ಕಲಬುರಗಿ: ಬಹು ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಮಹತ್ವಾಕಾಂಕ್ಷಿಯಾದ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿಗೆ ಕಟ್ಟುವ ಏತ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದರಿಂದ ಈ ಭಾಗದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡಿದಂತಾಗಿದೆ ಎಂದು ಸೇಡಂ ಮತಕ್ಷೇತ್ರದ ಶಾಸಕ, ಡಿಸಿಸಿ ಬ್ಯಾಂಕ್-ಕೆಕೆಆರ್‌ಟಿಸಿ ಅಧ್ಯಕ್ಷ, ರಾಜ್ಯ ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.
ಸೇಡಂ ತಾಲೂಕಿನ 30 ಹಳ್ಳಿ, ಚಿಂಚೋಳಿ ತಾಲೂಕಿನ 14, ಚಿತ್ತಾಪುರ ತಾಲೂಕಿನ ನಾಲ್ಕು ಹಳ್ಳಿಗಳು ಸೇರಿ ಒಟ್ಟಾರೆ 47 ಹಳ್ಳಿಗಳ 25 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗುವ ಮಹತ್ವದ ಏತ ನೀರಾವರಿ ಯೋಜನೆಗೆ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿರುವುದರಿಂದ ಬಹು ದಿನಗಳ ಕನಸು ನನಸಾದಂತಾಗಿದೆ ಎಂದಿದ್ದಾರೆ.
ಕಾಗಿಣಾ ನದಿಗೆ ಈ ಹಿಂದೆಯೇ ಎರಡು ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ವೀರೇಂದ್ರ ಪಾಟೀಲ ಮುಖ್ಯಮಂತ್ರಿ ಆಗಿದ್ದಾಗಲೇ ಕಾಗಿಣಾ ನದಿಗೆ ಜಲಾಶಯ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಗ್ರಾಮಗಳ ಮುಳುಗಡೆ ಹಾಗೂ ಆರ್ಥಿಕ ಸಮಸ್ಯೆಯಿಂದ ಕೈ ಬಿಡಲಾಗಿತ್ತು. ಸುದೀರ್ಘ ವರ್ಷದ ಬಳಿಕ ಈಗ ನದಿ ನೀರು ಸದುಪಯೋಗಕ್ಕೆ ಚಾಲನೆ ಸಿಕ್ಕಂತಾಗಿದೆ.
ಒಟ್ಟು 639ಕೋಟಿ ರೂ. ವೆಚ್ಚದ ಯಡ್ಡಳ್ಳಿ, ತರನಳ್ಳಿ ಏತ ನೀರಾವರಿ ಯೋಜನೆಗೆ ಮೊದಲ ಹಂತವಾಗಿ 143.80ಕೋಟಿ ರೂ. ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಮಗದೊಂದು ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಸಂಪುಟದ ಎಲ್ಲ ಸದಸ್ಯರು ಅನುಮೋದನೆ ನೀಡಿದಂತಾಗಿದ್ದು, ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಹತ್ವಾಕಾಂಕ್ಷಿ ನೀರಾವರಿ ಯೋಜನೆ ಕುರಿತು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿತ್ತು. ನಂತರ 639.30ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗೆ ಆಡಳಿತಾತ್ಮಕ ಅನುಮೋದನೆ ಕಲ್ಪಿಸಲಾಗಿತ್ತು. ಈಗ ಸಿಎಂ ಬಸವರಾಜ ಬೊಮ್ಮಾಯಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಶೀಘ್ರದಲ್ಲೇ ಅವರನ್ನು ಸೇಡಂಗೆ ಕರೆಯಿಸಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಒಟ್ಟಾರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಸಚಿವ ಸಂಪುಟದ ಸರ್ವ ಸದಸ್ಯರಿಗೆ ಕಲ್ಯಾಣ ಕರ್ನಾಟಕದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ.
ಕಾಗಿಣಾ ಏತ ನೀರಾವರಿ ಯೋಜನೆಯಡಿ ಕಾಲುವೆಗಳಿಂದ ನೀರು ಪೂರೈಕೆಯಾಗುವುದಿಲ್ಲ. ಹೀಗಾಗಿ ಜರ್ಮನ್ ತಂತ್ರಜ್ಞಾನ ಮೂಲಕ ದೊಡ್ಡ ಪೈಪ್‌ಲೈನ್ ಮುಖಾಂತರ ಜಮೀನುಗಳಿಗೆ ನೀರುಹರಿಸಲಾಗುವುದು. ಒಂದುಹನಿ ನೀರು ಎಲ್ಲಿಯೂ ಸೋರಿಕೆಯಾಗುವುದಿಲ್ಲ. ಜಮೀನುಗಳಿಗೆ ಪೈಪಲೈನ್ ಸೇರಿದಂತೆ ನೀರು ಹರಿಸುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
-ರಾಜಕುಮಾರ ಪಾಟೀಲ, ತೇಲ್ಕೂರ, ಶಾಸಕ, ಸೇಡಂ