ಕಡೂರು: ಪಟ್ಟಣದ ವೈದ್ಯ ಡಾ| ಶಿವಕುಮಾರ್ ಅವರ ಬಸವೇಶ್ವರ ಆಸ್ಪತ್ರೆ ಸೆಲ್ಲರ್‌ನಲ್ಲಿ ಕಡೂರಿನ ದೀಕ್ಷಾ ವಿದ್ಯಾಮಂದಿರದ ಕಾರ್ಯದರ್ಶಿ ಎನ್.ಪಿ.ಮಂಜುನಾಥ ಪ್ರಸನ್ನ ನಿರ್ಮಿಸುತ್ತಿರುವ ‘ಬ್ಲಾಂಕ್’ ಕನ್ನಡ ಚಲನಚಿತ್ರದ ದೃಶ್ಯವೊಂದರ ಚಿತ್ರೀಕರಣ ನಡೆಯಿತು.
ಚಿತ್ರದ ಪಾತ್ರಧಾರಿಯೊಬ್ಬರು ಅಪಾರ್ಟ್ ಮೆಂಟ್‌ನ ಸೆಲ್ಲರ್‌ನಲ್ಲಿ ನಿಲ್ಲಿಸಿರುವ ಕಾರನ್ನು ಹೊರ ತೆಗೆಯುವ ದೃಶ್ಯವನ್ನು ಛಾಯಗ್ರಾಹಕ ಪುರುಷೋತ್ತಂ ಚಿತ್ರೀಕರಣ ಮಾಡಿದರು. ನಿರ್ದೇಶಕ ಸುಹಾಸ್(ಎಸ್.ಜೆ)ದೃಶ್ಯಕ್ಕೆ ಆ್ಯಕ್ಷನ್ ಕಟ್ ಹೇಳಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ಸುಹಾಸ್, ಕನ್ನಡ ಚಿತ್ರರಂಗಕ್ಕೆ ಭರವಸೆಯ ಹೊಸ ತಂಡವೊಂದು ಪ್ರವೇಶ ಪಡೆದಿದೆ. ಎರಡು ಶೆಡ್ಯೂಲ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದೀಗ 10 ದಿನದ ಚಿತ್ರೀಕರಣ ಬಾಕಿ ಇದೆ. ಕಡೂರು, ಚಿಕ್ಕಮಗಳೂರು ಹಾಗೂ ಉಡುಪಿ ಭಾಗದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.
ನಿರ್ಮಾಪಕ ಎನ್.ಪಿ.ಮಂಜುನಾಥ ಪ್ರಸನ್ನ ಮಾತನಾಡಿ, ಈಗಾಗಲೇ ಕನ್ನಡದ ಕೆಲವು ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿರುವ ಕೃಷಿತಾ ಪಂಡ ನಾಯಕಿಯಾಗಿದ್ದಾರೆ. ಕೆಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಭರತ್ ಹಾಸನ್, ಪ್ರವರ್ಧಮಾನಕ್ಕೆ ಬಂದಿರುವ ನಟ ಪೂರ್ಣಚಂದ್ರ ಹಾಗೂ ಹೊಸ ಪ್ರತಿಭೆ ರಷ್‌ಮಾಲಿಕ್ ಹಾಗೂ ಸುಚೇಂದ್ರ ಪ್ರಸಾದ್ ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಈ ಚಿತ್ರದಲ್ಲಿ ಕಥೆಯೇ ಹಿರೋ ಎಂದರು.
ನಟಿ ಕೃಷಿತಾ ಪಂಡ ಮಾತನಾಡಿ, ವಾಸ್ತವ ಮತ್ತು ಬಣ್ಣದ ಬದುಕಿನ ನಡುವೆ ನಡೆಯುವ ತಾಕಲಾಟಗಳೇ ಚಿತ್ರದ ಕಥಾವಸ್ತು. ನಿರ್ದೇಶಕರು ಅತ್ಯಂತ ನವಿರಾಗಿ, ಸೂಕ್ಷ ್ಮವಾಗಿ ಕಥೆ ಹೆಣೆದಿದ್ದು, ಚಿತ್ರೀಕರಣದಲ್ಲೂ ಅದೇ ಶಿಸ್ತು ಕಾಪಾಡಿಕೊಂಡಿದ್ದಾರೆ. ಸಸ್ಪೆನ್ಸ್ ಮತ್ತು ಡ್ರಾಮಾ ಚಿತ್ರದ ಒಟ್ಟಾರೆ ತಿರುಳು ಎಂದು ಹೇಳಿದರು. ಉಳಿದಂತೆ ನಟರಾದ ಪ್ರಶಾಂತ್‌ಸಿದ್ಧಿ, ರಷ್‌ಮಾಲಿಕ್ ಸೇರಿದಂತೆ ಚಿತ್ರೀಕರಣದ ತಂಡದ ಸದಸ್ಯರು ಉಪಸ್ಥಿತರಿದ್ದರು.