Advertisement

ಹದಗೆಟ್ಟ ರಸ್ತೆ ದುರಸ್ತಿ ಮಾಡಿ ಪ್ರಾಣ ರಕ್ಷಿಸಿ

01:09 PM Jan 29, 2020 | Naveen |

ಕಡೂರು: ರಾಷ್ಟ್ರೀಯ ಹೆದ್ದಾರಿ 206ರ ಅರಸೀಕೆರೆ ಮಾರ್ಗದಲ್ಲಿ ಕಡೂರು ಪಟ್ಟಣದಿಂದ ಬಾಣಾವರದ ವರೆಗೆ ಉಂಟಾಗಿರುವ ಹಲವಾರು ಗುಂಡಿ-ಗೊಟರುಗಳು ಪ್ರಯಾಣಿಕರ ಸಾವಿನ ಗುಂಡಿಗಳಾಗಿವೆ ಎಂದು ಜಿಪಂ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಆರೋಪಿಸಿದರು.

Advertisement

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ ಮಾರ್ಗದಿಂದ ಬಾಣವರದವರೆಗೆ ಗುಂಡಿಗಳನ್ನು ಮುಚ್ಚಲಾಗಿದೆ. ಅದೇ ರೀತಿ ಬಾಣಾವರದಿಂದ ಕಡೂರು ಪಟ್ಟಣದವರೆಗೆ ಯಾವುದೊಂದು ಗುಂಡಿಯನ್ನು ಮುಚ್ಚಿಲ್ಲ. ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್‌ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಚಾಲಕರಿಗೆ ವಾಹನ ಓಡಿಸಲು ಕಷ್ಟಕರವಾಗಿದೆ. ಈಗಾಗಲೇ ಕಳೆದ 6 ತಿಂಗಳಿನಿಂದ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗುಂಡಿಗಳಿಗೆ ದ್ವಿಚಕ್ರ ವಾಹನಗಳು ಬಿದ್ದು 18ಕ್ಕೂ ಹೆಚ್ಚು ಸಾವು-ನೋವುಗಳಾಗಿವೆ ಎಂದು ದೂರಿದರು.

ಹೆದ್ದಾರಿ ಪ್ರಾ ಧಿಕಾರದ ಅಧಿ ಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದು ಸಾರ್ವಜನಿಕರಿಗೆ ತಿಳಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ಈಗಾಗಲೇ ಮತಿಘಟ್ಟದ ಭಾಗದಲ್ಲಿ ಬೈಪಾಸ್‌ ನಿರ್ಮಿಸಲು ಭೂಮಿಯನ್ನು ಸ್ವಾಧೀನ ಪಡೆಯುವ ಈ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಅಧಿ ಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ನಿರ್ಮಾಣ ಕಾಮಗಾರಿ ತಡವಾಗುವ ಸಂಭವವಿದೆ. ಅಲ್ಲಿಯವರೆಗೆ ಗುಂಡಿ-ಗೊಟರುಗಳನ್ನು ಮುಚ್ಚಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಅರಸೀಕೆರೆಯಿಂದ ಬಾಣಾವರದವರೆಗೆ ಮುಚ್ಚಿರುವುದು ಕಾಣುತ್ತಿಲ್ಲವೇ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿರುವ ಇಂಜಿನಿಯರ್‌ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಂಗಲಿ ತಾಂಡಾ ಬಳಿ ಭಾರೀ ಗಾತ್ರದ ಹಲವು ಗುಂಡಿ-ಗೊಟರುಗಳು ನಿರ್ಮಾಣವಾಗಿದ್ದು, ಅದನ್ನೂ ಕೂಡ ಸೂಕ್ತ ರೀತಿಯಲ್ಲಿ ಮುಚ್ಚಿಸದೇ ಇರುವುದರಿಂದ ಅನೇಕ ಅಪಘಾತಗಳಾಗಿ
ಸಾವು-ನೋವುಗಳಾಗಿವೆ. ಪೊಲೀಸ್‌ ಇಲಾಖೆಯಲ್ಲಿ ಎಷ್ಟು ಅಪಘಾತಗಳಾಗಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆಯಲಿ. ಆಗ ಅವರಿಗೆ ಸಾರ್ವಜನಿಕರ ಸಮಸ್ಯೆ ಅರ್ಥವಾಗುತ್ತದೆ ಎಂದು ಹರಿಹಾಯ್ದರು.

Advertisement

ಮತಿಘಟ್ಟ-ತಂಗಲಿ ತಾಂಡ್ಯದ ರಸ್ತೆ ಉಬ್ಬಿನ ಬಳಿ ದ್ವಿಚಕ್ರ ವಾಹನ ಸವಾರರು ಬಹಳಷ್ಟು ಸಂಖ್ಯೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿರುವ ಅಥವಾ ತಲೆಗೆ ಪೆಟ್ಟು ಬಿದ್ದಿರುವ ಘಟನೆ ನಡೆದಿದೆ. ಕೆಲವರ ಪ್ರಾಣವೂ ಹೋಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ
ರಸ್ತೆ ಉಬ್ಬುಗಳು ಕಾಣದೆ ವೇಗವಾಗಿ ಚಲಿಸುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಸರಿಪಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಇಂಜಿಯರ್‌ರನ್ನು ಒತ್ತಾಯಿಸಿದರು.

ಫೆ. 5ರೊಳಗೆ ಬಾಣಾವರದಿಂದ ಕಡೂರು ಪಟ್ಟಣದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಟ್ಟಣದ ಉದ್ಯಮಿ ಸತೀಶ್‌, ಎಚ್‌.ಎಂ. ರೇವಣ್ಣಯ್ಯ, ಚೇತನ್‌ ಕೆಎಂಕೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next