Advertisement

ಬರಿದಾಗಿದ್ದ ಮದಗದಕೆರೆಯಲ್ಲೀಗ 40 ಅಡಿ ನೀರು

02:56 PM Aug 09, 2019 | Naveen |

ಕಡೂರು: ತಾಲೂಕಿನ ರೈತರ ಜೀವನಾಡಿ, ಐತಿಹಾಸಿಕ ಮಹತ್ವದ ಮದಗದ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಯುತ್ತಿದ್ದು, ಗುರುವಾರ 40 ಅಡಿ ನೀರು ಸಂಗ್ರಹವಾಗಿದೆ. ಒಟ್ಟು 65ಅಡಿ ಸಾಮರ್ಥ್ಯದ ಕೆರೆ ತುಂಬಲು ಇನ್ನು 25 ಅಡಿ ನೀರಿನ ಅವಶ್ಯಕತೆ ಇದೆ.

Advertisement

ಜಾನಪದ ಮಹತ್ವವಿರುವ ಈ ಕೆರೆ ತುಂಬುವುದೇ ಒಂದು ವಿಶೇಷ. ‘ಮಾಯದಂತ ಮಳೆ ಬಂದು ಮದಗಾದ ಕೆರೆ ತುಂಬಿತು’ ಎಂಬ ಜನಪದ ನುಡಿಯಂತೆ ಕೆರೆ ತುಂಬುತ್ತದೆ.

ಸಾವಿರಾರು ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿರುವ ಮದಗದಕೆರೆ ಕಳೆದ ವರ್ಷದ ಶ್ರಾವಣ ಮಾಸದಲ್ಲಿ ತುಂಬಿ ಕೋಡಿಬಿದ್ದಿತ್ತು. ಹಾಗಾಗಿ, ಸಂಭ್ರಮದಲ್ಲಿದ್ದ ರೈತರು ಈ ಬಾರಿ ಮದಗದಕೆರೆ ಕೋಡಿ ಬೀಳದೆ ಇರುವುದರಿಂದ ಆತಂಕಕ್ಕೆ ಒಳಗಾಗಿದ್ದರು. ಆದರೆ, ಕಳೆದ ಒಂದು ವಾರದಿಂದ ಚಿಕ್ಕಮಗಳೂರಿನ ಗಿರಿ ಪರ್ವತಗಳಲ್ಲಿ ಬೀಳುತ್ತಿರುವ ಮಳೆಯಿಂದ ಮದಗದಕೆರೆಗೆ ನೀರು ಹರಿಯುತ್ತಿರುವುದರಿಂದ ರೈತರಲ್ಲಿ ಹರ್ಷ ಮೂಡಿದೆ.

ಚಿಕ್ಕಮಗಳೂರು ಬಾಬಾ ಬುಡನ್‌ಗಿರಿಯ ಬೆಟ್ಟಗಳ ತಪ್ಪಲಿನಲ್ಲಿ, ಕಾಫಿ ತೋಟಗಳಲ್ಲಿ ಹೆಚ್ಚಿನ ಮಳೆಯಾದರೆ, ದತ್ತಪೀಠ, ತೊಗರಿ ಅಂಕಲ್, ಹೊಸಪೇಟೆ, ಮಲ್ಲೇನಹಳ್ಳಿ, ನಾಯಿಹಳ್ಳ, ಭೂತನಗಾದೆ, ಸಿದ್ಧರಹಳ್ಳಿ ಕಾಡು, ದೊಡ್ಡಯ್ಯನಗುಡ್ಡಗಳಲ್ಲಿ ಬೀಳುವ ಮಳೆ ನೀರು ಹರಿದು ಮದಗದಕೆರೆ ತುಂಬುವುದು ವಾಡಿಕೆಯಾಗಿದೆ.

ಮದಗದಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಕೆರೆ ಸುಮಾರು 65ಅಡಿ ಆಳವಾಗಿದ್ದು, ಕೆರೆಯ ವಿಸ್ತೀರ್ಣ 131 ಹೆಕ್ಟೇರ್‌(300 ಎಕರೆ) ಭೂ ಪ್ರದೇಶವಿದೆ. ಸುತ್ತಲು ಬೆಟ್ಟ-ಗುಡ್ಡಗಳ ಹಸಿರಿನ ಹೊದಿಕೆಯಿದೆ. ಸುಂದರ ಪ್ರಕೃತಿಯಲ್ಲಿ ಕೆರೆ ನಿರ್ಮಾಣವಾಗಿದೆ. ಕೆರೆಯಲ್ಲಿ ನೀರಿನ ಸಾಮರ್ಥ್ಯ 1 ಟಿಎಂಸಿಗೂ ಕಡಿಮೆ ಎಂದು ಅಂದಾಜಿಸಲಾಗಿದೆ. ಇದೀಗ 40 ಅಡಿ ನೀರು ಬಂದಿದೆ. ಕೆರೆ ತುಂಬಿ ಕೋಡಿ ಬಿದ್ದರೆ ಸುಮಾರು 10 ಸಾವಿರ ಎಕರೆ ಭೂ ಪ್ರದೇಶಕ್ಕೆ ನೀರು ದೊರೆಯಲಿದೆ. ಹಳೇ ತೂಬು ಶಿಥಿಲವಾಗಿದ್ದು, ಶಾಸಕ ಬೆಳ್ಳಿಪ್ರಕಾಶ್‌ ವಿಶೇಷ ಕಾಳಜಿ ವಹಿಸಿ ದಾನಿಗಳ ಸಹಕಾರದೊಂದಿಗೆ ತೂಬು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಹೊಸ ತೂಬಿನ ನಿರ್ಮಾಣ ಭರದಿಂದ ಸಾಗಿದ್ದು, ಮಳೆಯಿಂದಾಗಿ ತಾತ್ಕಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ ಮಂಜುನಾಥ್‌ ತಿಳಿಸಿದರು.

Advertisement

ಮದಗದಕೆರೆ ತುಂಬಿ ಕೋಡಿ ಬಿದ್ದರೆ ಬರಗಾಲಕ್ಕೆ ತುತ್ತಾಗುವ ಬಯಲುಸೀಮೆಯ 30ಕ್ಕೂ ಹೆಚ್ಚಿನ ಕೆರೆಗಳು ತುಂಬಲಿವೆ.

Advertisement

Udayavani is now on Telegram. Click here to join our channel and stay updated with the latest news.

Next