Advertisement

ಕಡೂರು ಆಸ್ಪತ್ರೆಗೆ ಪ್ರಥಮ ಸ್ಥಾನ

12:19 PM Sep 15, 2019 | Team Udayavani |

ಕಡೂರು: ಮೈಸೂರು ವಿಭಾಗ ಮಟ್ಟದಲ್ಲಿ ಬರುವ 48 ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕಡೂರು ಆಸ್ಪತ್ರೆ ಮೊದಲ ಸ್ಥಾನದಲ್ಲಿದೆ ಎಂದು ವಿಭಾಗೀಯ ಜಂಟಿ ನಿರ್ದೇಶಕ ಡಾ| ರಾಮಚಂದ್ರ ಬಗೀರಿ ಹೇಳಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಹೆರಿಗೆ ವಿಭಾಗ, ವಾರ್ಡ್‌, ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಸಂಪೂರ್ಣ ಆಸ್ಪತ್ರೆಯನ್ನು ಸಹಾಯಕ ನಿರ್ದೇಶಕರ ಜತೆಗೂಡಿ ತಪಾಸಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

100 ಹಾಸಿಗೆಯ ಈ ಆಸ್ಪತ್ರೆ ಸೇವೆಯಲ್ಲಿ ಉನ್ನತ ಶ್ರೇಣಿಯಲ್ಲಿದ್ದು, ನಿತ್ಯ 800ಕ್ಕೂ ಹೆಚ್ಚು ಹೊರರೋಗಿಗಳು ತಪಾಸಣೆಗಾಗಿ ಬರುತ್ತಿದ್ದಾರೆ. ಶೇ. 90ಕ್ಕಿಂತ ಹೆಚ್ಚು ಒಳ ರೋಗಿಗಳು ದಾಖಲಾಗಿದ್ದು, ಶಸ್ತ್ರ ಚಿಕಿತ್ಸೆ, ಕಣ್ಣು, ಮೂಳೆ, ಹೆರಿಗೆ ಮುಂತಾದ ವಿಭಾಗಗಳು ಜನರಿಗೆ ಉತ್ತಮ ಸೇವೆ ನೀಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.

ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಘಟಕವಿದ್ದು, ಇದರಲ್ಲಿ ಕೇವಲ ಎರಡು ಯಂತ್ರಗಳು ಇವೆ. ತಿಂಗಳಿಗೆ 18 ರೋಗಿಗಳು ಡಯಾಲಿಸಿಸ್‌ಗೆ ಒಳಪಡುತ್ತಿದ್ದಾರೆ. ಐದು ರೋಗಿಗಳು ಕಾಯ್ದಿರಿಸಿಕೊಂಡಿದ್ದಾರೆ. ಮತ್ತೂಂದು ಡಯಾಲಿಸಿಸ್‌ ಯಂತ್ರಕ್ಕೆ ಬೇಡಿಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಜರಿದ್ದ ಆಡಳಿತ ವೈದ್ಯಾಧಿಕಾರಿ ಡಾ| ಉಮೇಶ್‌ ಅವರಿಗೆ ಸೂಚಿಸಿದರು.

ಮೂರು ಹಾಸಿಗೆಯ ತೀವ್ರ ನಿಗಾ ಘಟಕ ಈ ಆಸ್ಪತ್ರೆಯಲ್ಲಿದ್ದು, ಇದಕ್ಕೆ ಪ್ರತ್ಯೇಕ ವೈದ್ಯರು ಮತ್ತು ಸಿಬ್ಬಂದಿಯ ನೇಮಕದ ಕುರಿತು ಗಮನ ಸೆಳೆದಾಗ, ಈ ಘಟಕ ಕೇವಲ ರೋಗಿಯ ತಾತ್ಕಾಲಿಕ ಹಂತದ ಚಿಕಿತ್ಸೆಗೆ ಬಳಕೆ ಮಾಡಿಕೊಂಡು ರೋಗಿ ಆಪತ್ತಿನ ಹಂತದಿಂದ ಹೊರಬಂದ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಕಳುಹಿಸಬಹುದು. ತೀವ್ರ ನಿಗಾ ಘಟಕದಲ್ಲಿ ಸ್ಥಳೀಯ ವೈದ್ಯರೇ ಕೆಲಸ ಮಾಡುತ್ತಾರೆ ಎಂದು ಉತ್ತರಿಸಿದರು.

Advertisement

ಬಹುಮುಖ್ಯವಾಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೈದ್ಯರ ಕೊರತೆ ಕಾಡುತ್ತಿದ್ದು, ಸುತ್ತಮುತ್ತ ಯಾವುದೇ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೈದ್ಯರ ಲಭ್ಯತೆ ಇಲ್ಲದಿರುವುದರಿಂದ ಹೆಚ್ಚುವರಿ ನಿಯೋಜನೆ ಸಾಧ್ಯವಿಲ್ಲ. ಬದಲಿಗೆ ಇರುವ ಹೆರಿಗೆ ವೈದ್ಯರಿಗೆ ಸ್ಕಾ ್ಯನಿಂಗ್‌ ತರಬೇತಿ ನೀಡಿ ತಾತ್ಕಾಲಿಕವಾಗಿ ಗರ್ಭಿಣಿಯರ ಸ್ಕ್ಯಾನಿಂಗ್  ಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತಂಡದಲ್ಲಿ ಸಹಾಯಕ ನಿರ್ದೇಶಕ ಡಾ| ಪ್ರಸಾದ್‌, ಜಿಲ್ಲಾ ನೋಡೆಲ್ ಅಧಿಕಾರಿ ಡಾ| ರಂಗಸ್ವಾಮಿ, ಸಹಾಯಕ ನಿರ್ದೇಶಕ ಡಾ| ಎಚ್. ರಾಮಚಂದ್ರ, ತಾಲೂಕು ವೈದ್ಯಾಧಿಕಾರಿ ಡಾ| ಗುರುಮೂರ್ತಿ, ಆಡಳಿತ ವೈದಾಧಿಕಾರಿ ಡಾ| ಉಮೇಶ್‌, ಅರವಳಿಕೆ ತಜ್ಞ ಡಾ| ಎಚ್.ಎಸ್‌.ಮೋಹನ್‌, ಡಾ| ಎಸ್‌.ವಿ.ದೀಪಕ್‌ ಸೇರಿದಂತೆ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಜಂಟಿ ನಿರ್ದೇಶಕ ಡಾ| ರಾಮಚಂದ್ರ ಬಗೀರಿ ಅವರು ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next