Advertisement

ನೀರಾವರಿ ಯೋಜನೆಗೆ ಜನರ ಸಹಭಾಗಿತ್ವ ಅಗತ್ಯ

04:09 PM Jul 27, 2019 | Naveen |

ಕಡೂರು: ನೀರಾವರಿ ಯೋಜನೆಗಳ ಜಾರಿ ಯಲ್ಲಿ ಜನಸಮುದಾಯದ ಸಹಭಾಗಿತ್ವ ಇದ್ದರೆ ಪ್ರತಿಫಲ ಬಹುಬೇಗನೆ ಸಿಗಲಿದೆ ಎಂದು ಜಿಪಂ ಸದಸ್ಯ ಶರತ್‌ ಕೃಷ್ಣಮೂರ್ತಿ ಹೇಳಿದರು.

Advertisement

ಪಟ್ಟಣದ ಜ್ಞಾನಭಾರತಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಮತ್ತು ಕೆ.ಎಂ.ಕೆ.ಚಾರಿಟಬಲ್ ಟ್ರಸ್ಟ್‌ ವತಿ ಯಿಂದ ನಡೆದ ದಿವಂಗತ ಕೆ.ಎಂ.ಕೃಷ್ಣಮೂರ್ತಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನೀರಾವರಿ ಯೋಜನೆಗಳಿಗೆ ಕೆಎಂಕೆ ಕೊಡುಗೆ’ ವಿಷಯದ ಕುರಿತು ಮಾತನಾಡಿದರು.

ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ಕೇವಲ ಸರ್ಕಾರದ ಹೊಣೆಯಲ್ಲ. ಇದರಲ್ಲಿ ಸಾರ್ವಜನಿಕರ ಪಾಲೂ ಇದೆ. ಮಹಾರಾಷ್ಟ್ರ ರಾಜ್ಯದ ಕಡವಂತಿ ಗ್ರಾಮದಲ್ಲಿ ಸರಕಾರದ ಯಾವುದೇ ಅನುದಾನವನ್ನು ಬಯಸದೇ ಜನರೇ ಗ್ರಾಮದ ಸುತ್ತ ಸುಮಾರು 550ಕ್ಕೂ ಹೆಚ್ಚು ಸಣ್ಣ ಕೆರೆಗಳನ್ನು ನಿರ್ಮಿಸಿ ನೀರಾವರಿ ಕಲ್ಪಿಸಿಕೊಂಡಿದ್ದಾರೆ ಎಂದರು.

ಕಡೂರು ತಾಲೂಕಿಗೆ ಮಂಜೂರಾಗಿರುವ 1.583 ಟಿಎಂಸಿ ನೀರಿನ ಹಂಚಿಕೆಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ವ ಪಕ್ಷಗಳ ಆಂದೋಲನವೇ ನಡೆಯಬೇಕಾಗಿದೆ. ತಾಲೂಕಿಗೆ ನೀರಾವರಿ ಯೋಜನೆಗಳು ಜಾರಿಯಾಗಬೇಕೆಂಬ ಕನಸು ತಮ್ಮ ತಂದೆ ಕೃಷ್ಣಮೂರ್ತಿ ಅವರದ್ದಾಗಿತ್ತು. ಈ ನಿಟ್ಟಿನಲ್ಲಿ ಆಂದೋಲನ ಆರಂಭವಾದರೆ ಕೆಎಂಕೆ ಟ್ರಸ್ಟ್‌ ತನ್ನ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ತರೀಕೆರೆ ನೀರಾವರಿ ತಜ್ಞ ರಾಜಕುಮಾರ್‌ ಮಾತನಾಡಿ, ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ಕಡೂರು ತಾಲೂಕಿಗೆ ಯಾವುದೇ ನೀರಾವರಿ ಯೋಜನೆಗಳ ಜಾರಿಗೆ ತಾಂತ್ರಿಕ ತೊಡಕುಗಳೇ ಹೆಚ್ಚು. ಜನಶಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಹಕ್ಕಿನ ನೀರನ್ನು ಬಳಸಿಕೊಳ್ಳಲು ಸಾಧ್ಯ ವಾಗದಿರುವುದು ದುರಂತ ಎಂದರು.

Advertisement

ನೀರಾವರಿ ಯೋಜನೆಗಳ ಜಾರಿ ಸಂಬಂಧ ಸಂಘ-ಸಂಸ್ಥೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹೋರಾಟ ಕೈಗೆತ್ತಿಕೊಂಡರೆ ಆ ಸಂಬಂಧ ತಾಂತ್ರಿಕ ನೆರವು ನೀಡಲು ಬದ್ಧನಾಗಿದ್ದೇನೆ. ಹೋರಾಟದ ನೇತೃತ್ವ ವಹಿಸಿದವರು ಯಾವುದೇ ಸಂದರ್ಭದಲ್ಲಿ ಕರೆದರೂ ಬಂದು ತಮ್ಮ ಅಳಿಲು ಸೇವೆ ಸಲ್ಲಿಸುತ್ತೇನೆಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಂಕೆ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷೆ ಸುಜಾತಾ ಕೃಷ್ಣಮೂರ್ತಿ ಮಾತನಾಡಿ, ದಿವಂಗತ ತಮ್ಮ ಪತಿಯ ನೀರಾವರಿ ಕನಸು ನನಸಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೋರಾಟ ಕೈಗೆತ್ತಿಕೊಳ್ಳಬೇಕು. ಈ ದತ್ತಿ ಉಪನ್ಯಾಸದ ಮೂಲಕ ಇಂತಹ ಹೋರಾಟದ ಹಾದಿ ಆರಂಭಕ್ಕೆ ನಾಂದಿ ಹಾಡಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಯಗಟಿ ರವಿಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಕಪಿನೇಗೌಡ, ಪುರಸಭಾ ಮಾಜಿ ಸದಸ್ಯ ಎನ್‌. ಬಷೀರ್‌ ಸಾಬ್‌, ಅಡಕೆ ಬೆಳೆಗಾರರ ಸಂಘದ ಕಡೂರು ಅಧ್ಯಕ್ಷ ಕೆ.ಎಚ್.ಶಂಕರ್‌, ಬೀರೂರು ಅಧ್ಯಕ್ಷ ಸೋಮಶೇಖರ್‌, ಜಾನಪದ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್‌, ಜ್ಞಾನಭಾರತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂದಿನಿ ಶಿರಹಟ್ಟಿ, ಕಸಾಪ ನಗರ ಅಧ್ಯಕ್ಷ ಎ.ಮಣಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್‌ಮೂರ್ತಿ, ಪತ್ರಕರ್ತ ಎಚ್.ಎಸ್‌.ಪರಮೇಶ್‌ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next