Advertisement

ಉ.ಕ. ಸಂತ್ರಸ್ತರಿಗೆ ಆಸಂದಿ ಗ್ರಾಮಸ್ಥರ ನೆರವು

05:21 PM Aug 14, 2019 | Naveen |

ಕಡೂರು: ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಿಂದ ಸಂಕಷ್ಟದಲ್ಲಿರುವ ರೈತರಿಗಾಗಿ ಆಹಾರ ಪದಾರ್ಥ, ಬಟ್ಟೆ ಹಾಗೂ ಇನ್ನಿತರೆ ವಸ್ತುಗಳನ್ನೊಳಗೊಂಡ ಎರಡು ವಾಹನಗಳು ಸೋಮವಾರ ರಾತ್ರಿ ಜಮಖಂಡಿಗೆ ಪ್ರಯಾಣ ಬೆಳೆಸಿವೆ ಎಂದು ಆಸಂದಿ ಗ್ರಾಮಸ್ಥರು ತಿಳಿಸಿದರು.

Advertisement

ಸಾವಿರಾರು ಚಪಾತಿ, ಚಟ್ನಿಪುಡಿ, ಅಕ್ಕಿ ಚೀಲಗಳು,ಬಟ್ಟೆ, ಚಾಪೆ, ರಗ್ಗು ಮತ್ತಿತರೆ ದಿನಬಳಕೆಯ ವಸ್ತುಗಳನ್ನು ಗ್ರಾಮದಲ್ಲಿ ಸಂಗ್ರಹಿಸಿ ಎರಡು ಟ್ರಾಕ್ಸ್‌ಗಳ ಮೂಲಕ ಕಳುಹಿಸಿ ಕೊಡಲಾಯಿತು. ಅಲ್ಲಿನ ಸಂತ್ರಸ್ತರಿಗೆ ಇನ್ನೂ ಅಗತ್ಯವಿದ್ದರೆ ಪುನಃ ಮತ್ತೂಮ್ಮೆ ಕಳುಹಿಸಿ ಕೊಡಲಾಗುವುದು ಎಂದರು. ಇದೇ ರೀತಿ ತಾಲೂಕಿನ ಅಂಚೆಚೋಮನಹಳ್ಳಿಯ ಗ್ರಾಮಸ್ಥರು ಸಹ ಸಂತ್ರಸ್ತರ ನೆರವಿಗಾಗಿ ಸುಮಾರು ಸಾವಿರಾರು ಜೋಳದ ರೊಟ್ಟಿ, ಚಟ್ನಿಪುಡಿ ತಯಾರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಸೇರಿದಂತೆ 17 ಜಿಲ್ಲೆಗಳಲ್ಲಿ ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಅವರ ಸಹಾಯಕ್ಕೆ ತಾಲೂಕಿನ ಅನೇಕ ಸಂಘ, ಸಂಸ್ಥೆಗಳು ಮುಂದಾಗಿರುವುದನ್ನು ತಾಲೂಕು ಆಡಳಿತ ಶ್ಲಾಘಿಸುತ್ತದೆ ಎಂದು ತಹಶೀಲ್ದಾರ್‌ ಉಮೇಶ್‌ ಹೇಳಿದ್ದಾರೆ.

ಪಟ್ಟಣದಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರಿಂದ ವಸ್ತುಗಳನ್ನು ಹಾಗೂ ದಿನಸಿ, ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ಕಳುಹಿಸಿಕೊಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಸಂಘ, ಸಂಸ್ಥೆಗಳು ಸಂಗ್ರಹಿಸಿದ ನಂತರ ತಾಲೂಕು ಆಡಳಿತದ ಗಮನಕ್ಕೆ ತಂದು ಇಂತಹ ಗ್ರಾಮ ಅಥವಾ ಊರಿಗೆ ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ನೀಡುವುದು ಸೂಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next