ಕಡೂರು: ಪುರಸಭೆ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, 22 ವಾರ್ಡ್‌ಗಳಲ್ಲಿಯೂ ಸಮರ್ಥ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ ಹೇಳಿದರು.
ಪಟ್ಟಣದ ವಾರ್ಡ್ ಸಂಖ್ಯೆ 8 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೀಮೆಎಣ್ಣೆ ಮಲ್ಲೇಶಪ್ಪ ಪರ ಭಾನುವಾರ ಮತಯಾಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಪುರಸಭೆಯಲ್ಲಿ ಆಡಳಿತ ಹಿಡಿಯಲಿದೆ ಎಂದರು.
ಕಳೆದ ಬಾರಿಯೂ ಪುರಸಭೆ ಆಡಳಿತವನ್ನು ಕಾಂಗ್ರೆಸ್ ಪಕ್ಷವೇ ಹಿಡಿದಿದ್ದು, 13 ಸದಸ್ಯ ಬಲ ಪಡೆದಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಸ್ಥಾನ ಗಳಿಸುವ ವಿಶ್ವಾಸವಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರದ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆ ಎಂದು ಹೇಳಿದರು.
ದಿನೇ ದಿನೇ ಕಡೂರು ಪಟ್ಟಣ ಬೆಳೆಯುತ್ತಿದ್ದು ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದರೆ ಹೆಚ್ಚಿನ ಅನುದಾನವನ್ನು ರಾಜ್ಯ ಸರಕಾರದಿಂದ ತಂದು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು.
ಕೆಪಿಸಿಸಿ ಸದಸ್ಯ ಕೆ.ಎಸ್. ಆನಂದ್ ಮಾತನಾಡಿ, ಬೆಳೆಯುತ್ತಿರುವ ಬಡಾವಣೆಗಳು ಮೂಲ ಸೌಕರ್ಯಗಳನ್ನು ಪಡೆಯುವಲ್ಲಿ ಹಿಂದೆ ಬಿದ್ದಿವೆ. ಚರಂಡಿ ಮತ್ತು ಉತ್ತಮ ರಸ್ತೆಗಳನ್ನು ಇನ್ನಷ್ಟು ನಿರ್ಮಿಸಬೇಕಾದ ಜವಾಬ್ದಾರಿ ಇದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಸೀಮೆಎಣ್ಣೆ ಮಲ್ಲೇಶಪ್ಪ ಮಾತನಾಡಿ, 8ನೇ ವಾರ್ಡ್‌ನಲ್ಲಿ ಉತ್ತಮವಾದ ಉದ್ಯಾನದ ಕೊರತೆಯಿದೆ. ಚರಂಡಿ ಮತ್ತು ರಸ್ತೆ ಕಾಮಗಾರಿಗಳ ಅವಶ್ಯಕತೆ ಇದೆ. ಈ ಮೂಲ ಸೌಕರ್ಯದ ಜಾರಿಗೊಳಿಸುವ ದೃಷ್ಠಿಯಲ್ಲಿ ತಾವು ದುಡಿಯುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು, ಮುಖಂಡರಾದ ಮನೋಜ್, ಲಿಂಗೇಶ್, ಜಗದೀಶ್, ಸಂತೋಷ್, ಉಮೇಶ್, ಮಂಜಮ್ಮ, ಮಹಾಲಕ್ಷಿ ್ಮೕ ಇತರರು ಇದ್ದರು.