ಕಡೂರು: ಆಧುನಿಕತೆ ಭರಾಟೆಯಲ್ಲಿ ಮನುಷ್ಯನ ನೆಮ್ಮದಿ, ಶಾಂತಿ ಕಡಿಮೆಯಾಗುತ್ತಿದ್ದು, ಈ ಹಸಿರು ಗೋಧಿ ಸಸಿ ಹಬ್ಬದಿಂದ ಜೀವನವೆಲ್ಲ ಹಸಿರಾಗಿ ಸಮೃದ್ಧಿ ನೆಲಸಲಿ ಎಂದು ಚಿತ್ರದುರ್ಗದ ಸೇವಾಲಾಲ್ ಮಠದ ಸರದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ತಾಲೂಕಿನ ಅಗ್ರಹಾರ ತಾಂಡಾದಲ್ಲಿ ಬುಧವಾರ ತಾಂಡಾದವರು ದುರ್ಗಾದೇವಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗೋಧಿ ಸಸಿ ಹಬ್ಬದಲ್ಲಿ ಮಾತನಾಡಿದ ಅವರು, ಬಂಜಾರ ಸಮುದಾಯಕ್ಕೆ ಪುರಾತನ ಹಿನ್ನ್ನೆಲೆಯಿದೆ. ಅವರ ವೇಶಭೂಷಣ ಮತ್ತು ಕಲೆಗೆ ಸರಿಸಾಠಿ ಯಾರೂ ಇಲ್ಲ. ಇಂತಹ ಹಬ್ಬಗಳಿಂದ ಜೀವನವೆಲ್ಲ ಹಸಿರಾಗಿ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಉಂಟಾಗಲಿ. ಲಂಬಾಣಿ ಸಂಸ್ಕೃತಿ ಉತ್ಸವವಾಗಿ ಮಾರ್ಪಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಹಸಿರು ಪಸರಿಸಿ, ಮಳೆ ಮತ್ತು ಬೆಳೆ ಸಮೃದ್ಧವಾಗಲಿ ಎನ್ನುವ ಉದ್ದೇಶದಿಂದ ಕನ್ಯೆಯರು ಈ ಹಬ್ಬದಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಮುಂದೆ ಮದುವೆಯಾಗಿ ಹೋದರೂ ಸಹಿತ ಹಬ್ಬದ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡುತ್ತದೆ ಎಂದು ತಿಳಿಸಿದರು.
ನಮ್ಮ ಸಮುದಾಯ ಹೆಚ್ಚು ಇರುವುದೇ ಉತ್ತರ ಕರ್ನಾಟಕ ಭಾಗದಲ್ಲಿ. ಆದರೆ ಅದು ಬಯಲು ಸೀಮೆಯಾಗಿರುವುದರಿಂದ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಅದಕ್ಕೆ ಕುಟುಂಬದ ಜೊತೆ ಜೀವನ ನಿರ್ವಹಣೆಗೆ ಮಲೆನಾಡು ಭಾಗಕ್ಕೆ ಹೆಚ್ಚಾಗಿ ಬರುತ್ತಾರೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಾರೆ. ಅಂತಹ ತಾಂಡಾಗಳನ್ನು ಗುರುತಿಸಿ ಸರ್ಕಾರ ವಸತಿ ಶಾಲೆಗಳನ್ನು ನಿರ್ಮಿಸಿ ಕೊಟ್ಟಲ್ಲಿ ನಮ್ಮ ಸಮುದಾಯ ಇನ್ನು ಉತ್ತಮವಾಗಿರಲು ಸಹಕಾರವಾಗಲಿದೆ ಎಂದರು.
ದುರ್ಗಾದೇವಿ ದೇವಾಲಯದ ಧರ್ಮದರ್ಶಿ ರಂಗನಾಥನಾಯ್ಕ ಮಾತನಾಡಿ, ಈ ಹಬ್ಬವನ್ನು 5 ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಎರಡ್ಮೂರು ವರ್ಷಗಳಿಗೊಮ್ಮೆ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಗ್ರಾಮಸ್ಥರು ಒಂದು ತಿಂಗಳಿನಿಂದ ಗ್ರಾಮವನ್ನು ಸ್ವಚ್ಛಗೊಳಿಸಿ ಎಲ್ಲರೂ ಒಗ್ಗಟ್ಟಾಗಿ ಈ ಹಬ್ಬವನ್ನು ಆಚರಿಸಿದ್ದೇವೆ. ಏನೇ ಆಗಲಿ ಕಾಲ ಕಾಲಕ್ಕೆ ಮಳೆ ಬಂದು ಬೆಳೆ ಬೆಳೆದು ಗ್ರಾಮ ಸಮೃದ್ಧಿಯಾಗಿ ಅದರಂತೆ ದೇಶವೂ ಸಮೃದ್ಧಿ ಕಾಣಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪಲ್ಲವಿ ಸಿ.ಟಿ.ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಲಕ್ಷ್ಮ್ಮಣನಾಯ್ಕ, ತಾಪಂ ಸದಸ್ಯ ಆನಂದನಾಯ್ಕ, ಗ್ರಾಪಂ ಅಧ್ಯಕ್ಷ ಹೊಸಳ್ಳಿ ರಾಜು, ಮುಖಂಡರಾದ ಎ.ಟಿ.ರಮೇಶ, ಅಣ್ಣನಾಯ್ಕ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.