ಕಡೂರು: ಧರ್ಮ ಮತ್ತು ಅಧರ್ಮ ಪ್ರತಿಯೊಬ್ಬ ಮನುಷ್ಯನ ವಿವೇಚನಾ ಶಕ್ತಿಗೆ ಬಿಟ್ಟಿದ್ದು. ವಿಜ್ಞಾನಿ, ರಾಜಕಾರಣಿ, ಸಾಧು ಸಂತರ ಧ್ಯೇಯ ಉತ್ತಮ ರಾಷ್ಟ್ರ ನಿರ್ಮಾಣದ ಕನಸಾಗಿದೆ. ಶಿಕ್ಷಕರು ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅವಧೂತರಾದ ಬೆಲಗೂರು ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ಹೇಳಿದರು.
ಬೀರೂರು ಸಮೀಪದ ಅಜ್ಜಂಪುರ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ವಾಗ್ದೇವಿ ವಿಲಾಸ ಶಾಲೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಶಾಲೆ ಆರಂಭಗೊಂಡಿದೆ. ನಮ್ಮ ಮಕ್ಕಳು ದೇಶದ ಸತøಜೆಗಳಾಗಬೇಕೆಂಬ ಆಶಯದಿಂದ ಇಸ್ರೋ ನಿವೃತ್ತ ವಿಜ್ಞಾನಿ ಹರೀಶ್ ಅವರು ಸ್ಥಾಪಿಸಿರುವ ಶಾಲೆ ಹೆಮ್ಮರವಾಗಿ ಬೆಳೆದು ಉನ್ನತ ಶಿಕ್ಷಣ ನೀಡಲಿ ಎಂದು ಹಾರೈಸಿದರು.
ನಾಯಕತ್ವದ ಗುಣ ಅಗತ್ಯ: ಪ್ರಾಸ್ತಾವಿಕವಾಗಿ ಮಾತನಾಡಿದ ವಾಗ್ದೇವಿ ವಿಲಾಸ ಶಾಲೆ ಸ್ಥಾಪಕ ಹಾಗೂ ಇಸ್ರೋ ನಿವೃತ್ತ ವಿಜ್ಞಾನಿ ಕೆ.ಹರೀಶ್, ಸಮಾಜದಲ್ಲಿ ನಾಯಕತ್ವದ ಗುಣ ಪ್ರೇರೇಪಿಸುವ ವ್ಯಕ್ತಿತ್ವದ ಅಗತ್ಯವಿದೆ. ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎನ್ನುವ ಪೋಷಕರ ಮತ್ತು ಮಕ್ಕಳ ಕನಸನ್ನು ಶಿಕ್ಷಣ ಪೂರೈಸಬಲ್ಲದು ಎಂದರು.
ಶಿಕ್ಷಣದಿಂದ ಬದುಕು ಹಸನು: ಇಂದು ಶಿಕ್ಷಣ ಎಂದರೆ ಬೃಹತ್ ಕಟ್ಟಡಗಳು, ಐಷಾರಾಮಿ ಸೌಲಭ್ಯಗಳ ನಡುವೆ ಕಲಿತರೆ ಗುಣಮಟ್ಟದ ಶಿಕ್ಷಣ ಎನ್ನುವ ಮನೋಭಾವವಿದೆ. ಉತ್ತಮ ಕಲಿಕಾ ವಾತಾವರಣ, ಮಕ್ಕಳ ಅಂತಃಸತ್ವವನ್ನು ಗುರುತಿಸಿ ಅವರ ವ್ಯಕ್ತಿತ್ವವನ್ನು ಉಜ್ವಲಗೊಳಿಸುವ, ಎದುರಾಗಬಹುದಾದ ಕಷ್ಟಕರ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯ ಮೂಲಕ ಬದುಕನ್ನು ಹಸನಾಗಿಸುವುದೇ ಶಿಕ್ಷಣ ಎಂದು ತಿಳಿಸಿದರು. ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬೆಳ್ಳಿಪ್ರಕಾಶ್, ಬಯಲು ಸೀಮೆ, ಗ್ರಾಮೀಣ ಪ್ರದೇಶದ ಮಕ್ಕಳ ಜೀವನಕ್ಕೆ ಬೆಳಕು ನೀಡಬಲ್ಲ ಶಿಕ್ಷಣ ಕ್ರಾಂತಿ ನಗರ ಪ್ರದೇಶದಲ್ಲಿ ಅಸ್ತಿತ್ವ ಕಂಡುಕೊಂಡವರ ಸಹಕಾರದಿಂದ ಸಾಧ್ಯವಾಗಲಿ ಎನ್ನುವುದು ತಮ್ಮ ಆಶಯವಾಗಿದೆ. ಭದ್ರ ಬುನಾದಿ ಹೊಂದಿದ ಶಿಕ್ಷಣ ಸಂಸ್ಥೆಗಳು ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಹಕರಿಸಬೇಕು. ಮಕ್ಕಳಲ್ಲಿ ಕನಸು ಬಿತ್ತುವ ಜತೆಗೆ ಅವರಲ್ಲಿ ರಾಜಕೀಯ ಪ್ರಜ್ಞೆಯನ್ನೂ ಬೆಳೆಸಬೇಕು. ಉತ್ತಮ ಸಮಾಜಕ್ಕೆ ಪ್ರಬುದ್ಧ ರಾಜಕಾರಣಿಗಳ ಅಗತ್ಯವಿದೆ. ಇಲ್ಲಿ ಕಲಿಯುವ ಮಕ್ಕಳು ಸಂಸ್ಕಾರವಂತರಾಗಲೆಂದು ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ಬೆಲಗೂರು ಆಡಳಿತ ಮಂಡಳಿ ವ್ಯವಸ್ಥಾಪಕ ಗುರುದತ್ತ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಟ್ರಸ್ಟಿ ಗಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಒಡೆಯರ್, ಬಿಜೆಪಿ ಮುಖಂಡ ಅರೆಕಲ್ ಪ್ರಕಾಶ್, ಸುಂದರಮ್ಮ ಕೃಷ್ಣಮೂರ್ತಿ, ಶಾಲೆನ್ ಸಬ್ರಿನೋ, ವಿನೋದ್ ಗೋಕರೆ, ವಿನಯ್ ಭಟ್, ಶ್ರೀಧರಯ್ಯ, ಪರಮೇಶ್ವರಪ್ಪ ಮತ್ತು ಪೋಷಕರು, ಮಕ್ಕಳು ಭಾಗವಹಿಸಿದ್ದರು.