Advertisement

ವಕೀಲಿ ವೃತ್ತಿ ಪಾವಿತ್ರ್ಯತೆ ಕಾಪಾಡಿ: ಸುಧೀಂದ್ರ ರಾವ್‌

01:03 PM Jul 28, 2019 | Naveen |

ಕಡೂರು: ವಕೀಲ ವೃತ್ತಿ ಇಂಜಿನಿಯರ್‌ ಹಾಗೂ ವೈದ್ಯ ವೃತ್ತಿಯನ್ನು ಹಿಂದಿಕ್ಕಿದ್ದು, ಅದರ ಪಾವಿತ್ರ್ಯತೆ ಕಾಪಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎನ್‌.ಕೆ.ಸುಧೀಂದ್ರರಾವ್‌ ಸಲಹೆ ನೀಡಿದರು.

Advertisement

ಜಿಲ್ಲಾ ನ್ಯಾಯಾಲಯ, ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ, ಕಡೂರು ವಕೀಲರ ಸಂಘ ಶನಿವಾರ ಕಡೂರು ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಲಯ ಕಟ್ಟಡದ ಮೊದಲನೇ ಮಹಡಿ ಉದ್ಘಾಟಿಸಿ ಅವರು ಮಾತನಾಡಿದರು.

ಇಂಜಿನಿಯರ್‌ ಮತ್ತು ವೈದ್ಯ ವೃತ್ತಿಗೆ ಮಾತ್ರ ಹೆಚ್ಚಿನ ಆದ‌್ಯತೆ ನೀಡುತ್ತಿದ್ದ ಸಮಾಜ, ಇಂದು ವಕೀಲ ವೃತ್ತಿಗೆ ಆದ್ಯತೆ ನೀಡುತ್ತಿದೆ. ಹಾಗಾಗಿ, ವಕೀಲ ವೃತ್ತಿಗೆ ಇವೆಲ್ಲವುಗಳನ್ನು ಹಿಂದಿಕ್ಕಿದೆ ಎಂದರು.

ವೃತ್ತಿಗೆ ಬಂದಾಕ್ಷಣ 5-6 ವರ್ಷಗಳ ಸತತ ಕಲಿಕೆಗೆ ಒತ್ತು ನೀಡಬೇಕು. ಪುಸ್ತಕಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕಾಗುತ್ತದೆ. ವಕೀಲ ವೃತ್ತಿ ಅತ್ಯಂತ ಪಾವಿತ್ರ್ಯತೆಯಿಂದ ಕೂಡಿದೆ. ತಮ್ಮ ಸ್ವಂತಿಕೆಯನ್ನು ಬೆಳೆಸಿಕೊಳ್ಳುವುದರ ಮೂಲಕ ನ್ಯಾಯ ನೀಡಬೇಕು. ಇತ್ತೀಚೆಗೆ ಕಂಪ್ಯೂಟರ್‌ ಬಳಕೆಯಿಂದ ವಕೀಲರು ಸೋಮಾರಿಗಳಾಗುತ್ತಿದ್ದಾರೆ ಎಂದು ವಿಷಾಸಿದರು.

ಟಿ.ವಿ., ಮೊಬೈಲ್, ಇಂಟರ್‌ನೆಟ್ ಬಳಕೆಯಿಂದ ಫಾರಂ ಮತ್ತು ಅರ್ಜಿಗಳನ್ನು ತುಂಬುವ ಪ್ರಕ್ರಿಯೆಯೇ ನಿಂತು ಹೋಗುತ್ತಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಡಿ. ಸ್ವತಃ ತಾವೇ ಅರ್ಜಿಗಳನ್ನು ಪೂರ್ಣಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

Advertisement

ನಾವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಬೇಕು. ಯಾವುದೇ ಹುದ್ದೆ ಶಾಶ್ವತವಲ್ಲ. ನಮ್ಮ ಕೈಲಾದ ಕರ್ತವ್ಯವನ್ನು ಮಾಡಬೇಕು. ದೀನ, ದಲಿತ ಮತ್ತು ಬಡವರಿಗೆ ನಾವು ಮಾಡಿದ ಸೇವೆಯೇ ನಮ್ಮನ್ನು ಗುರುತಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಕಡೂರು ವಕೀಲರ ಸಂಘ ಇಲ್ಲಿನ ನ್ಯಾಯಾಲಯವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯವನ್ನಾಗಿ ಮಾಡಲು ಬೇಡಿಕೆ ಇಟ್ಟಿದ್ದಾರೆ. ಇದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಿರಿಯ ಮತ್ತು ಕಿರಿಯ ವಕೀಲರಿಗೆ ಮಹಾಭಾರತ, ರಾಮಾಯಣದ ಕಥೆಗಳನ್ನು ಹೇಳುವುದರ ಮೂಲಕ ವಕೀಲರನ್ನು ನಗುವಿನಲ್ಲಿ ತೇಲಿಸಿದ ನ್ಯಾಯಮೂರ್ತಿಗಳು, ಕರ್ತವ್ಯದ ಬಗ್ಗೆ ಚಾಟಿ ಬೀಸಿದರು. ವಕೀಲರಿಗೆ ಕಾರ್ಯಾಗಾರ, ಸೆಮಿನಾರ್‌ಗಳನ್ನು ಏರ್ಪಡಿಸಲು ಸಲಹೆ ನೀಡಿದರು. ಕಡೂರು ನ್ಯಾಯಾಲಯವನ್ನು ರಾಜ್ಯದಲ್ಲಿಯೇ ಮಾದರಿ ನ್ಯಾಯಾಲಯವನ್ನಾಗಿ ಮಾಡಲು ಮುಂದಾಗಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧಿಧೀಶ ಉಮೇಶ್‌ ಎಂ. ಅಡಿಗ ಅವರು ಮಾತನಾಡಿ, ತ್ವರಿತ ನ್ಯಾಯ ನೀಡಲು ನ್ಯಾಯಾಲಯಗಳು ಸಿದ್ಧವಾಗಿದ್ದು, ಲೋಕ ಅದಾಲತ್‌, ರಾಜೀ ಸಂಧಾನಗಳ ಮೂಲಕ ನ್ಯಾಯ ನೀಡಲಾಗುತ್ತಿದೆ. ಕಡೂರು ನ್ಯಾಯಾಲಯವನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಾಡಲು ತಾವು ಇಟ್ಟಿರುವ ಬೇಡಿಕೆ ನೈಜವಾಗಿದ್ದು, ಸಾಕಾರವಾಗಲಿ ಎಂದು ಆಶಿಸಿದರು.

ಕಡೂರು ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಾಜು, ಚಂದನ್‌, ರಘುರಾಮ್‌, ದೀಪು, ಸರ್ಕಾರಿ ವಕೀಲರಾದ ಹರೀಶ್‌, ಚಿಕ್ಕಮಗಳೂರಿನ ನ್ಯಾಯಾಧಿಧೀಶರಾದ ಎಚ್.ಆರ್‌.ಹೆಗ್ಗಡೆ, ಕಾನೂನು ಸೇವಾ ಪ್ರಧಾನ ಕಾರ್ಯದರ್ಶಿ ಬಸವರಾಜ್‌, ಕಡೂರು ವಕೀಲರ ಸಂಘದ ಅಧ್ಯಕ್ಷ ಡಿ.ಎನ್‌.ಪ್ರಕಾಶ, ಹಿರಿಯ ವಕೀಲರಾದ ಶಿವಕುಮಾರ್‌, ಎಂ.ಎಸ್‌.ಯಳವಾರ್‌, ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್‌.ರೂಪಾ, ಕಡೂರು ತಹಶೀಲ್ದಾರ್‌ ಉಮೇಶ್‌, ಕಡೂರು ವಕೀಲರ ಸಂಘದ ಕಾರ್ಯದರ್ಶಿ ದಾದಾ ಖಲಂದರ್‌, ಹಿರಿಯ ಮತ್ತು ಕಿರಿಯ ವಕೀಲರು ಮಹಿಳಾ ವಕೀಲರು, ಲೋಕೋಪಯೋಗಿ ಇಲಾಖೆ ಅಭಿಯಂತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next