ಕಾರವಾರ: ಸತತ 941 ದಿನಗಳ ಕಾಲ ಅಣು ವಿದ್ಯುತ್ ಉತ್ಪಾದಿಸಿರುವ ಕೈಗಾ ಅಣುಸ್ಥಾವರ ವಿಶ್ವದಾಖಲೆ ಬರೆದಿದೆ. ಸೋಮವಾರ ಬೆಳಗ್ಗೆ 9.19 ನಿಮಿಷಕ್ಕೆ ಈ ದಾಖಲೆ ಸೃಷ್ಟಿಯಾಯಿತು.
ಸದ್ಯ ಇಂಗ್ಲೆಂಡ್‌ನ ಹೇಶಮ್ ಅಣುವಿದ್ಯುತ್ ಘಟಕ 940 ದಿನಗಳ ಕಾಲ ಸತತವಾಗಿ ಅಣು ವಿದ್ಯುತ್ ಉತ್ಪಾದಿಸಿದ ದಾಖಲೆ ಇತ್ತು. 2016ರ ಮೇ 13ರಿಂದ ಕೈಗಾ ಘಟಕ-1 ವಿದ್ಯುತ್ ಉತ್ಪಾದನೆ ಆರಂಭಿಸಿದ್ದು, ಈಗಲೂ ಮುಂದುವರಿದಿದೆ. ಆಟೋಮಿಕ್ ಎನರ್ಜಿ ರೆಗ್ಯುಲೇಟರ್ ಬೋರ್ಡ್ ಡಿ.31ರವರೆಗೆ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಿದೆ. ಹಾಗಾಗಿ ಇನ್ನೂ 19 ದಿನ ವಿದ್ಯುತ್ ಉತ್ಪಾದನೆ ಮುಂದುವರಿಸಲಿದೆ. ಡಿ.31ಕ್ಕೆ 962 ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿದ ಅಣು ರಿಯಾಕ್ಟರ್ ಎಂಬ ಹೆಗ್ಗಳಿಕೆಗೂ ಕೈಗಾ ಪಾತ್ರವಾಗಲಿದೆ.
ಅಕ್ಟೋಬರ್‌ನಲ್ಲೇ ದಾಖಲೆ: ಕೈಗಾ 1ನೇ ಘಟಕ ಅ.24ರಂದು 894 ದಿನ ಪೂರೈಸಿ ವಿಶ್ವದಾಖಲೆಗೆ ಪಾತ್ರವಾಗಿತ್ತು. ಭಾರಜಲ (ಹೆವಿ ವಾಟರ್ ರಿಯಾಕ್ಟರ್ ) ಅಣುವಿದ್ಯುತ್ ರಿಯಾಕ್ಟರ್ ಹೆಸರಿನಲ್ಲಿದ್ದ ದಾಖಲೆಯನ್ನು ಕೈಗಾ ಮುರಿದಿತ್ತು. ಈ ಮಧ್ಯೆ ಹೊಸ ವರ್ಷದ ಆರಂಭದ ಒಂದೂವರೆ ತಿಂಗಳುಗಳ ಕಾಲ ಘಟಕ ಒಂದನ್ನು ನಿರ್ವಹಣೆಗಾಗಿ ಸ್ಥಗಿತ ಮಾಡಲಾಗುತ್ತದೆ. ಬಳಿಕ ಮತ್ತೆ ವಿದ್ಯುತ್ ಉತ್ಪಾದನೆ ಆರಂಭವಾಗಲಿದೆ.
ಭಾರತೀಯ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು ಮತ್ತೂಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದೊಂದು ಮಹತ್ವದ ಸಾಧನೆ. ಭಾರತದ ಅಣುಶಕ್ತಿ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.
– ನರೇಂದ್ರ ಮೋದಿ, ಪ್ರಧಾನಿ
ಕೈಗಾ 1ನೇ ಅಣು ವಿದ್ಯುತ್ ಘಟಕ ಸತ ತ 941 ದಿನ ಸುರಕ್ಷಿತವಾಗಿ ಅಣು ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ವಿಶ್ವದ ಅಣು ವಿಜ್ಞಾನಿಗಳು ಹುಬ್ಬೇರಿಸುವಂತೆ ಮಾಡಿದೆ. ಈ ಕಾರ್ಯ ಸಾಧನೆ ಇಲ್ಲಿ ದುಡಿಯುವ ನೌಕರರ ಮತ್ತು ಅಣು ವಿಜ್ಞಾನಿಗಳ ಒಗ್ಗಟ್ಟಿನ ಶ್ರಮದ ಫಲವಾಗಿದೆ.
– ಮೋಹನ್‌ರಾಮ್, ಕೈಗಾ ಅಣುಸ್ಥಾವರ ಘಟಕದ ವಿಜ್ಞಾನಿ .