ಪ್ರಕಾಶ್ ಮೂರ್ತಿ ಏ.ಜೆ.
ಕಡೂರು: ಸದಾ ರೋಗಿಗಳಿಂದ ಗಿಜಿಗುಡುತ್ತಿದ್ದ ತಾಲೂಕಿನ ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಸಣ್ಣಪುಟ್ಟ ಕಾಯಿಲೆಗಳಿಗೆ ಬರುವಂತಹ ರೋಗಿಗಳು ಸಮರ್ಪಕ ಚಿಕಿತ್ಸೆ ದೊರೆಯದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಪತ್ರೆ ಕೆ.ಶಿವಪ್ಪಯ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಕಾಲಕ್ಕೆ ತಾಲೂಕು ಕೇಂದ್ರಗಳಲ್ಲೂ ಇರದಂತಹ ವೈದ್ಯರು ಮತ್ತು ದಾದಿಯರ ಸೇವೆ ಇಲ್ಲಿ ಉತ್ತಮವಾಗಿ ದೊರೆಯುತ್ತಿತ್ತು. ಲಿಂಗದಹಳ್ಳಿ, ಕೆಮ್ಮಣ್ಣುಗುಂಡಿ, ಸಖರಾಯಪಟ್ಟಣ, ಬಾಸೂರು, ಬಿಸಲೆರೆ, ಅಂತರಘಟ್ಟೆ, ಹೊಸದುರ್ಗದಂತಹ ದೂರದ ಹಳ್ಳಿಗಳಿಂದ ಅಬಾಲ ವೃದ್ಧರಾದಿಯಾಗಿ ಮಹಿಳೆಯರು, ಗರ್ಭಿಣಿಯರು ಇಲ್ಲಿಗೆ ಆಗಮಿಸುತ್ತಿದ್ದರು. ಸದಾ ರೋಗಿಗಳಿಂದ ತುಂಬಿ ತುಳುಕುತ್ತಿದ್ದುದರಿಂದ ಎಷ್ಟೋ ರೋಗಿಗಳು ನೆಲದ ಮೇಲೆಯೇ ಚಿಕಿತ್ಸೆ ಪಡೆಯುತ್ತಿದ್ದರು.
ಸದಾ ತುಂಬಿರುತ್ತಿದ್ದ ವಾರ್ಡ್‌ಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವಂತಹ 50ಹಾಸಿಗೆಯುಳ್ಳ ಈ ಆಸ್ಪತ್ರೆಯಲ್ಲಿ ಕೆಲವು ವರ್ಷಗಳ ಹಿಂದೆ ಉತ್ತಮ ನುರಿತ ತಜ್ಞ ವೈದ್ಯರು ಸಾಮಾಜಿಕ ಕಳಕಳಿಯಿಂದ ಆರೋಗ್ಯ ಸೇವೆ ನೀಡುತ್ತಿದ್ದು, ದಿನವೊಂದಕ್ಕೆ 500ಕ್ಕೂ ಹೆಚ್ಚು ಹೊರರೋಗಿಗಳು ಬಂದು ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದರು. ಪುರುಷರ ಸಾಮಾನ್ಯ ಮತ್ತು ವಿಶೇಷ ವಾರ್ಡ್‌ಗಳು, ಮಹಿಳೆಯರ ವಾರ್ಡ್, ಹೆರಿಗೆ ವಾರ್ಡ್ ಮತ್ತು ತೀವ್ರ ನಿಗಾ ಘಟಕ ಸೇರಿದಂತೆ ಎಲ್ಲಾ ವಾರ್ಡುಗಳು ಸಾಮಾನ್ಯವಾಗಿ ತುಂಬಿರುತ್ತಿದ್ದವು. ಎಕ್ಸರೇ, ರಕ್ತ ಪರೀಕ್ಷಾ ಘಟಕ ಮತ್ತು ಎಲ್ಲಾ ವಿಭಾಗದಲ್ಲಿ ಉತ್ತಮ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು.
ಕರ್ತವ್ಯದಿಂದ ವಿಮುಕ್ತರಾದ ವೈದ್ಯರು: ಇತ್ತೀಚಿನ ದಿನಗಳಲ್ಲಿ ಒಬ್ಬೊಬ್ಬರಾಗಿ ವೈದ್ಯರು ಕರ್ತವ್ಯದಿಂದ ವಿಮುಕ್ತರಾಗುತ್ತಿದ್ದು, ಇದೀಗ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರು, ಶಸ್ತ್ರ ಚಿಕಿತ್ಸಾ ವೈದ್ಯರು, ಮಕ್ಕಳ ತಜ್ಞರು, ಆಯುಷ್ ವೈದ್ಯರು ಮತ್ತು ದಂತ ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇರುವ ವೈದ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಮತ್ತು ಒತ್ತಡ ಬೀಳುತ್ತಲಿದ್ದು, ಹೊರರೋಗಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಒಳರೋಗಿಗಳ ವಿಭಾಗ ಬಹುತೇಕ ಖಾಲಿಯಾಗಿದ್ದು, ಸಿಬ್ಬಂದಿ ಕೆಲಸವಿಲ್ಲದೇ ಸುಮ್ಮನೆ ಕುಳಿತುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ, ಬರುವ ರೋಗಿಗಳು ಗೊಂದಲಕ್ಕೆ ಒಳಗಾಗಿ ಬೇರೆ ಆಸ್ಪತ್ರೆಗಳತ್ತ ಮುಖ ಮಾಡುವಂತಾಗಿದೆ.
ವೈದ್ಯರಿಗೆ ಹಗಲು,ರಾತ್ರಿ ಕೆಲಸ: ಆಸ್ಪತ್ರೆಯಲ್ಲಿ ಇರುವ ಮೂವರು ವೈದ್ಯರು ಹೊರರೋಗಿಗಳ ವಿಭಾಗ ನೋಡಿಕೊಳ್ಳುವಷ್ಟರಲ್ಲಿ ಯಾವುದಾದರೊಂದು ತುರ್ತು ಚಿಕಿತ್ಸಾ ರೋಗಿ ಬಂದರೆ ವೈದ್ಯರಿಗೆ ಸಂಕಷ್ಟ ಎದುರಾಗಿಬಿಡುತ್ತದೆ. ಹೊರರೋಗಿಗಳ ತಪಾಸಣೆ ಮಾಡಬೇಕು, ಶಸ್ತ್ರ ಚಿಕಿತ್ಸೆ ನಡೆಸಬೇಕು. ಇದರ ನಡುವೆ ಹೆದ್ದಾರಿಗಳಲ್ಲಿ ನಡೆಯುವ ಅಪಘಾತ, ಸುತ್ತಮುತ್ತಲ ಸಂಭವಿಸುವ ಸಾವು, ನೋವು ಪ್ರಕರಣಗಳಿಗೆ ಸಂಬಂಧಿಸಿ ಶವ ಪರೀಕ್ಷೆ ಕೂಡ ಮಾಡಬೇಕಾದ ಅನಿವಾರ್ಯತೆಯಿದೆ. ಇದರ ನಡುವೆ ಬೆಳಗಿನ ಕಾರ್ಯದ ಜೊತೆಗೆ ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸಬೇಕಾದ ಒತ್ತಡ ಇಲ್ಲಿರುವ ವೈದ್ಯರ ಮೇಲಿದೆ.
ಇಬ್ಬರು ವೈದ್ಯರ ಬೇರೆಡೆ ನಿಯೋಜನೆ: ಸಾರ್ವಜನಿಕ ಆಸ್ಪತ್ರೆಯಲ್ಲಿ ಸದ್ಯ 6 ಜನ ದಾದಿಯರು, ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ನ 10ಹೊರಗುತ್ತಿಗೆ ನೌಕರರು ಮತ್ತು ಡಿ ದರ್ಜೆ ಸಿಬ್ಬಂದಿ ಮತ್ತು ರಕ್ತ ಪರೀಕ್ಷಾ ಘಟಕದಲ್ಲಿ ಸಮರ್ಪಕ ಸಿಬ್ಬಂದಿ ಇದ್ದಾರೆ. ಆಡಳಿತ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕರೇ ಇಲ್ಲವಾಗಿದ್ದು, ಇರುವ ಇಬ್ಬರು ವೈದ್ಯರು ನಿಯೋಜನೆ ಮೇಲೆ ಬೇರೆಡೆ ತೆರಳಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಘಟಕ ಮತ್ತು ಇತರೇ ವಿಭಾಗಕ್ಕೆ ಹೆಚ್ಚಿನ ವೈದ್ಯರನ್ನು ನೇಮಿಸುವ ಮೂಲಕ ಹಿಂದಿನಿಂದಲೂ ಉತ್ತಮ ಸೇವೆಗೆ ಹೆಸರುವಾಸಿಯಾಗಿರುವ ಸಾರ್ವಜನಿಕ ಆಸ್ಪತ್ರೆಯನ್ನು ಮಾದರಿಯಾಗಿಸಬೇಕಿದೆ. ಜೊತೆಗೆ ಮೇಲ್ದರ್ಜೆಗೆ ಏರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.