Advertisement
ತಾಪಂ ಅಧ್ಯಕ್ಷೆ ಎನ್.ಭಾರತಮ್ಮ ಅವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮೊದಲು ಕೃಷಿ ಇಲಾಖೆ ಕಾರ್ಯ ಚಟುವಟಿಕೆ ಬಗ್ಗೆ ಸದಸ್ಯರಾದ ಆನಂದ ನಾಯ್ಕ, ದೇವರಾಜ ನಾಯ್ಕ, ಅಕ್ಷಯ್‌ಕುಮಾರ್ ವ್ಯಾಪಕ ಚರ್ಚೆ ನಡೆಸಿದರು. ಅಲ್ಲದೇ, ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸವಲತ್ತುಗಳ ಖೋತಾ ಕುರಿತಂತೆ ಗಂಭೀರ ಆರೋಪ ಮಾಡಿದರು.
Related Articles
Advertisement
ರಸಗೊಬ್ಬರ, ಯೂರಿಯಾ, ಬಿತ್ತನೆ ಬೀಜ ಮುಂತಾದ ಸವಲತ್ತು ನೀಡುವಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ. ಯಾವುದೇ ಪಟ್ಟಿ ಸಿದ್ಧಪಡಿಸದೇ ಮನಸ್ಸಿಗೆಬಂದತೆ ರೈತರಿಗೆ ಸಬ್ಸಿಡಿ ದರದಲ್ಲಿ ಸವಲತ್ತು ನೀಡಲಾಗುತ್ತಿದೆ. ಗೊಬ್ಬರವಂತೂ ಹಳೇ ಸ್ಟಾಕ್‌ಆಗಿದ್ದು, ಅದರಿಂದ ಯಾವುದೇ ಪ್ರಯೋಜನ ಕಾಣದೆ ರೈತರು ತಮ್ಮ ಬೆಳೆ ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ವೇಳೆ ಮಾಹಿತಿ ನೀಡಲು ಎದ್ದು ನಿಂತ ಅಬಕಾರಿ ಅಧಿಕಾರಿ ಮೇಲೆ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ ಹರಿಹಾಯ್ದರು. ಅಲ್ಲದೇ, ಯಾವುದೇ ಮದ್ಯ ಮಾರಾಟ ಅಂಗಡಿಯಲ್ಲಿ ದರ ಪಟ್ಟಿಯಿಲ್ಲ. ಬಹುತೇಕ ಗ್ರಾಮಗಳಲ್ಲಿ ಅಕ್ರಮವಾಗಿ ಚಿಲ್ಲರೆ ಅಂಗಡಿ ಮತ್ತು ಮನೆಯೊಳಗೆ ಮದ್ಯ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಇಲಾಖೆ ಕಣ್ಣುಮುಚ್ಚಿಕೊಂಡು ಕುಳಿತಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಬೋಗಪ್ಪ, ದೇವರಾಜ ನಾಯ್ಕ ಧ್ವನಿಗೂಡಿಸಿದರು.
ಸದಸ್ಯ ಆನಂದ ನಾಯ್ಕ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಮದ್ಯ ಮಾರಾಟ ಅಂಗಡಿ ಮತ್ತು ಬಾರ್‌ಗಳನ್ನು ನೀಡಬೇಕು. ಅಬಕಾರಿ ಇಲಾಖೆ ಕಾರ್ಯವೈಖರಿ ಬಹುದೊಡ್ಡ ಪ್ರಶ್ನೆಯಾಗಿದೆ ಎಂದು ಟೀಕಿಸಿದರು.
ಸದಸ್ಯೆ ಸವಿತಾ ಕಲ್ಲೇಶಪ್ಪ ಮಾತನಾಡಿ, ಸಿಂಗಟಗೆರೆ ನಾಡ ಕಚೇರಿಯಲ್ಲಿ ಆಧಾರ್ ಕಾರ್ಡ್ ಹೊಸದಾಗಿ ಮತ್ತು ತಿದ್ದುಪಡಿ ಮಾಡಲು 200 ರೂ.ಗೂ ಹೆಚ್ಚು ಲಂಚ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಸದಸ್ಯ ಆನಂದ್ ನಾಯ್ಕ ಮಾತನಾಡಿ, ಸಖರಾಯಪಟ್ಟಣ ಹೋಬಳಿ ಎರಡು ಜಿಪಂ ಕ್ಷೇತ್ರಗಳನ್ನು ಒಳಗೊಂಡಿದೆ. ಇಡೀ ಕ್ಷೇತ್ರಕ್ಕೆ ಕೇವಲ ಒಬ್ಬರೇ ಕಂಪ್ಯೂಟರ್ ಆಪರೇಟರ್ ಇದ್ದಾರೆ. ಇದರಿಂದ ಆಧಾರ್‌ಕಾರ್ಡ್ ಪಡೆಯಲು ವಿಳಂಬವಾಗುತ್ತಿದೆ. ಜತೆಗೆ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಾಗಿದೆ ಎಂದು ಆರೋಪಿಸಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಜೆ.ಉಮೇಶ್, ತಾಪಂ ಇಒ ಡಾ| ದೇವರಾಜ ನಾಯ್ಕ, ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಶಶಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜು ಉಪಸ್ಥಿತರಿದ್ದರು.