದ್ದರು. ಪ್ರಸ್ತುತ ಬಿತ್ತಿರುವ ಬಹುಪಾಲು ಬೆಳೆ ಕಾಳು ಕಟ್ಟುವ ಹಂತದಲ್ಲಿದ್ದು, ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಕಾಳುಕಟ್ಟುವ ಹಂತದಲ್ಲಿರುವ ರಾಗಿ, ಅವರೆ, ತೊಗರಿ ಮತ್ತು ಇತರೇ ಬೆಳೆಗಳು ಸಂಪೂರ್ಣವಾಗಿ ಒಣಗಲು ಆರಂಭವಾಗಿವೆ.

ಕೈತಪ್ಪಿದ ತೊಗರಿ ಬೆಳೆ: ಪ್ರಸಕ್ತ ವರ್ಷದಲ್ಲಿ ನ.6 ರಿಂದ ರಾಜ್ಯದಲ್ಲಿ ಹಿಂಗಾರು ಮಳೆಗಳು ಆರಂಭವಾಗುತ್ತದೆ ಎಂಬ ಹವಾಮಾನ ಇಲಾಖೆ ಮಾಹಿತಿ ಆಧರಿಸಿ ಬಿತ್ತನೆ ಮಾಡಲಾಗಿರುವ ರಾಗಿ ಬೆಳೆ ಮತ್ತು ಸಾಲು ಪದ್ಧತಿಯಲ್ಲಿ ಅವರೆ,ಅಲಸಂದಿ ಮತ್ತು ತೊಗರಿ ಬೆಳೆಗೆ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದ ರೈತನಿಗೆ ಹಿಂಗಾರು ಮಳೆ ಹೊಡೆತದಿಂದ ದಿಕ್ಕು ತೋಚದಂತಾಗಿದೆ.

ಸಕಾಲ ದಲ್ಲಿ ರಾಗಿ ಬಿತ್ತಲಾಗದ ರೈತರು, ಕೊನೆಯ ಘಳಿಗೆ ಯಲ್ಲಿ ಹುರುಳಿಯ ಬಿತ್ತನೆಗೆ ಮುಂದಾಗಿದ್ದು, ಪ್ರಸ್ತುತ ಮಳೆ ಕೊರತೆಯಿಂದ ಹುರುಳಿ ಬೆಳೆ ಕೈತಪ್ಪುವಂತಾಗಿದೆ. ಇದರಿಂದ ತೀವ್ರ ನಷ್ಟದ ಹಾದಿಯಲ್ಲಿ ರುವ ರೈತರು, ಆಳು, ಕಾಳುಗಳ ಜತೆ ಶ್ರಮ ವಹಿಸಿ ಬಿತ್ತನೆಗಾಗಿ ಖರ್ಚು ಮಾಡಿರುವ ಹಣವೂ ಕೈಗೆಟುವುದು ಅಸಾಧ್ಯವಾಗಿದ್ದರಿಂದ, ನಷ್ಟ ಅನುಭವಿಸುವಂತಾಗಿದೆ.

Advertisement

ಕೈಕೊಟ್ಟ ಚಂಡ ಮಾರುತ: ಹಿಂಗಾರು ಮಳೆಗಳು ಕೈಕೊಟ್ಟ ಬೆನ್ನಲ್ಲೇ ಪ್ರತಿ ವರ್ಷ ಅನಿರೀಕ್ಷಿತವಾಗಿ ವಾಯುಭಾರ ಕುಸಿತದಿಂದ ಬರುವ ಚಂಡ ಮಾರುತದ ಪ್ರಭಾವದ ಮಳೆಗಳೂ ರೈತರ ಕೈಹಿಡಿಯದ ಕಾರಣ ಬೇಸಾಯದಲ್ಲಿ ರೈತರು ನಷ್ಟ ಅನುಭವಿಸುವಂತಾಗಿದೆ. ಕಳೆದ ಆ.10ರಿಂದ ಇದುವರೆಗೂ ತಾಲೂಕಿ ನಲ್ಲಿ ಒಂದೇ ಒಂದು ಹನಿ ಮಳೆಯಾಗದ ಕಾರಣ ರಾಗಿ, ಹುರುಳಿ, ಅವರೆ, ತೊಗರಿ ಮತ್ತು ಅಲಸಂದಿ ಬೆಳೆಗಳು ಸಂಪೂರ್ಣ ಒಣಗುತ್ತಿವೆ.

ಪರಿಹಾರಕ್ಕೆ ಕಾಯುತ್ತಿರುವ ರೈತ: ಸರಕಾರಗಳು ರೈತರ ಬೆಳೆ ನಷ್ಟದ ಪರಿಸ್ಥಿತಿಯನ್ನು ಗಮನಿಸಿ ಬೆಳೆ ನಷ್ಟ ಪರಿಹಾರ ನೀಡುವ ಭರವಸೆ ನೀಡಿದೆಯಾದರೂ ಇಲ್ಲಿಯವರೆಗೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪರಿಸ್ಥಿತಿಯನ್ನು ಅವಲೋಕಿಸುತ್ತಿರುವ ರೈತ ನಷ್ಟದ ಹಾದಿಯಲ್ಲಿ ಸರಕಾರದ ಪರಿಹಾರ ಮತ್ತು ಮಳೆರಾಯನ ಕೃಪೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ.

ಜಾನುವಾರುಗಳ ಹುಲ್ಲು, ರಾಗಿ ಬೆಲೆ ಏರಿಕೆ ಸಾಧ್ಯತೆ 
ಮಳೆಗಾಲದ ಆರಂಭದಿಂದಲೂ ಗಟ್ಟಿಯಾದ ಒಂದೇ ಒಂದು ಮಳೆಯೂ ಸುರಿಯದ ಕಾರಣ ಕೆರೆ-ಕುಂಟೆಗಳಲ್ಲಿ ಸಂಗ್ರಹವಾಗುವ ಮಳೆ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಇದರಿಂದ, ಮುಂದಿನ ಬೇಸಿಗೆಯಲ್ಲಿ ಜಾನುವಾರುಗಳ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ತಾಲೂಕಿನ ಬಹುಪಾಲು ರೈತರು ಸಮರ್ಪಕ ನೀರಾವರಿ ಸೌಲಭ್ಯಗಳ ಕೊರತೆಯಿಂದ ಮಳೆ ಆಶ್ರಿತ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಕುಟುಂಬ ನಿರ್ವಹಣೆಗಾಗಿ ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಪ್ರಸಕ್ತ ವರ್ಷ ರಾಸುಗಳ ಮೇವಿನ ಕೊರತೆ  ಟಾಗುವುದರಿಂದ ಹೈನುಗಾರಿಕೆ ಮೇಲೂ ಗಂಭೀರ ಪರಿಣಾಮದ ಸಾಧ್ಯತೆಗಳಿವೆ. ರಾಸುಗಳ ಹುಲ್ಲು ಮತ್ತು ರಾಗಿಯ ಬೆಲೆಯೂ ಗಗನಮುಖೀಯಾಗುವ ಲಕ್ಷಣಗಳು ದಟ್ಟವಾಗಿದೆ

ತಾಲೂಕಿನಲ್ಲಿ ಬಿತ್ತನೆಯಾಗಿರುವ ರಾಗಿ ಮತ್ತು ಮಿಶ್ರ ಬೆಳೆಗಳ ನಷ್ಟದ ಪ್ರಮಾಣವನ್ನು ಕೃಷಿ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಮೂಲಕ ದಾಖಲು ಮಾಡಲಾಗಿದ್ದು, ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ನಷ್ಟ ಪರಿಹಾರದ
ಹಣ ಮಂಜೂರಾದ ಕೂಡಲೇ ಸರಕಾರದ ನಿರ್ದೇಶನದಂತೆ ರೈತರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು.
  ಎಚ್‌.ವಿ.ಗಿರೀಶ್‌, ತಹಶೀಲ್ದಾರ್‌, ಮಾಲೂರು

ತಾಲೂಕಿನಲ್ಲಿ ರಾಗಿ ಮತ್ತಿತರ ಧಾನ್ಯಗಳ ಬಿತ್ತನೆ ಪ್ರಮಾಣ ತೀರಾ ಕಡಿಮೆಯಾಗಿದ್ದು, ಅನೇಕ ರೈತರು ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ಖರೀದಿ ಮಾಡಿದ್ದರು. ಆದರೆ, ಸಕಾಲದಲ್ಲಿ ಮಳೆ ಸುರಿಯದ ಕಾರಣ ಬಿತ್ತನೆ ಪ್ರಮಾಣ ಕುಂಠಿತವಾಗಿದೆ. ಬಿತ್ತಿರುವ ಕೆಲವೇ ಪ್ರದೇಶಗಳಲ್ಲಿನ ಬೆಳೆಗಳು ಪ್ರಸ್ತುತ ಮಳೆ ಕೊರತೆಯಿಂದ ಸಂಪೂರ್ಣ ಒಣಗುತ್ತಿವೆ. 
ಆರ್‌.ಜಿ.ಭವ್ಯಾರಾಣಿ, ಸಹಾಯಕ ಕೃಷಿ ನಿರ್ದೇಶಕಿ, ಮಾಲೂರು

 ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next