Advertisement

ನೀರಿನ ಮಿತ ಬಳಕೆಗೆ ಜಾಗೃತಿ ಮುಖ್ಯ

11:17 AM Jul 17, 2019 | Naveen |

ಕಡೂರು: ಪ್ರಸ್ತುತ ದಿನಗಳಲ್ಲಿ ಏರಿಕೆಯಾಗುತ್ತಿರುವ ಜನಸಂಖ್ಯೆ, ಇಳಿಮುಖವಾಗುತ್ತಿರುವ ವಾಡಿಕೆ ಮಳೆ ಪ್ರಮಾಣ, ಪ್ರಕೃತಿ ವೈಪರೀತ್ಯಗಳ ವ್ಯತ್ಯಾಸದಿಂದ ಪ್ರತಿ ಹನಿ ನೀರು ಅಮೃತವಾಗುತ್ತಿದೆ. ಹಾಗಾಗಿ, ಪ್ರತಿಯೊಂದು ಜೀವಿಯನ್ನು ಕಾಪಾಡುವುದು ಪ್ರತಿಯೊಬ್ಬರ ಧ್ಯೇಯವಾಗಬೇಕೆಂದು ಕೇಂದ್ರ ಪರಿಸರ ಇಲಾಖೆ ಸಲಹೆಗಾರ ಜೇಮ್ಸ್‌ ಮ್ಯಾಥ್ಯೂ ಹೇಳಿದ್ದಾರೆ.

Advertisement

ಕಡೂರು ತಾಪಂ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನ ಯೋಜನೆಯಡಿ ನಡೆದ ಕಾರ್ಯಕ್ರಮದಲ್ಲಿ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ದೇಶದ 256 ಜಿಲ್ಲೆಗಳ ಪೈಕಿ 1,592 ತಾಲೂಕುಗಳು ಹಾಗೂ ಕರ್ನಾಟಕದ 18 ಜಿಲ್ಲೆಗಳಲ್ಲಿ 59 ತಾಲೂಕುಗಳು ಯೋಜನೆಗೆ ಒಳಪಟ್ಟಿವೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಈ ಯೋಜನೆ ಜಾರಿಯಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ನೀರಿನ ಮಿತ ಬಳಕೆ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕಾಗಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಪ್ರತಿಯೊಂದು ಹಳ್ಳಿಗಳಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸುವ ಜೊತೆಗೆ ಎಲ್ಲಾ ಸರ್ಕಾರಿ ಕಟ್ಟಡ ಹೊಸದಾಗಿ ನಿರ್ಮಿಸುವ ಮನೆಗಳಿಗೆ ಮಳೆ ನೀರು ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮ ಪಾಲಿಸಬೇಕು. ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಬೇಕು. ಕೆರೆ, ಬಾವಿ, ಬೋರ್‌ವೆಲ್ಗಳಿಗೆ ನೀರು ಇಂಗುವ ವ್ಯವಸ್ಥೆ ಕೈಗೊಳ್ಳಬೇಕೆಂದು ಹೇಳಿದರು.

ನಮ್ಮ ಪೂರ್ವಿಕರು ಹೆಚ್ಚಾಗಿ ಓದಿದವರಲ್ಲದಿದ್ದರೂ ಕೆರೆ, ಕಟ್ಟೆ, ಗೋಕಟ್ಟೆ, ಚೆಕ್‌ಡ್ಯಾಂ, ಭೂಮಿಗೆ ನೀರು ಇಂಗಿಸುವ ಕೆಲವೊಂದು ಮಹತ್ತರ ಅಂಶಗಳನ್ನು ಅಳವಡಿಸಿಕೊಂಡಿದ್ದ ರಿಂದ ಅಂತರ್ಜಲ ಇತ್ತು. ಕಡೂರು ತಾಲೂಕು ಬರಪೀಡಿತ ಪ್ರದೇಶವೆಂಬ ಖ್ಯಾತಿಯಿಂದ ಹೊರಬರಬೇಕಾದರೆ ಎಲ್ಲಾ ಹಳ್ಳಿಗಳ ಕೆರೆಗಳನ್ನು ಪುನಃಶ್ಚೇತನ ಮಾಡಬೇಕು. ಕೆರೆಗಳಿಗೆ ಮಳೆ ನೀರು ಸರಾಗವಾಗಿ ಸೇರುವಂತೆ ನೋಡಿಕೊಳ್ಳಬೇಕು. ಗಿಡ-ಮರಗಳನ್ನು ಹೆಚ್ಚು-ಹೆಚ್ಚು ನೆಡುವುದರ ಜೊತೆಗೆ ಪರಿಸರಕ್ಕೆ ಪೂರಕ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಸರ್ಕಾರದ ಇಲಾಖೆಗಳ ಹಾಗೂ ಜನಸಾಮಾನ್ಯರ ಮನೆ-ಮನಸ್ಸುಗಳು ಜಾಗೃತಿಗೆ ಮುಂದಾಗಬೇಕು. ಜಲಶಕ್ತಿ ಯೋಜನೆ ಬಹಳ ಉಪಯುಕ್ತವಾದದ್ದು. ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಈ ಯೋಜನೆಯ ಯಶಸ್ವಿಗೆ ಬಹಳ ಉತ್ಸುಕರಾಗಿದ್ದಾರೆ. ಪ್ರತಿ ವಾರ ಇದರ ಮೆಲುಸ್ತುವಾರಿ ಮಾಡುತ್ತಿರುವುದು ಹಾಗೂ ಪ್ರತಿ ದಿನದ ಮಾಹಿತಿ ಪಡೆಯುತ್ತಿರುವುದು ನೋಡಿದರೆ, ಕಡೂರು ತಾಲೂಕಿನಲ್ಲಿ ಜಲಶಕ್ತಿ ಯೋಜನೆಯನ್ನು ಬಹಳ ಯಶಸ್ವಿಯಾಗಿ ಜಾರಿಯಾಗಲು ಸ್ವತಃ ಆಸಕ್ತಿ ವಹಿಸಿರುವುದು ಕಂಡುಬರುತ್ತಿದೆ ಎಂದರು.

Advertisement

ಕೇಂದ್ರ ಸಮಿತಿ ಸದಸ್ಯರಾದ ಹೆಚ್ಚುವರಿ ಮುಖ್ಯ ಇಂಜಿನಿಯರ್‌ ಆರ್‌.ಸುಶೀಲ್ ಖಜೂರಿಯ ಮಾತನಾಡಿ, ದೇಶದಲ್ಲಿ ಪಾರಂಪರಿಕ ಜಲಮೂಲಗಳಾದ ಕೆರೆ, ಬಾವಿ, ನದಿಗಳನ್ನು ಸಂರಕ್ಷಣೆ ಮಾಡದಿದ್ದರೆ ಪ್ರತಿಜೀವ ರಾಶಿಗಳಿಗೆ ಕಂಟಕ ಎದುರಾಗಲಿದೆ. ಹಾಗಾಗಿ, ಜಲಸಂರಕ್ಷಣೆ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕೆ ಮುಖ್ಯವಾಗಿ ಸಮುದಾಯ ಬಹಳ ಮುಖ್ಯ. ಇದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಭಾವಿಸಿ ಪ್ರತಿ ಮನೆಯಿಂದ ನೀರು ಸಂರಕ್ಷಣೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಮಿತಿ ಸದಸ್ಯ ಸಂಶೋಧಕ ಶ್ರೀನಿವಾಸ ವಿಠಲ್ ಮಾತನಾಡಿ, ಜಲಶಕ್ತಿ, ಅಮೃತ್‌ ಯೋಜನೆಯಂತಹ ಯೋಜನೆಗಳನ್ನು ತ್ವರಿತವಾಗಿ ಜಾರಿಯಾಗಲು ಹಾಗೂ ಶಿಸ್ತುಬದ್ಧ ಯೋಜನೆಯ ಅಂದಾಜು ಪಟ್ಟಿ ತಯಾರಿಸಿ ಲೋಪ‌ವಾಗದಂತೆ ಕಾರ್ಯಗತ ಮಾಡಲು ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌ ಜಲಶಕ್ತಿ ಯೋಜನೆಯ ಮೇಲುಸ್ತುವಾರಿ ಸದಸ್ಯರಾಗಿದ್ದು, ಕಡೂರು ತಾಲೂಕಿನ ಸುಮಾರು 60 ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಕೆರೆ, ಕುಡಿಯುವ ನೀರಿನ ಬೋರ್‌ವೇಲ್ಗಳು, ಬಾವಿಗಳ ಪುನಃಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತರ್ಜಲ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ತಾಪಂ ಇಒ ಡಾ.ದೇವರಾಜ ನಾಯ್ಕ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next