Advertisement

ರೈತರು ಎಚ್ಚರ ವಹಿಸಿದರೆ ಲಾಭಾಂಶ

11:40 AM Aug 18, 2019 | Team Udayavani |

ಕಡೂರು: ಕೃಷಿ ಚಟುವಟಿಕೆಯಲ್ಲಿ ಸಂಭವಿಸಬಹುದಾದ ಲೋಪ-ದೋಷವನ್ನು ರೈತರು ಅರಿತು ಎಚ್ಚರಿಕೆಯ ಹೆಜ್ಜೆಯನ್ನಿಟ್ಟರೆ ಉತ್ತಮ ಲಾಭಾಂಶ ಪಡೆಯಲು ಸಾಧ್ಯ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಟೊಮೆಟೋ ಮಂಡಿ ವರ್ತಕರ ಸಂಘ ಹಾಗೂ ಎಪಿಎಂಸಿ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಟೊಮ್ಯಾಟೋ ಬಹಿರಂಗ ಹರಾಜಿನ ಪ್ರಥಮ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಟೊಮೆಟೋ ಬೆಳೆ ಬೆಳೆದ ರೈತರಿಗೆ ಮಾರಾಟ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ಗುಣಮಟ್ಟ ಹೊಂದಿದ ಟೊಮ್ಯಾಟೋಗೆ ಬೇಡಿಕೆಯಿದೆ. ಬಹುತೇಕ ಭಾರತದಲ್ಲಿ ಯಾವುದೇ ಪದಾರ್ಥಗಳು ಮೊದಲ ದರ್ಜೆಯ ಗುಣಮಟ್ಟದಲ್ಲಿರುವುದು ದೊರಕುವುದಿಲ್ಲ. ಅದೆಲ್ಲಾ ವಿದೇಶಗಳಿಗೆ ರಫ್ತಾಗುತ್ತದೆ. ಇದೂ ಕೂಡ ರೈತರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಇತ್ತೀಚಿಗೆ ತಾವು ನಡೆಸಿದ ಕೆಡಿಪಿ ಸಭೆಯಲ್ಲಿ ಪಟ್ಟಣದ ವಿವಿಧ ಇಲಾಖೆಗಳ ಅಕಾರಿಗಳು ತಮ್ಮ ಇಲಾಖೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಂಗಡಿಯ ಮುಂದೆ ಗೂಡಂಗಡಿ ಮುಂತಾದ ಚಟುವಟಿಕೆಗಳು ಇರಬಾರದು ಎಂದು ತಾವು ಎಚ್ಚರಿಸಿದ ಹಿನ್ನೆಲೆಯಲ್ಲಿ ಕೆಲವು ಇಲಾಖೆ ಅಧಿಕಾರಗಳು ಕ್ರಮ ಕೈಗೊಂಡಿದ್ದಾರೆ. ಆದರೆ ಇನ್ನೂ ಕೆಲವು ಇಲಾಖೆಗಳ ಬಾಹ್ಯ ಸೌಂದರ್ಯ ಸುಧಾರಣೆಯಾಗಬೇಕು ಎಂದು ಹೇಳಿದರು.

ಎಪಿಎಂಸಿ ಆವರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಮತ್ತು ಅಲ್ಲಲ್ಲಿ ಕುಳಿತು ಮದ್ಯ ಸೇವಿಸುವ ಚಟುವಟಿಕೆ ಬಗ್ಗೆ ಬಹಳಷ್ಟು ದೂರು ಬಂದ ಹಿನ್ನೆಲೆಯಲ್ಲಿ, ತಾವು ಸಮಿತಿ ಅಧ್ಯಕ್ಷರು ಮತ್ತು ಪೊಲೀಸರಿಗೆ ಅದನ್ನು ಮಟ್ಟಹಾಕಲು ಸೂಚಿಸಿದ್ದೇನೆ. ಎಪಿಎಂಸಿ ಮುಖ್ಯ ದ್ವಾರಗಳನ್ನು ಇಂತಿಷ್ಟು ಸಮಯ ಎಂದು ನಿಗದಿ ಮಾಡಿ ಉಳಿದಂತೆ ಮುಚ್ಚಲು ಸೂಚಿಸಿರುವುದಾಗಿ ತಿಳಿಸಿದರು. ಸಿಮೆಂಟ್ ರಸ್ತೆ, ಗೇಟ್‌ಗಳ ಬಳಿ ಜಾನುವಾರು ಪ್ರವೇಶ ನಿಷಿದ್ಧ. ಗಾರ್ಡ್‌ ಅಳವಡಿಕೆ, ಸಿಸಿ ಕ್ಯಾಮೆರಾ ಅಳವಡಿಕೆ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಈ ಕೂಡಲೇ ಕೈಗೆತ್ತಿಕೊಳ್ಳುವಂತೆ ಎಪಿಎಂಸಿ ಅಧ್ಯಕ್ಷರಿಗೆ ಸೂಚಿಸಿರುವುದನ್ನು ಶಾಸಕರು ಈ ಸಂದರ್ಭದಲ್ಲಿ ಸ್ಮರಿಸಿದರು.

Advertisement

ಟೊಮ್ಯಾಟೋ ವರ್ತಕ ಕೆ.ಎಚ್.ಎ. ಪ್ರಸನ್ನ ಮಾತನಾಡಿ, ರಾಜ್ಯದಲ್ಲಿ ಕೋಲಾರ ಬಿಟ್ಟರೆ ಕಡೂರು ಟೊಮ್ಯಾಟೋ ವರ್ತಕರ ಸಂಘ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಉತ್ತಮ ಹಣ್ಣನ್ನು ನೀಡುತ್ತಿದೆ. ಕಡೂರು ಎಪಿಎಂಸಿಯಲ್ಲಿ 20 ಮಂಡಿಗಳಿದ್ದು, ವಾರ್ಷಿಕ 10 ಲಕ್ಷಕ್ಕೂ ಹೆಚ್ಚಿನ ವ್ಯವಹಾರ ನಡೆಸಲಾಗುತ್ತಿದೆ. ರೈತರು ಟೊಮ್ಯಾಟೋ ಬೆಳೆ ಬೆಳೆಯುವ ಜತೆಗೆ ಅದರ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಕೈಗೊಂಡಾಗ ಉತ್ತಮ ಇಳುವರಿ ಸಾಧ್ಯವಿದೆ. ಮಾರುಕಟ್ಟೆಯಲ್ಲಿ ಟೊಮೆಟೋ ದರ ಏರಿಕೆ ಮತ್ತು ಇಳಿಕೆ ಆಗುತ್ತಿರುತ್ತದೆ. ಕಡೂರಿನ ಟೊಮ್ಯಾಟೋ ಬೆಳೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ ಎಂದರು. ವರ್ತಕರಿಗೆ ರಸ್ತೆ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಯೆಯನ್ನು ಎಪಿಎಂಸಿ ಕಲ್ಪಿಸಲಿ ಎಂದು ಬೇಡಿಕೆ ಇಟ್ಟರು.

ಎಪಿಎಂಸಿ ಅಧ್ಯಕ್ಷ ಶಿವಕುಮಾರ್‌ ಮಾತನಾಡಿ, ಟೊಮೆಟೋ ಹರಾಜು ಮಾರುಕಟ್ಟೆ ಕಡೂರಿನಲ್ಲಿ ಆರಂಭವಾಗಿರುವುದರಿಂದ ರೈತರಿಗೆ ಆಶಾದಾಯಕ ವಾತಾವರಣ ಲಭಿಸಿದೆ. ಆರಂಭವಾದ ಒಂದು ವರ್ಷದಲ್ಲಿಯೇ ಎಲ್ಲಾ ವಹಿವಾಟನ್ನು ಟೊಮ್ಯಾಟೋ ಮಾರುಕಟ್ಟೆ ಉತ್ತಮ ಸ್ಥಿತಿಗೆ ಕೊಂಡೊಯ್ದಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಕೆ.ಆರ್‌.ಮಹೇಶ್‌ಒಡೆಯರ್‌, ತಾ.ಪಂ. ಉಪಾಧ್ಯಕ್ಷ ಮಲ್ಲಪ್ಪನಹಳ್ಳಿ ಶಶಿ, ಎಪಿಎಂಸಿ ಅಧ್ಯಕ್ಷ ಶಿವಕುಮಾರ್‌, ಟೊಮ್ಯಾಟೋ ಬೆಳೆಗಾರರ ಸಂಘದ ಅಧ್ಯಕ್ಷ ಶಾಂತಪ್ಪ, ವಿವಿಧ ಮಂಡಿ ವರ್ತಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next