Advertisement

ಸರ್ವರ್‌ ಸಮಸ್ಯೆ: ಸಬ್‌ ರಿಜಿಸ್ಟ್ರಾರ್‌ಕಚೇರಿ ಸ್ತಬ್ಧ!

01:17 PM Dec 14, 2019 | Naveen |

„ಪ್ರಕಾಶ್‌ ಮೂರ್ತಿ ಏ.ಜೆ.
ಕಡೂರು:
ಇಲ್ಲಿನ ತಾಲೂಕು ಕಚೇರಿ ಕಟ್ಟಡದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯ ಸರ್ವರ್‌ ಡೌನ್‌ ಆಗಿದ್ದರಿಂದ, ಇಲಾಖೆಯ ಬಹುತೇಕ ಕೆಲಸ ಕಾರ್ಯಗಳು ಕಳೆದ 14ದಿನಗಳಿಂದ ಸ್ಥಗಿತಗೊಂಡು ಸಾರ್ವಜನಿಕರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ.

Advertisement

ನವೆಂಬರ್‌ 30 ರಿಂದ ಸ್ಕ್ಯಾನಿಂಗ್‌ ಸಿಡಿ ಸಮಸ್ಯೆ ಎದುರಾಗಿದ್ದು, ಡಿಸೆಂಬರ್‌ 13ರಂದು ಕಚೇರಿ ಅವಧಿ ಮುಗಿದರೂ ಸಮಸ್ಯೆ ಇನ್ನೂ ಸರಿಯಾಗಿರಲಿಲ್ಲ. ಸಮಸ್ಯೆಯಿಂದ ಆಸ್ತಿ ಖರೀದಿ, ಮಾರಾಟ, ಮದುವೆ ನೋಂದಣಿ, ಆಸ್ತಿಗಳ ಮೇಲೆ ಬ್ಯಾಂಕ್‌ ಭೋಜಾ ನೋಂದಣಿ ಮುಂತಾದ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಅಲ್ಲದೇ, ಸರ್ಕಾರದ ಖಜಾನೆಗೆ ನಿತ್ಯ ಬರುತ್ತಿದ್ದ ಭಾರೀ ಪ್ರಮಾಣದ ಆದಾಯಕ್ಕೂ ಹೊಡೆ ಬಿದ್ದಿದೆ.

ಕಡೂರು ತಾಲೂಕು ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕು ಆಗಿರುವುದರಿಂದ ಪ್ರತಿದಿನ ನೋಂದಣಿ ಕಾರ್ಯ ಇದ್ದೇ ಇರುತ್ತದೆ. ಇಲ್ಲಿ ದಿನವೊಂದಕ್ಕೆ ಕನಿಷ್ಟ 40-50 ನೋಂದಣಿ ಕಾರ್ಯಗಳು ನಡೆಯುತ್ತವೆ. ಇದರಿಂದ ಸರ್ಕಾರಕ್ಕೆ ಅಂದಾಜು 5 ಲಕ್ಷ ರೂ.ಗೂ ಹೆಚ್ಚು ಆದಾಯ ಬರುತ್ತಿತ್ತು. ಆದರೆ ತಾಂತ್ರಿಕ ದೋಷದಿಂದ ಎಲ್ಲಾ ಕಾರ್ಯಗಳು ಸ್ಥಗಿತಗೊಂಡು ಅಪಾರ ಆದಾಯ ನಷ್ಟವಾಗಿದೆ. ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಬರುವ ನೂರಾರು ಜನರಿಂದ ಹಣ ಪಡೆದು ದಲ್ಲಾಳಿ ಕೆಲಸ ಮಾಡುವವರಿಗೆ ಕಚೇರಿಯ ಸರ್ವರ್‌ ಸಮಸ್ಯೆಯಿಂದ ತಲೆ ಮೇಲೆ ಕೈ ಹೊತ್ತು ಕೂರುವಂತಹ ಸ್ಥಿತಿ ಎದುರಾಗಿದೆ.

ಬೇಗ ಸಮಸ್ಯೆ ಬಗೆಹರಿಯಲಿ. ನಮ್ಮ ಜೀವನಕ್ಕೆ ದಾರಿಯಾಗಲಿ ಎಂದು ಬೇಡಿಕೊಳ್ಳುತ್ತಿದ್ದುದು ಕಚೇರಿ ಆವರಣದಲ್ಲಿ ಕಂಡುಬಂದಿತು.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿನ ಸಮಸ್ಯೆ ನಮಗೆ ಬೇರೆಯವರಿಂದ ತಿಳಿಯಿತು. ಅಧಿ ಕಾರಿಯನ್ನು ಕರೆಯಿಸಿ ಬುಧವಾರ ಬೆಂಗಳೂರಿನ ಮುಖ್ಯ ಕಚೇರಿಗೆ ಕಳುಹಿಸಿ ಸಮಸ್ಯೆಯನ್ನು ಕೂಡಲೆ ಬಗೆಹರಿಸಲು ಸೂಚಿಸಿದ್ದೆ. ಶುಕ್ರವಾರ ಸರ್ವರ್‌ ಮತ್ತು ಸ್ಟ್ರಾನಿಂಗ್‌ ಸಮಸ್ಯೆ ಬಗೆಹರಿದಿರುವುದಾಗಿ ತಿಳಿದು ಬಂದಿದೆ. ಶನಿವಾರ, ಭಾನುವಾರ ರಜೆ ದಿನಗಳಾಗಿದ್ದು, ಸೋಮವಾರದಿಂದ ಕಾರ್ಯ ನಿರ್ವಹಿಸಲಿದೆ.
. ಉಮೇಶ್‌, ತಹಶೀಲ್ದಾರ್‌

Advertisement

ಭೂಮಿ ಮಾರಾಟ ಮಾಡಿದ್ದು ಕಳೆದ 15 ದಿನಗಳಿಂದ ಉಪ ನೋಂದಣಾಧಿ ಕಾರಿ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಮನೆಯಲ್ಲಿ ಮದುವೆ ಕಾರ್ಯ ಇದ್ದು, ಭೂಮಿಯನ್ನು ಮಾರಾಟ ಮಾಡಿದ್ದೇವೆ. ನೋಂದಣಿ ಮಾಡಿಸಿಕೊಡಲು ಇನ್ನೂ ಸಾಧ್ಯವಾಗಿಲ್ಲ. ನಮ್ಮ ಗೋಳು ಕೇಳುವವರ್ಯಾರು?
.ಕಡೂರಹಳ್ಳಿ ಉಮೇಶ್‌, ಸ್ಥಳೀಯರು

ಕಳೆದ 14 ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ನೋಂದಣಿ ಕಾರ್ಯ ಸ್ಥಗಿತಗೊಂಡಿದೆ. ಕೂಡಲೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿನ ಕೇಂದ್ರ ಕಚೇರಿಗೆ ಸಮಸ್ಯೆ ಕುರಿತು ಪತ್ರ ಬರೆಯಲಾಗಿತ್ತು. ಬೆಂಗಳೂರಿನ ಐಜಿಆರ್‌ ಕಚೇರಿಯಿಂದ ಶುಕ್ರವಾರ ತಾಂತ್ರಿಕ ದೋಷ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ. ಸೋಮವಾರದಿಂದ ಎಲ್ಲವೂ ಸರಿಯಾಗಿ ಎಂದಿನಂತೆ ನೋಂದಣೆ ಕಾರ್ಯ ನಡೆಯಲಿದೆ. ಸಾರ್ವಜನಿಕರು ಸಹಕಾರ ನೀಡಬೇಕು.
. ಶಾಂತಕುಮಾರ್‌,
ಪ್ರಭಾರ ಉಪ ನೋಂದಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next