ಸಾಗರ : ರಾಜ್ಯದಲ್ಲಿರುವ ದಾಖಲೆ ರಹಿತ ಗ್ರಾಮಗಳನ್ನು ಪುನರ್ ಸರ್ವೇ ನಡೆಸಿ ಅವುಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವಂತೆ ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಅಸಲಿ ಗ್ರಾಮಗಳನ್ನು ಗುರುತಿಸಿ ವಿಸ್ತೀರ್ಣ, ಆಕಾರಬಾಂಧು ಮಾಡಿಸಿ, ನಕ್ಷೆ ರೂಪಿಸಬೇಕು. ಹಾಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮತ್ತು ಕಂದಾಯ ಸಚಿವರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ನಾನು ಕಂದಾಯ ಸಚಿವನಾಗಿದ್ದ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಒಂದಷ್ಟು ಕೆಲಸ ಮಾಡಿದ್ದೇನೆ. ನಂತರ ಅದು ಅಲ್ಲಿಯೇ ನಿಂತು ಹೋಗಿದೆ. ಈಗಿನ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಹಿಂದೆ ಘೋಷಣೆ ಮಾಡಿದ್ದಷ್ಟೆ ಗ್ರಾಮಗಳನ್ನು ಈಗ ಇರಿಸಿಕೊಳ್ಳಲು ಸಾಧ್ಯವಿಲ್ಲ. ಊರು ಬೆಳೆದಿದೆ. ಜನವಸತಿ ಪ್ರದೇಶಗಳು ಹೆಚ್ಚಾಗಿದೆ. ಸಾವಿರಾರು ದಾಖಲೆರಹಿತ ಗ್ರಾಮಗಳು ಇರುವುದರಿಂದ ಅವುಗಳಿಗೆ ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ತಲುಪಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇದರ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಮುಂದಿನ ನಡೆಯನ್ನು ನೋಡಿಕೊಂಡು ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಶಿವಮೂರ್ತಿ ನಾಯಕ್ ಮಾತನಾಡಿ, ರಾಜ್ಯದಲ್ಲಿ ೫೮ ಸಾವಿರಕ್ಕೂ ಹೆಚ್ಚು ದಾಖಲೆರಹಿತ ಗ್ರಾಮಗಳಿದೆ. ಇದರಲ್ಲಿ ಕೆಲವನ್ನು ಮಾತ್ರ ದಾಖಲೆಸಹಿತ ಗ್ರಾಮ ಎಂದು ಸರ್ಕಾರ ಘೋಷಣೆ ಮಾಡಿದೆ. ಉಳಿದ ಗ್ರಾಮಗಳ ಬಗ್ಗೆ ಸರ್ಕಾರ ಕಣ್ಣೆತ್ತಿ ಸಹ ನೋಡದೆ ಇರುವುದು ಬೇಸರದ ಸಂಗತಿ. ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಗ್ಗೆ ಪ್ರಯತ್ನ ನಡೆಸಿ ಎಂದರೆ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ ಎನ್ನುವ ಸಬೂಬು ಹೇಳುತ್ತಿದ್ದಾರೆ. ಲಂಬಾಣಿ ತಾಂಡ, ಗೊಲ್ಲ ನಾಯಕರ ಹಟ್ಟಿ, ಹಕ್ಕಿಪಿಕ್ಕಿ, ಹಾವಾಡಿಗ ಸೇರಿದಂತೆ ಅನೇಕ ವಾಡಿಗಳು ದಾಖಲೆರಹಿತವಾಗಿದೆ. ದೇಶಾದ್ಯಂತ ಸಹಸ್ರಾರು ಗ್ರಾಮಗಳು ದಾಖಲೆಯಲ್ಲಿ ನಮೂದಾಗದೆ ಇರುವುದರಿಂದ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ದಾಖಲೆರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಎಂದು ಪ್ರಧಾನ ಮಂತ್ರಿಗಳಿಗೆ, ಲೋಕಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಎಲ್ಲ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ : ಮಕ್ಕಳು, ಮಹಿಳೆಯರು ಸೇರಿ ಹಲವರಿಗೆ ಗಾಯ
ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಸ್ವಲ್ಪ ಚಾಲನೆ ಸಿಕ್ಕಿದ್ದರೂ ನಂತರ ಅದು ನೆನಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸುವ ಹಿನ್ನೆಲೆಯಲ್ಲಿ ವಾಸಿಸುವವನೇ ನೆಲದೊಡೆಯ ಹೋರಾಟಕ್ಕೆ ಕಾಗೋಡು ನೇತೃತ್ವದಲ್ಲಿ ಚಾಲನೆ ನೀಡಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲ ದಾಖಲೆರಹಿತ ಗ್ರಾಮಗಳನ್ನು ಪುನರ್ ಸರ್ವೇ ಮಾಡಿ ಸೂಕ್ತ ದಾಖಲೆ ತಯಾರಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ ಅವರುಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದರು.
ಗೋಷ್ಠಿಯಲ್ಲಿ ಬಂಜಾರು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್. ದಾವಣಗೆರೆ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ್ ಹಾಜರಿದ್ದರು.