ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಸತತ 894 ದಿನ ವಿದ್ಯುತ್ ಉತ್ಪಾದಿಸಿ ದಾಖಲೆ ಬರೆದ ಹಿರಿಮೆ ಘಟಕದ್ದಾಗಲಿದೆ.
Advertisement
ಆ ಮೂಲಕ ಕೈಗಾ ಘಟಕ-1, ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿ ನಿಲ್ಲಲಿದೆ. ಈ ಮಧ್ಯೆ, ವಿದ್ಯುತ್ ಉತ್ಪಾದನೆಯನ್ನು ಅ.24ರ ನಂತರವೂ ಮುಂದುವರಿಸಲು ಎಇಆರ್‌ಬಿ ಅಣು ವಿದ್ಯುತ್ ಶಕ್ತಿ ನಿಯಂತ್ರಣ ನಿಗಮ ಮತ್ತು ಭಾರತದ ಅಣುಸ್ಥಾವರ ವೀಕ್ಷಣಾ ಕೇಂದ್ರಗಳು ಅನುಮತಿ ನೀಡುವ ಸಾಧ್ಯತೆಗಳಿವೆ. ಸತತ 895 ದಿನ ವಿದ್ಯುತ್ ಉತ್ಪಾದಿಸಲು ಅನುಮತಿ ಸಿಕ್ಕಿದೆ. ಹಾಗಾದರೆ, ಉತ್ಪಾದನೆಯಲ್ಲಿ ಕೈಗಾ ಘಟಕ-1 ಮೈಲಿಗಲ್ಲು ಸ್ಥಾಪಿಸಲಿದೆ ಎಂದು ಇಲ್ಲಿನ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಣುಸ್ಥಾವರಗಳನ್ನು 365 ದಿನ ಸತತ ನಡೆಸಿ ಘಟಕದ ರಿಯಾಕ್ಟರ್ ನಿರ್ವಹಣೆಗೆ 30 ದಿನ ಬಿಡುವು ನೀಡಲಾಗುತ್ತದೆ. ನಿರ್ವಹಣೆ ನಂತರ ಮತ್ತೆ ರಿಯಾಕ್ಟರ್ ಗಳನ್ನು ಚಾಲನೆ ಮಾಡುವುದು ವಾಡಿಕೆ. ಆದರೆ, ಭಾರತದ ಕೈಗಾ ಅಣುಸ್ಥಾವರದಲ್ಲಿ ಸತತ 500 ದಿನಗಳವರೆಗೆ ರಿಯಾಕ್ಟರ್‌ಗಳನ್ನು ನಡೆಸಿದ ದಾಖಲೆ ಈತನಕ ಇತ್ತು. ದೇಶದ ವಿವಿಧ ರಾಜ್ಯಗಳಲ್ಲಿನ ಅಣುಘಟಕಗಳನ್ನು 450
ದಿನ, 500 ದಿನ ನಡೆಸಿದ ದಾಖಲೆ ಇದೆ. ಮೊದಲ ಸ್ಥಾನದಲ್ಲಿ ಕೆನಡಾ: ಅಣು ಸ್ಥಾವರದ ಘಟಕದ ರಿಯಾಕ್ಟರ್‌ವೊಂದನ್ನು ಸತತ 940 ದಿನಗಳ ಕಾಲ ಕಾರ್ಯ ನಿರ್ವಹಿಸಿ ವಿದ್ಯುತ್ ಉತ್ಪಾದಿಸಿದ ದಾಖಲೆ ಕೆನಡಾ ದೇಶದ ಹೆಸರಿನಲ್ಲಿದೆ. ಯುನೈಟೆಡ್ ಕಿಂಗ್ ಡಮ್‌ನ ಏಷ್ಯನ್ ಅಣುಸ್ಥಾವರದ ರಿಯಾಕ್ಟರ್‌ನಲ್ಲಿ 893 ದಿನ ಸತತ ವಿದ್ಯುತ್ ಉತ್ಪಾದಿಸಲಾಗಿದ್ದು, ಇದು ಸದ್ಯ ಎರಡನೇ ಸ್ಥಾನದಲ್ಲಿದೆ. ಭಾರತದ ಕೈಗಾ ಘಟಕ-1
ಮಂಗಳವಾರದಂದು ಈ ಸಾಧನೆಯನ್ನು ಸರಿಗಟ್ಟಿದೆ ಎಂದು ಕೈಗಾದ ವಿಜ್ಞಾನಿ ಮೋಹನ್ ರಾಮ್ ತಿಳಿಸಿದ್ದಾರೆ. ಕೈಗಾ ಸ್ಥಾವರದ ಡೈರೆಕ್ಟರ್ ಸಂಜಯ್ ಕುಮಾರ್, ಸ್ಟೇಶನ್ ಡೈರೆಕ್ಟರ್ ಜೆ.ಆರ್.ದೇಶಪಾಂಡೆ ಸಹ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, 895 ದಿನ ಪೂರೈಸಿ ಗುರಿ ತಲುಪುವ ಸಂತಸದ ಘಳಿಗೆಗಾಗಿ ಕಾದಿದ್ದಾರೆ.
Related Articles
ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿನ ಘಟಕಗಳು ಹೆವಿ ವಾಟರ್ ರಿಯಾಕ್ಟರ್ (ಪಿಎಚ್‌ಡಬುಆರ್) ತಂತ್ರಜ್ಞಾನದ್ದು. ಈ ಮಾದರಿಯ ರಿಯಾಕ್ಟರ್‌ಗಳ ಪೈಕಿ ಸತತ 893 ದಿನ ವಿದ್ಯುತ್ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಈ ಮಾದರಿಯ ಅಣು ರಿಯಾಕ್ಟರ್‌ಗಳಲ್ಲಿ ಸತತ 893 ದಿನಗಳಿಗೂ ಹೆಚ್ಚು ಕಾಲ ಅಣು ವಿದ್ಯುತ್ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ. ಈ ತಂತ್ರಜ್ಞಾನದಡಿ ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆ ದಾಟುತ್ತಿದ್ದಂತೆ ಇದು ಹೊಸ ಮೈಲುಗಲ್ಲನ್ನು ಬರೆಯಲಿದೆ.
Advertisement