ಕಡೂರು: ಸಿದ್ಧಗಂಗಾ ಕ್ಷೇತ್ರದ ಡಾ| ಶಿವಕುಮಾರ ಸ್ವಾಮೀಜಿ ಅವರು ಶಿಕ್ಷಣ, ಅನ್ನ, ವಸತಿ ನೀಡುವ ಮೂಲಕ ತ್ರಿವಿಧ ದಾಸೋಹಿ ಎಂದೇ ಪ್ರಸಿದ್ಧರಾಗಿದ್ದರು. ಶ್ರೀಗಳ ಇಂತಹ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಪಟ್ಟಣದ ಎಪಿಎಂಸಿಯ ಶ್ರೀ ವಿನಾಯಕ ಸಗಟು ಮತ್ತು ಚಿಲ್ಲರೆ ತರಕಾರಿ ವರ್ತಕರ ಸಂಘ ವಾರದ ಸಂತೆಯ ದಿನವಾದ ಸೋಮವಾರ ಏರ್ಪಡಿಸಿದ್ದ ಸಿದ್ದಗಂಗಾ ಶ್ರೀಗಳ ಮೊದಲನೇ ವರ್ಷದ ಪುಣ್ಯಸ್ಮರಣೆ ಹಾಗೂ ಅನ್ನದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಿನ ಲಕ್ಷಾಂತರ ಬಡವ, ದೀನ, ದಲಿತರ ಮಕ್ಕಳಿಗೆ ಅನ್ನ, ವಿದ್ಯೆ ನೀಡುವುದರ ಮೂಲಕ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಶಿಲ್ಪಿ ಸಿದ್ಧಗಂಗಾ ಶ್ರೀಗಳು. ಇಂತಹ ಪರಮ ಪೂಜ್ಯರ ಸ್ಮರಣೆ ಕಾರ್ಯಕ್ರಮವನ್ನು ಯಾವುದೇ ಜಾತಿ, ಮತ ಭೇದವಿಲ್ಲದೆ ಸರ್ವರೂ ಒಂದೇ ಎಂಬ ಭಾವನೆಯಿಂದ ಏರ್ಪಡಿಸಿದ್ದು ಶ್ಲಾಘನೀಯ. ಎಪಿಎಂಸಿಯ ಚಿಲ್ಲರೆ ತರಕಾರಿ ವರ್ತಕರು ಸೇರಿ ಸಾವಿರಾರು ಜನರಿಗೆ ಅನ್ನದಾಸೋಹ ನೀಡುವುದರ ಮೂಲಕ ಸಿದ್ಧಗಂಗಾ ಶ್ರೀಗಳನ್ನು ಸ್ಮರಣೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.
ಪಟ್ಟಣದ ಅರಿವಿನ ಮನೆ ಸೌಹಾರ್ದ ಸಹಕಾರ ನಿಯಮಿತದ ಆಡಳಿತ ಮಂಡಳಿ ಸಹ ಇತ್ತೀಚೆಗೆ ಶ್ರೀಗಳ ಪುಣ್ಯಸ್ಮರಣೆ ಮಾಡಿ ಅನ್ನದಾಸೋಹ ನಡೆಸಿರುವುದು ಜನರಲ್ಲಿ ಗುರು, ಹಿರಿಯರ ಬಗ್ಗೆ ಭಕ್ತಿ ನೆಲೆಸಿದೆ ಎಂಬುದನ್ನು ತಿಳಿಸುತ್ತದೆ. ಇಂತಹ ಮಹಾ ಪುರುಷರ ಆದರ್ಶಗಳು ಮತ್ತು ದಾಸೋಹದ ಗುಣವನ್ನು ಪ್ರತಿಯೊಂದು ಗ್ರಾಮ ಮತ್ತು ಜನಾಂಗ ತಮ್ಮ ಹಿರಿಯರ, ಗುರುಗಳ ಸ್ಮರಣೆ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಕಡೂರು ಎಪಿಎಂಸಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಸಿದ್ಧಗಂಗಾ ಶ್ರೀಗಳ ದಾಸೋಹ ಪರಿಕಲ್ಪನೆ ನಿಜಕ್ಕೂ ಅದ್ಭುತವಾದದ್ದು. ಹಸಿದು ಬಂದವರಿಗೆ ಅನ್ನ ನೀಡಿದ ಮಹಾತ್ಮರು. ಇಂತಹ ಮಹಾತ್ಮರು ನಮ್ಮ ನಾಡಿನಲ್ಲಿ ಇರುವುದೇ ನಮ್ಮೆಲ್ಲರ ಪುಣ್ಯ. ಅವರ ಆದರ್ಶ, ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಅವರಿಗೆ ನಾವು ನೀಡುವ ಗುರು ಕಾಣಿಕೆಯಾಗಲಿದೆ ಎಂದರು.
ಶ್ರೀ ವಿನಾಯಕ ಸಗಟು ಮತ್ತು ಚಿಲ್ಲರೆ ತರಕಾರಿ ವರ್ತಕರ ಸಂಘದ 37 ಸದಸ್ಯರು ಸೇರಿ ನಡೆಸಿದ ಪುಣ್ಯಸ್ಮರಣೆ ಮತ್ತು ಅನ್ನದಾಸೋಹದಲ್ಲಿ ಸಾವಿರಾರು ಜನರಿಗೆ ಪ್ರಸಾದ ನೀಡಲಾಯಿತು. ಸಂಘದ ಮುಖಂಡರಾದ ಓಂಕಾರಮೂರ್ತಿ, ಸಿದ್ದೇಶ್, ಮಂಜುನಾಥ್, ರಮೇಶ್, ಸತೀಶ್, ರಘು, ಮಹಾಂತೇಶ್, ಆಸೀಫ್, ಅಕ್ರಂ ಭಾಷಾ, ದೇವರಾಜು, ರಾಜಪ್ಪ, ಜಯಕುಮಾರ್, ಲಿಂಗರಾಜು, ಚಂದ್ರು, ಮೇಣಪ್ಪ ಇತರರಿದ್ದರು.