ಕಡೂರು: ಸಸಿ ನೆಡುವ ಮೂಲಕ ಪತ್ರಕರ್ತರೂ ಕೂಡ ಪರಿಸರ ಸಂರಕ್ಷಣೆಗೆ ಕೈ ಜೋಡಿಸುತ್ತಿರುವುದು ಸಮಾಜಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ ಎಂದು ಕಡೂರು ತಾಲೂಕು ದಂಡಾಧಿಕಾರಿ ಉಮೇಶ್ ಅಭಿಪ್ರಾಯಪಟ್ಟರು.
ಕಡೂರು ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಜಿಲ್ಲಾ, ತಾಲೂಕು ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಜನಶಕ್ತಿ ಯೋಜನೆಯಲ್ಲಿ ವಿವಿಧ ರೀತಿಯಲ್ಲಿ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ 2015 ರಿಂದಲೂ ಕಡೂರು ತಾಲೂಕು ನಿರಂತರ ಬರಗಾಲಕ್ಕೆ ತುತ್ತಾಗುತ್ತಿದ್ದು, ನೀರಿನ ಸಂರಕ್ಷಣೆಗೆ ಕೇಂದ್ರ ಸರ್ಕಾರ ಜಾಗೃತಿ ಅಭಿಯಾನ ಆರಂಭಿಸಿದೆ. ಇದಕ್ಕೆ ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳ ಸಹಕಾರ ಮುಖ್ಯವಾಗಿದೆ. ಅದೇ ರೀತಿ ಪತ್ರಕರ್ತರು ಕೈಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯವಾಗಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ನೀರಿನ ಸದ್ಬಳಕೆ ಕುರಿತು ಅಭಿಯಾನಕ್ಕೆ ಎಲ್ಲರೂ ಮುಂದಾಗಬೇಕು. ಇಂತಹ ಮಹತ್ತರ ಕಾರ್ಯಕ್ಕೆ ಕಡೂರು ತಾಲೂಕಿನ ಪತ್ರಕರ್ತರೂ ಕೂಡ ಕೈಜೋಡಿಸುವ ಮೂಲಕ ಉತ್ತಮ ವಾತಾವರಣ ಮೂಡಿಸಿ, ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವುದು ಸಂತಸದ ಸಂಗತಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮನುಷ್ಯನ ಸ್ವಾರ್ಥದಿಂದ ಪರಿಸರದ ಮೂಲ ನಾಶವಾಗುವ ಮೂಲಕ ವಾತಾವರಣ ಹಾಳಾಗುತ್ತಿದೆ. ಇಂದು ಎಲ್ಲ ಕ್ಷೇತ್ರಗಳು ಕಲುಷಿತವಾಗುತ್ತಿವೆ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಲಕ ಪತ್ರಕರ್ತರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲೂಕು ಸಂಘದ ಅಧ್ಯಕ್ಷ ಎ.ಜೆ.ಪ್ರಕಾಶ್ ಮೂರ್ತಿ ಮಾತನಾಡಿ, ಸರ್ಕಾರಿ ಕಚೇರಿಗಳ ಮುಂದೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಪತ್ರಿಕಾ ದಿನ ಆಚರಿಸಲಾಗುತ್ತದೆ. ಅಧಿಕಾರಿಗಳ ಸಹಕಾರದಿಂದ ಪರಿಸರ ಉಳಿಸುವತ್ತ ಸಂಘ ಕಾರ್ಯಪ್ರವೃತ್ತವಾಗುತ್ತಿದೆ. ಯಾವುದೇ ಒಂದು ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಎಲ್ಲರ ಸಹಕಾರ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಬ್ಯಾಲದಾಳು ಕುಮಾರ್, ತಾಲೂಕು ಕಾರ್ಯದಶಿ ಬಾಲು ಮಚ್ಚೇರಿ, ಹಿರಿಯ ಪತ್ರಕರ್ತರಾದ ಸಿ.ಕೆ.ಮೂರ್ತಿ, ಬಾಲಕೃಷ್ಣ, ಹಿರೇನಲ್ಲೂರು ಶಿವು, ಎಸ್.ಕೆ.ಸೋಮು, ಕೆ.ಎನ್.ಕೃಷ್ಣಮೂರ್ತಿ, ರಘು, ಲವಕುಮಾರ್, ಅಜ್ಜಂಪುರದ ನಾಗೇಶ್,ಪತಂಜಲಿ ಯೋಗ ಕೇಂದ್ರದ ಅಧ್ಯಕ್ಷ ಬೆಂಕಿ ಶೇಖರಪ್ಪ, ಉಪ ತಹಶೀಲ್ದಾರ್ ಶಿವಮೂರ್ತಿ,ಅರಣ್ಯ ಇಲಾಖೆಯ ಸಿದ್ದಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.