Advertisement

ಕೋವಿಡ್ ಪ್ರಕರಣ ಪತ್ತೆಯಾಗದಿರುವುದು ಜಿಲ್ಲೆಯ ಸೌಭಾಗ್ಯ

03:42 PM Apr 16, 2020 | Naveen |

ಕಡೂರು: ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್  ಸೋಂಕು ಪ್ರಕರಣ ಪತ್ತೆಯಾಗದಿರುವುದು ಜಿಲ್ಲೆಯ ಜನರ ಸೌಭಾಗ್ಯ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್‌.ಆನಂದ್‌ ಹೇಳಿದರು.

Advertisement

ಮಂಗಳವಾರ ಸಿಂಗಟಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಉಚಿತವಾಗಿ ಮಾಸ್ಕ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಡೂರು ಕ್ಷೇತ್ರದಾದ್ಯಂತ ವೈಯಕ್ತಿಕವಾಗಿ 50 ಸಾವಿರ ಮಾಸ್ಕ್ಗಳನ್ನು ವಿತರಿಸಲಾಗುತ್ತಿದೆ. ಜೊತೆಗೆ ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸ್ವಯಂ ಜಾಗೃತಿಯಾದರೆ ಮಾತ್ರ ಕೋವಿಡ್  ನಿಯಂತ್ರಣಕ್ಕೆ ಬರುತ್ತದೆ ಎಂದರು.

ಸರ್ಕಾರದ ನಿಯಮಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ತಲುಪುತ್ತಿರುವುದರಿಂದ ಜನರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ರೋಗದ ಲಕ್ಷಣಗಳು ಕಂಡು ಬಂದರೆ ಕೂಡಲೇ ಸ್ವಯಂ ಪ್ರೇರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಮೂಲಕ ರೋಗ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.

ಸರ್ಕಾರ ಎರಡು ತಿಂಗಳ ಪಡಿತರವನ್ನು ಮುಂಗಡವಾಗಿ ನೀಡುತ್ತಿದೆ. ಇದರಿಂದ ಆಹಾರ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗಲಿದೆ. ಆದರೆ ಇತರೆ ದಿನ ಬಳಕೆ ವಸ್ತುಗಳ ಕೊರತೆ ಉಂಟಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು. ಆರ್ಥಿಕವಾಗಿ ಸದೃಢರಾಗಿರುವವರು ಮುಕ್ತ ಮನಸ್ಸಿನಿಂದ ಬಡವರ ಸೇವೆಗೆ ಮುಂದಾಗಬೇಕು. ತಾಲೂಕಿನ ಪ್ರತಿ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರು ಸಹಾಯ ಹಸ್ತ ಸಮಿತಿ ರಚಿಸಿಕೊಂಡು ಬಡವರ ಸಹಾಯಕ್ಕೆ ಧಾವಿಸುವಂತೆ ಪಕ್ಷದ ವತಿಯಿಂದ ತಿಳಿಸಲಾಗಿದೆ ಎಂದು ಹೇಳಿದರು.

ಕಡೂರು ಮತ್ತು ಬೀರೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್‌, ತಾಪಂ ಸದಸ್ಯ ಪಿ.ಸಿ.ಪ್ರಸನ್ನ, ಬೀರೂರು ಪುರಸಭೆ ಸದಸ್ಯ ಕೆ.ಎನ್‌. ವಿನಾಯಕ್‌, ನಿಡುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಕೃಷ್ಣ ಅರಸ್‌, ಮುಖಂಡರಾದ ಕಡೂರು ಹುಚ್ಚಪ್ಪ, ಗರ್ಜೆ ರವಿ, ಸಿದ್ದರಾಮಪ್ಪ, ಬಿ.ಲೋಹಿತ್‌, ಜಗದೀಶ್‌, ಪಿ.ಎಂ.ಸತೀಶ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next