ಕಡೂರು: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆ ಸಹಯೋಗದೊಂದಿಗೆ ಕಡೂರು-ಬೀರೂರು ಮಧ್ಯದ ಜಾನುವಾರು ತಳಿ ಸಂವರ್ಧನಾ ಕ್ಷೇತ್ರದ ಆವರಣದಲ್ಲಿ ಎರಡು ದಿನ ನಡೆದ ಅಮೃತ್ ಮಹಲ್ ಗಂಡು ಕರುಗಳ ಭಾರೀ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 87.70 ಲಕ್ಷ ರೂ. ಸಂಗ್ರಹವಾಗಿದೆ ಎಂದು ತಳಿ ಸಂವರ್ಧನಾ ಕೇಂದ್ರದ ಪಶು ವೈದ್ಯಾಧಿಕಾರಿ ಡಾ| ಭಾನುಪ್ರಕಾಶ್ ತಿಳಿಸಿದರು.
ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್ ಮಹಲ್ ತಳಿ ಆಕರ್ಷಕ ಮೈಕಟ್ಟು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಹ ಹೋರಿ ಕರುಗಳೆಂದು ಭಾರೀ ಬೇಡಿಕೆಯಿದೆ. ಹರಾಜು ಪ್ರಕ್ರಿಯೆ ಅಂದಿನಿಂದ ಇಂದಿನವರೆಗೂ ನಡೆಯುತ್ತ ಬಂದಿದೆ ಎಂದರು.
ಈ ಬಾರಿ 211 ಹೋರಿಗಳನ್ನು ಹರಾಜಿಗೆ ಬಿಡಲಾಗಿತ್ತು. 206 ರಾಸುಗಳ ಹರಾಜು ನಡೆದಿದೆ. ಇವುಗಳಿಂದ 87.70 ಲಕ್ಷ ರೂ. ಇಲಾಖೆಗೆ ಬಂದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ನೆಲಗಟ್ಟನಹಟ್ಟಿಯ ರೈತ ಪೆದ್ದುಬೈಯ ಎಂಬುವರು ಅತೀ ಹೆಚ್ಚು ಎಂದರೆ 2.1 ಲಕ್ಷ ರೂ.ಗೆ ಬಿಡ್‌ನಲ್ಲಿ ಕೂಗಿ ಹೋರಿಗಳನ್ನು ತಮ್ಮದಾಗಿರಿಸಿಕೊಂಡರು. ಮತ್ತೋರ್ವ ಚಿತ್ರದುರ್ಗ ಜಿಲ್ಲೆಯ ಗೊಡಬನಾಳು ಗ್ರಾಮದ ರೈತ ಕಲ್ಲೇಶ್ ಎಂಬುವರು ಸಣ್ಣಿ ಮತ್ತು ಪಾತ್ರೆ ಜೋಡಿಯನ್ನು 1.51 ಲಕ್ಷಕ್ಕೆ ಪಡೆದುಕೊಂಡರು ಎಂದರು.
ಕಳೆದ ವರ್ಷ ಹರಾಜು ಪ್ರಕ್ರಿಯೆ ನಡೆದಾಗ 190 ಹೋರಿಗಳು ಹರಾಜಿನಲ್ಲಿ ಪಾಲ್ಗೊಂಡಿದ್ದವು. 1.5 ಕೋಟಿ ರೂ. ಹರಾಜಿನಿಂದ ಸಂಗ್ರಹವಾಗಿತ್ತು. ಆದರೆ ಈ ಬಾರಿ ಹೋರಿಗಳ ಸಂಖ್ಯೆ ಹೆಚ್ಚಾಗಿ ಹರಾಜು ಹಣ ಕಡಿಮೆಯಾಗಿರುವುದಾಗಿ ವೈದ್ಯಾಧಿಕಾರಿ ಭಾನುಪ್ರಕಾಶ್ ಮಾಹಿತಿ ನೀಡಿದರು. ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ, ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೆ„ದೆ,
ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆ ಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಹೋರಿಕರುಗಳು ಕೇವಲ ಒಂದುವರೆ ವರ್ಷದಿಂದ ಎರಡು ವರ್ಷದ ಒಳಗಿನವು ಎಂದು ಮಾಹಿತಿ ನೀಡಿದರು.
ಜಂಟಿ ನಿರ್ದೇಶಕರು ಪಶುಪಾಲನಾ ಇಲಾಖೆ ಬೆಂಗಳೂರು ಡಾ| ಡಾ| ಶ್ರೀನಿವಾಸ್,ಜಂಟಿ
ನಿರ್ದೇಶಕರಾದ ಡಾ| ಪ್ರಶಾಂತ್‌ಮೂರ್ತಿ ಅಮೃತ್‌ಮಹಲ್ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ|ರಮೆಶ್ ಕುಮಾರ್, ಡಾ| ಮೋಹನ್, ಡಾ| ಸಿದ್ದಗಂಗಪ್ಪ ಬೀರೂರು ತಳಿ ಸಂವಂರ್ಧನ ಕೇಂದ್ರದ ಡಾ| ನವೀನ್, ಡಾ| ಮಂಜುನಾಥ್, ಡಾ| ಕಿರಣ್ ಇದ್ದರು. ಅಮೃತ್ ಮಹಲ್ ತಳಿಯ ಹೋರಿಗಳು ಉತ್ತಮ ದೇಶಿಯ ತಳಿಯಾಗಿದ್ದು ಬಹು ಬೇಡಿಕೆಯಿದೆ. ಕೃಷಿ ಚಟುವಟಿಕೆಗಳಿಗೂ ಹೇಳಿ ಮಾಡಿಸಿರುವಂತಹ ಈ ಹೋರಿಗಳನ್ನು ನಾವು ಕೊಂಡೊಯ್ದು ಒಂದೆರಡು ವರ್ಷಗಳ ಕಾಲ ಬೇಸಾಯದಂತಹ ಕಾಯಕಗಳಿಗೆ ಬಳಸಿಕೊಂಡು ನಂತರ ಬೇರೆಯವರಿಗೆ ಉತ್ತಮ ಲಾಭದಾಯಕ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಗೋಡಬನಾಳ್ ರೈತ ಮಲ್ಲಿಕಾರ್ಜುನ್ ತಿಳಿಸಿದರು.