ಕಡೂರು: ಸರ್ಕಾರಿ ಶಾಲೆಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸ ಬಾರದೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಮಕ್ಕಳು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ತಾಲೂಕಿನ ಕ್ಯಾದೀಗೆರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಶಾಲೆಗೆ ಕರ್ತವ್ಯಕ್ಕಾಗಿ ಹಾಜರಾಗಲು ಬಂದಿದ್ದ ಹೆಚ್ಚುವರಿ ಶಿಕ್ಷಕ ವರದಿ ಮಾಡಿಕೊಳ್ಳಲು ಅವಕಾಶ ನೀಡದೇ ಗ್ರಾಮಸ್ಥರು ವಾಪಸ್ ಕಳುಹಿಸಿರುವುದಾಗಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕ್ಯಾದೀಗೆರೆ ಓಂಕಾರ್ ಆವರು ತಿಳಿಸಿದರು.
ಘಟನೆಯ ವಿವರ: ಕ್ಯಾದೀಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಗಳಿದ್ದು, ಒಟ್ಟಾರೆ 78 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕ ಸೇರಿದಂತೆ 5 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹೆಚ್ಚುವರಿ ಶಿಕ್ಷಕರು ಬೇಡ: ಕಳೆದ ವರ್ಷದ ಅಂಕಿ ಅಂಶಗಳ ಆಧಾರದ ಮೇಲೆ ಹೆಚ್ಚುವರಿ ಶಿಕ್ಷಕರಾಗಿ ಪಿ.ಕೋಡಿಹಳ್ಳಿ ಶಾಲೆ ಶಿಕ್ಷಕ ಶಶಿಧರ್ ಅವರನ್ನು ಶಿಕ್ಷಣ ಇಲಾಖೆ ನಿಯೋಜನೆ ಮಾಡಿದ್ದರಿಂದ ಅವರು ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರ ಪ್ರಕಾರ, ಶಿಕ್ಷಣ ಇಲಾಖೆ ನಿಯಮಗಳ ಪ್ರಕಾರ, ಗ್ರಾಮದ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ 5 ಜನ ಶಿಕ್ಷಕರು ಸರಿಯಾಗಿದೆ. ಅವರು ಕರ್ತವ್ಯಕ್ಕೆ ಹಾಜರಾದರೆ ಇರುವ 5 ಜನರಲ್ಲಿ ಹಿರಿಯ ಶಿಕ್ಷಕರನ್ನು ಮುಂದಿನ 6 ತಿಂಗಳಲ್ಲಿ ಪುನಃ ಹೆಚ್ಚುವರಿ ಎಂದು ಗುರುತಿಸಲಾಗುತ್ತದೆ. ಮತ್ತೆ ಅವರಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ ಹೆಚ್ಚುವರಿ ಶಿಕ್ಷಕರು ಬೇಡ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಸರ್ಕಾರಿ ಶಾಲೆ ಉಳಿವಿಗೆ ಹೋರಾಟ: ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣಗಳತ್ತ ಮುಖ ಮಾಡಿದ್ದು, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಶಾಲಾಭಿವೃದ್ಧಿ ಸಮಿತಿಗಳು ಸಾಹಸ ಪಡು ವಂತಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹೆಚ್ಚುವರಿ ಭೂತವನ್ನು ಬಿಟ್ಟು ಸರಿಯಾಗಿ ನಡೆಯುತ್ತಿರುವ ಶಾಲೆಗಳಲ್ಲಿನ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ ಎಂದು ಕ್ಯಾದೀಗೆರೆ ಓಂಕಾರ್ ದೂರಿದರು. ಅಲ್ಲದೇ, ಇಲಾಖೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ಕೆ.ಎನ್.ರಾಜಪ್ಪ, ಶಿವು, ಗೌಡರ ಮಲ್ಲಿಕಾರ್ಜುನಪ್ಪ, ಕೆ.ಆರ್.ವೆಂಕಟೇಶ್, ದಲಿತ ಮುಖಂಡರಾದ ಬಸವರಾಜು, ಗ್ರಾಪಂ ಸದಸ್ಯರಾದ ಭಾರತಿ ಉಮೇಶ್, ಪ್ರತಿಭಾ ಮುಂತಾದವರು ಭಾಗವಹಿಸಿದ್ದರು.
ಕಳೆದ ವರ್ಷ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿದ್ದರ ಮೇರೆಗೆ ಆಯುಕ್ತರ ಆದೇಶದಂತೆ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಹೋಗಿದ್ದರು. ಈ ವೇಳೆ ಎಸ್‌ಡಿಎಂಸಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ಮಾಡಿರುವುದು ಗಮನಕ್ಕೆ ಬಂದಿದೆ. ಇಲಾಖೆಯ ಕಾನೂನು ಪ್ರಕಾರ ಶಾಲಾ ಮುಖ್ಯ ಶಿಕ್ಷಕರು ವರದಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಕಾರಣ ನೀಡಬೇಕು. ಮುಖ್ಯ ಶಿಕ್ಷಕರಿಂದ ವರದಿ ಪಡೆದು ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡುತ್ತೇನೆ.
•
ಜಿ.ರಂಗನಾಥಸ್ವಾಮಿ
ಕ್ಷೇತ್ರ ಶಿಕ್ಷಾಣಾಧಿಕಾರಿ, ಕಡೂರು