ಹಾವೇರಿ: ನಡೆದುಕೊಂಡು ಹೋಗಲು ಸಹ ಸಾಧ್ಯವಾಗದ ರೀತಿಯಲ್ಲಿ ಹದಗೆಟ್ಟಿದ್ದ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ರೂಪುಗೊಂಡು ಗ್ರಾಮಸ್ಥರ ಬಹುವರ್ಷಗಳ ಬೇಡಿಕೆ ಈಡೇರಿತ್ತು. ರಸ್ತೆ ಅಭಿವೃದ್ಧಿಯಾಗಿದ್ದರಿಂದ ಗ್ರಾಮಸ್ಥರು ಖುಷಿಪಟ್ಟು ಸಂಭ್ರಮಿಸಿದ್ದರು.
-ಇದು ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದಲ್ಲಿ ಮಾಡಿದ್ದ ಗ್ರಾಮ ವಾಸ್ತವ್ಯದ ಪ್ರಮುಖ ಎಫೆಕ್ಟ್. ಸಿಎಂ ಕುಮಾರಸ್ವಾಮಿ ಕಡೂರ ಗ್ರಾಮದಲ್ಲಿ 19-9-2006ರಂದು ಗ್ರಾಮ ವಾಸ್ತವ್ಯ ಮಾಡಿದ್ದರು. ಈ ಗ್ರಾಮ ವಾಸ್ತವ್ಯದಿಂದ ಗ್ರಾಮದ ರಸ್ತೆಗಳ ಚಿತ್ರಣವೇ ಬದಲಾಯಿತು. ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಪರಿಣಾಮ ಅವರು ಅಂದು ಘೋಷಿಸಿದಂತೆ ಸುವರ್ಣ ಗ್ರಾಮ ಯೋಜನೆಯು ಸಂಪೂರ್ಣವಾಗಿ ಜಾರಿಯಾಗಿ ಗ್ರಾಮದ ರಸ್ತೆಗಳೆಲ್ಲಾ ಇಂದು ಕಾಂಕ್ರಿಟ್ ರಸ್ತೆಗಳಾಗಿವೆ.
ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಮೊದಲು ಗ್ರಾಮ ಎಲ್ಲ ರಸ್ತೆಗಳು ಕೆಸರುಗದ್ದೆ, ಹೊಂಡಗಳ ದಾರಿ, ಕಲ್ಲು ಮಣ್ಣುಗಳಿಂದ ಕೂಡಿದ್ದವು. ಜನ, ವಾಹನ ಸಂಚಾರ ದುಸ್ತರವಾಗಿತ್ತು. ಸಿಎಂ ಗ್ರಾಮ ವಾಸ್ತವ್ಯದ ಬಳಿಕ ಅನೇಕ ರಸ್ತೆಗಳು ಕಾಂಕ್ರಿಟ್ ಕಂಡವು. ಇನ್ನಷ್ಟು ರಸ್ತೆಗಳು ಡಾಂಬರ್ ರಸ್ತೆಗಳಾದವು. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಸಹ ತಕ್ಕಮಟ್ಟಿಗೆ ಬಗೆಹರಿಯಿತು. ತನ್ಮೂಲಕ ಗ್ರಾಮದ ಬಹುವರ್ಷಗಳ ಬೇಡಿಕೆ ಈಡೇರಿತ್ತು.
ಧನಸಹಾಯ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಡೂರ ಗ್ರಾಮದ ವಾಸ್ತವ್ಯದಿಂದ ರಸ್ತೆ, ನೀರಿಗೆ ಸಂಬಂಧಿಸಿ ಗುರುತರ ಬದಲಾವಣೆಯಾಗುವ ಜತೆಗೆ ಅನೇಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿಯವರ ಬಳಿ ಧನಸಹಾಯ ಕೇಳಿದ್ದರು. ಸಾಕಷ್ಟು ಜನರಿಗೆ ಧನಸಹಾಯವೂ ಸಿಕ್ಕಿತ್ತು. ಎಸ್‌ಸಿ ಕಾಲೋನಿ ಸ್ಥಳಾಂತರ, ಪಪೂ ಕಾಲೇಜ್ ಮಂಜೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಬೇಡಿಕೆ ಇನ್ನೂ ಈಡೇರಿಲ್ಲ.
ಬಿಸಿಎಂ ಹಾಸ್ಟೆಲ್, ರೈತರ ಜಮೀನುಗಳಿಗೆ ನೀರು ಹರಿಸುವ ಯೋಜನೆ, ಕುಮದ್ವತಿ ನದಿಗೆ ಬ್ಯಾರೇಜ್ ನಿರ್ಮಾಣ. ಎಸ್‌ಸಿ ಕಾಲೋನಿ ಸ್ಥಳಾಂತರ ಹಾಗೂ ಸರ್ಕಾರಿ ಜಮೀನಿನಲ್ಲಿ ನಿವೇಶನ ಮಾಡಿ ಮನೆಯಿಲ್ಲದ ಕಡುಬಡವರಿಗೆ ನಿವೇಶನಗಳನ್ನು ಹಂಚುವುದು ಸೇರಿದಂತೆ ಹಲವು ಬೇಡಿಕೆಗಳು ಗ್ರಾಮಸ್ಥರದ್ದಾಗಿದ್ದು ಇನ್ನೊಮ್ಮೆ ಮುಖ್ಯಮಂತ್ರಿ ತಮ್ಮ ಗ್ರಾಮದಲ್ಲಿ ವಾಸ್ತವ್ಯ ಮಾಡಿದರೆ ಈ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕನಸು ಗ್ರಾಮಸ್ಥರದ್ದಾಗಿದೆ.
•ಎಚ್.ಕೆ.ನಟರಾಜ್