Advertisement

ಶಾಸಕರ ಸಹಾಯದಿಂದ ಊರು ಸೇರಿದ ವಲಸಿಗರು

03:57 PM Apr 27, 2020 | Naveen |

ಕಡೂರು: ಕಡೂರು ಪಟ್ಟಣದ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಕಳೆದ 21 ದಿನಗಳಿಂದ ಕ್ವಾರಂಟೈನ್‌ ಆಗಿದ್ದ ಸುಮಾರು 57 ಜನರನ್ನು ಸ್ವಗ್ರಾಮಕ್ಕೆ ಕಳುಹಿಸಲು ತಾಲೂಕು ಆಡಳಿತ ಮಾಡಿದ ಪ್ರಯತ್ನ ವಿಫಲಗೊಂಡು ಅಂತಿಮವಾಗಿ ಶಾಸಕ ಬೆಳ್ಳಿಪ್ರಕಾಶ್‌ ಅವರ ಸಂಧಾನ, ಸಹಾಯ ಹಸ್ತದಿಂದ ಊರು ತಲುಪಿ ನಿಟ್ಟುಸಿರು ಬಿಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

Advertisement

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಕುಮಾರಹಳ್ಳಿ ತಾಂಡಾ, ಮುಸಲುವಾಡಿ, ಕೆ.ಕೆ. ತಾಂಡಾಗಳ ಸುಮಾರು 47 ಜನರ ತಂಡ ಕಳೆದ 3 ತಿಂಗಳ ಹಿಂದೆ ಸಕಲೇಶಪುರ ಸಮೀಪದ ಎಬಿಸಿ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳಿತ್ತು. ಲಾಕ್‌ಡೌನ್‌ ಸಮಯದಲ್ಲಿ ಸ್ವಗ್ರಾಮಕ್ಕೆ ತೆರಳುವಾಗ ಕಡೂರು ಪೊಲೀಸರಿಗೆ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿದ್ದರು. ನಂತರ ಅವರನ್ನು ತಾಲೂಕು ಆಡಳಿತ ವ್ಯವಸ್ಥೆ ಮಾಡಿರುವ ವಿದ್ಯಾರ್ಥಿ ನಿಲಯದಲ್ಲಿ ಇರಿಸಲಾಗಿತ್ತು. ಜಿಲ್ಲಾಡಳಿತದ ನಿರ್ದೇಶನದಂತೆ 47 ಜನ ಬಳ್ಳಾರಿ ಜಿಲ್ಲೆಗೆ, ಉಳಿದವರನ್ನು ಹಾವೇರಿ ಜಿಲ್ಲೆ ಸವಣೂರಿಗೆ ಕಳುಹಿಸಲಾಯಿತು. ರಾಜ್ಯ ರಸ್ತೆ ಸಾರಿಗೆ ಕಡೂರು ಡಿಪೋಗೆ ಸೇರಿದ 3 ಬಸ್‌ ಗಳಲ್ಲಿ ಶನಿವಾರ ಸಂಜೆ 5 ಗಂಟೆಗೆ ಇವರನ್ನೆಲ್ಲಾ ಕಳುಹಿಸಲಾಯಿತು. ಆದರೆ ಬಸ್‌ಗಳು ಕಡೂರು ಪಟ್ಟಣ ಬಿಟ್ಟು 15 ಕಿ.ಮೀ ಸಾಗಿದ ನಂತರ ಸಮಸ್ಯೆ ಆರಂಭಗೊಂಡಿದೆ.

ಡಿಪೋ ವ್ಯವಸ್ಥಾಪಕರಿಂದ ಬಸ್‌ ಚಾಲಕರಿಗೆ ಕರೆ ಬಂದಿದ್ದು ಕೂಡಲೇ ಬಸ್‌ಗಳನ್ನು ಕಡೂರಿಗೆ ವಾಪಸ್‌ ತರುವಂತೆ ಸೂಚಿಸಿದ್ದಾರೆ. ನಂತರ ಚಾಲಕರು ಪೊಲೀಸ್‌ ಠಾಣೆಯ ಮುಂದೆ ಬಸ್‌ ತಂದು ನಿಲ್ಲಿಸಿದ್ದಾರೆ. ವಿಷಯ ಅರಿತ ಕೂಡಲೇ ಎಚ್ಚೆತ್ತುಕೊಂಡ ತಹಶೀಲ್ದಾರರು ಶಾಸಕ ಬೆಳ್ಳಿಪ್ರಕಾಶ್‌ ಅವರಿಗೆ ನಡೆದ ಸಂಗತಿ ವಿವರಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕರು ಡಿಪೋ ವ್ಯವಸ್ಥಾಪಕ ಚನ್ನಬಸವೇಗೌಡ ಅವರನ್ನು ಕರೆಸಿ 3 ಬಸ್‌ ಗಳು ಅಲ್ಲಿಗೆ ತೆರಳಿ ವಾಪಸ್‌ ಬರುವ ವೆಚ್ಚವನ್ನು ತಾವು ಸ್ವಂತವಾಗಿ ಭರಿಸುತ್ತೇವೆ.

ಕೂಡಲೇ ಬಸ್‌ಗಳನ್ನು ಅವರವರ ಗ್ರಾಮಗಳಿಗೆ ಕಳುಹಿಸಲು ಸೂಚಿಸಿದ್ದಾರೆ. ಇದಾದ ನಂತರ ರಾತ್ರಿ 10 ಗಂಟೆಗೆ ಪುನಃ ಬಸ್‌ಗಳು ಬಳ್ಳಾರಿ, ಸವಣೂರು ದಾರಿ ಹಿಡಿದವು. ಕ್ವಾರೆಂಟೈನ್‌ನಲ್ಲಿರುವವರನ್ನು ಅವರ ಸ್ವಂತ ಊರುಗಳಿಗೆ ತಲುಪಿಸಲು ಸರ್ಕಾರದಿಂದ ಸೂಚನೆ ಬಂದಿದ್ದರಿಂದ ಡಿಪೋ ವ್ಯವಸ್ಥಾಪಕರಿಗೆ 3 ಬಸ್‌ಗಳಲ್ಲಿ ಕಳುಹಿಸಲು ಸೂಚಿಸಲಾಗಿತ್ತು. ಆದರೆ ಇದಕ್ಕೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ. ಕ್ವಾರೆಂಟೈನರ್‌ಗಳೇ ಸ್ವತಃ ವೆಚ್ಚ ಭರಿಸಬೇಕೆಂಬ ಸೂಚನೆ ಮೇಲಧಿಕಾರಿಗಳಿಂದ ಬಂದ ಹಿನ್ನೆಲೆಯಲ್ಲಿ ಸಮಸ್ಯೆ ಉದ್ಭವವಾಗಿತ್ತು.

ನಂತರ ತಾವು ಶಾಸಕರಿಗೆ ಮಾಹಿತಿ ನೀಡಿದಾಗ ಶಾಸಕರು ಸಮಸ್ಯೆಯನ್ನು ಬಗೆಹರಿಸಿದರು ಎಂದು ತಹಶೀಲ್ದಾರ್‌ ಜೆ. ಉಮೇಶ್‌ ಮಾಹಿತಿ ನೀಡಿದರು. ಕಡೂರು ಡಿಪೋ ವ್ಯವಸ್ಥಾಪಕ ಚನ್ನಬಸವೇಗೌಡರು ಮಾತನಾಡಿ, ನಮ್ಮ ಮೇಲಧಿಕಾರಿಗಳು 1 ಕಿ.ಮೀ.ಗೆ 39 ರೂ. ದರದಂತೆ ಹಣ ಸಂದಾಯ ಮಾಡಿಸಿಕೊಂಡ ನಂತರವೇ ಬಸ್‌ ಕಳುಹಿಸಲು ಸೂಚನೆ ನೀಡಿದ್ದರಿಂದ 15 ಕಿ.ಮೀ ಸಾಗಿದ್ದ ಬಸ್‌ ಗಳನ್ನು ವಾಪಸ್‌ ಕರೆಸಿಕೊಳ್ಳಲಾಯಿತು. ಆದರೆ ಶಾಸಕರ ಮಧ್ಯಸ್ಥಿಕೆಯಲ್ಲಿ ಸುಮಾರು 60 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದರಿಂದ ಪುನಃ ಬಸ್‌ಗಳನ್ನು ಕಳುಹಿಸಿದ್ದೇವೆ. ಭಾನುವಾರ 60 ಸಾವಿರ ರೂ. ಶಾಸಕರು ನೀಡಿದ್ದಾರೆ ಎಂದರು.

Advertisement

ಹೂವಿನ ಹಡಗಲಿಯ ಗೊಣನಾಯ್ಕ ಮಾತನಾಡಿ, ಸರ್ಕಾರವೇ ಹಣ ನೀಡಿ ನಮ್ಮನ್ನು ಕಳುಹಿಸುತ್ತದೆ ಎಂಬ ನಂಬಿಕೆಯಿಂದ
ಬಸ್‌ ಹತ್ತಿದೆವು. ಹಣ ಊರಿನಲ್ಲಿ ನೀಡಬೇಕು. ಇಲ್ಲವಾದರೆ ವಾಪಸ್‌ ಕಡೂರಿಗೆ ಬಿಡುವುದಾಗಿ ಎಚ್ಚರಿಸಿದರು. ನಮ್ಮ ಬಳಿ ಹಣವಿಲ್ಲದ ಕಾರಣ ಕಡೂರಿಗೆ ವಾಪಸ್‌ ಕರೆ ತಂದರು. ಆ ಸಮಯಕ್ಕೆ ಅಲ್ಲಿಗೆ ಬಂದ ಕೆಲವು ಪತ್ರಕರ್ತರು ಹಾಗೂ ಶಾಸಕ ಬೆಳ್ಳಿ ಪ್ರಕಾಶ್‌ ಅವರು ನಮ್ಮನ್ನೆಲ್ಲ ಊರು ಸೇರಿಸಲು ನಮ್ಮ ಭಾಗದ ದೇವರಾಗಿ ಬಂದರು ಎಂದು ಸಂತಸದಿಂದ ನುಡಿದರು. ವೃತ್ತ ನಿರೀಕ್ಷಕ ಮಂಜುನಾಥ್‌, ಜಿಪಂ ಸದಸ್ಯ ಕೆ.ಆರ್‌. ಮಹೇಶ್‌ ಒಡೆಯರ್‌, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಂಕರಮೂರ್ತಿ ಮತ್ತಿತರರು ಇದ್ದರು.

ಕೋವಿಡ್ ವಿಷಯದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಿದೆ. ಆದ ಕಾರಣ ಬಳ್ಳಾರಿ, ಹಾವೇರಿಯ ಸುಮಾರು 57 ಜನರನ್ನು ಸ್ವತಃ ವೆಚ್ಚ ಭರಿಸಿ ಕಳುಹಿಸಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಊರು ಸೇರಿರುವುದೇ ನಮಗೆ ಸಂತಸ ತಂದಿದೆ. ಇಂತಹ ಹತ್ತಾರು ಸಮಸ್ಯೆಗಳು ಬಂದರೂ ನಿಭಾಯಿಸುವ ಶಕ್ತಿ ನಮಗಿದೆ. ಯಾರೂ ಭಯಪಡಬೇಡಿ.
 ಬೆಳ್ಳಿ ಪ್ರಕಾಶ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next