Advertisement

ರಸ್ತೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ

01:23 PM Jul 17, 2019 | Naveen |

ಕಡೂರು: ಬೀರೂರು ಪುರಸಭೆ ವ್ಯಾಪ್ತಿಗೆ ಸಂಬಂಧಪಟ್ಟ ಅನೇಕ ಖಾಲಿ ನಿವೇಶನಗಳು ಮತ್ತು ರಸ್ತೆಗಳು ಕಾಣೆಯಾಗುತ್ತಿದ್ದು, ನಿವೇಶನಗಳ ಬಗ್ಗೆ ಮಾಹಿತಿ ತಿಳಿದೂ ತಿಳಿಯದಂತೆ ವರ್ತಿಸುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಬೀರೂರಿನ ಹೊಸಳಮ್ಮ ಬಡಾವಣೆಯಲ್ಲಿ ಭವಿಷ್ಯದಲ್ಲಿ ರಸ್ತೆ ಮಾಡುವ ಉದ್ದೇಶದಿಂದ ಕನ್ಸರ್‌ವೆನ್ಸಿ ರಸ್ತೆಯೆಂದು ಘೋಷಣೆ ಮಾಡಲಾಗಿದ್ದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರವಾಗಿ ಮನೆ ನಿರ್ಮಿಸುತ್ತಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ಅದೆಷ್ಟೋ ರಸ್ತೆಗಳು ಮತ್ತು ಪುರಸಭೆ ನಿವೇಶನಗಳು ಕಾಣೆಯಾಗುತ್ತಿವೆ. ಇಂದು ನೋಡಿದ ಜಾಗ ನಾಳೆ ಇರಲ್ಲ ಅನ್ನುವಂತಾಗಿದೆ. ಬೇರೆಯರಿಗೆ ಬುದ್ಧಿ ಹೇಳುವ ಸ್ಥಾನದಲ್ಲಿರುವವರೇ ಈ ಕೃತ್ಯಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತದೆ.

ಪುರಸಭೆಯ ಸಾರ್ವಜನಿಕ ಆಸ್ತಿಯನ್ನು ಉಳಿಸುವ ಗೋಜಿಗೆ ಹೋಗದೆ ಪುರಸಭೆ ಕಣ್ಮುಚ್ಚಿ ಕುಳಿತಿದೆ. ನಿವೇಶನಗಳ ಕಬಳಿಕೆಯಲ್ಲಿ ಪುರಸಭೆ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.

ಇಂತಹ ಹಲವು ನಿವೇಶನ ಹಾಗೂ ಕನ್ಸರ್‌ವೆನ್ಸಿ ರಸ್ತೆಗಳು ಉಳ್ಳವರ ಪಾಲಾಗುತ್ತಿವೆ. ಪುರಸಭೆ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಆಕ್ರಮಿಸುತ್ತಿದ್ದರೆ ಅಧಿಕಾರಿಗಳು ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಅಚ್ಚರಿ ಮೂಡಿಸಿದೆ.

Advertisement

ಹಣ ಬಲ ಅಥವಾ ರಾಜಕೀಯ ಹಿನ್ನೆಲೆಯಿಲ್ಲದ ಕಟ್ಟಡ ಪರವಾನಗಿ ಪಡೆಯದ ಕಟ್ಟಡಗಳಿಗೆ ಅಧಿಕಾರಿಗಳು ಮುತ್ತಿಗೆ ಹಾಕಬಹುದು ಅಥವಾ ಕೆಲಸಕ್ಕೆ ತಡೆ ಒಡ್ಡಬಹುದು. ಆದರೆ, ರಾಜಕೀಯ ಪ್ರಭಾವ ಹೊಂದಿ ಯಾವುದೇ ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಹಲವು ಸದಸ್ಯರ ಕುಮ್ಮಕ್ಕು ಕಾರಣ ಎನ್ನುವುದು ನಾಗರಿಕರ ಗುಮಾನಿ. ಇದೆಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆದರೂ ಯಾರೂ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಪುರಸಭೆ ಗಮನಕ್ಕೆ ಬಂದರೂ ಯಾವುದೇ ಕ್ರಮ ವಹಿಸಿಲ್ಲ. ಪುರಸಭೆ ಇನ್ನಾದರೂ ಹೆಚ್ಚೆತ್ತು ಸಾರ್ವಜನಿಕ ಆಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸುವಂತೆ ಪುರಸಭೆಗೆ ನಿರ್ದೇಶಿಸುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next