Advertisement

ಕಡೂರು ಸಂಪೂರ್ಣ ಬಂದ್‌

01:14 PM Mar 25, 2020 | Naveen |

ಕಡೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ತಾಲೂಕಿನಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಸೋಮವಾರ ಮಾಮೂಲಿಯಂತೆ ಜನ ಸಂದಣಿ ಹೆಚ್ಚಾಗಿತ್ತು. ಸರಕಾರ ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣ ಸಂಪೂರ್ಣ ಜನತಾ ಕರ್ಫ್ಯೂ ವಾತಾವರಣ ಕಂಡುಬಂದಿತು.

Advertisement

ಬುಧವಾರ ನಡೆಯಲಿರುವ ಯುಗಾದಿ ಹಬ್ಬಕ್ಕಾಗಿ ಸೋಮವಾರದ ಸಂತೆಯನ್ನು ತಾಲೂಕು ಆಡಳಿತ ರದ್ದು ಮಾಡಿದ್ದರೂ ಸಹ ಲೆಕ್ಕಿಸದೆ ಜನರು ಕೆಎಲ್‌ವಿ ವೃತ್ತದಲ್ಲಿ ಸಂತೆ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಪೊಲೀಸ್‌, ಪುರಸಭೆ, ತಾಲೂಕು ಆಡಳಿತ ಜನರನ್ನು ಚದುರಿಸಿ ಬಾಗಿಲು ಹಾಕಿಸಿದರು. ದಿನಸಿ ಕೊಳ್ಳುವವರಿಗೆ ಮಾತ್ರ ಅವಕಾಶ ನೀಡಿ ಮಾರ್ಚ್‌ 31ರ ವರೆಗೆ ಲಾಕ್‌ಡೌನ್‌ ಮಾಡಲು ಪುರಸಭೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿ, ಮತ್ತೂಮ್ಮೆ ಜನರನ್ನು ಮನೆಯಿಂದ ಹೊರಬಾರದಿರಲು ಮನವಿ ಮಾಡಲಾಯಿತು.

ಮಂಗಳವಾರ ಬೆಳಗ್ಗೆಯಿಂದಲೇ ಪಟ್ಟಣದ ಮುಖ್ಯ ಬೀದಿಗಳು ಮತ್ತು ಬಡಾವಣೆಗಳ ಉಪ ಬೀದಿಗಳು ಸೇರಿದಂತೆ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ವೃತ್ತಗಳಾದ ಕನಕವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ಕೆಎಲ್‌ವಿ ವೃತ್ತ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಬಣಗುಡುತ್ತಿದ್ದವು.

ಇಡೀ ಪಟ್ಟಣಕ್ಕೆ ಪಟ್ಟಣವೇ ಸ್ತಬ್ಧವಾಗಿ ಒಂದೆರೆಡು ಬೈಕ್‌ಗಳು ಓಡಾಡುತ್ತಿದ್ದ ದೃಶ್ಯ ಬಿಟ್ಟರೆ ಉಳಿದಂತೆ ಶೂನ್ಯ ಆವರಿಸಿತ್ತು. ರಾಜ್ಯ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಜನರೇ ಇಲ್ಲದೇ ಸ್ಮಶಾನ ಮೌನ ಆವರಿಸಿತ್ತು. ನಿತ್ಯ 60ಕ್ಕೂ ಹೆಚ್ಚು ರೈಲುಗಳು ಓಡಾಡುವ ರೈಲ್ವೆ ನಿಲ್ದಾಣ ಪ್ರೇತಕಳೆ ಹೊತ್ತು ಮಲಗಿದ್ದಂತೆ ಭಾಸವಾಯಿತು.

ಪೆಟ್ರೋಲ್‌ ಬಂಕ್‌ ಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿದ್ದವು. ಔಷಧ ಅಂಗಡಿಗಳು ಇದಕ್ಕೆ ಹೊರತಾಗಿರಲಿಲ್ಲ. ಕೆಲವು ಔಷಧ ಅಂಗಡಿಗಳ ಮಾಲಿಕರು ಜನರಿಲ್ಲದೆ ಬಾಗಿಲು ಹಾಕಿದ್ದರು. ಬಹುತೇಕ ಬ್ಯಾಂಕ್‌ ಗಳು ಮತ್ತು ಎಟಿಎಂಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಖಾಲಿ-ಖಾಲಿ ಇದ್ದವು.

Advertisement

ಯುಗಾದಿಯ ಅಮವಾಸ್ಯೆಗೆ ಧಾನ್ಯ ನೀಡುವುದು(ಬ್ರಾಹ್ಮಣರು ಮತ್ತು ಜಂಗ ಮರಿಗೆ) ಪಾರಂಪರಿಕವಾಗಿ ನಡೆದು ಕೊಂಡು ಬಂದಿರುವ ಪದ್ಧತಿಯಾಗಿರುವುದರಿಂದ, ಧಾನ್ಯ ನೀಡುವ ಕಾರ್ಯ ವನ್ನು ಬೆಳಗಿನ ಜಾವದಿಂದ 10 ಗಂಟೆ ವರೆಗೆ ನಡೆಸಿ ಹೊಸ ವರ್ಷದ ಪೂಜಾ ಕೈಂಕರ್ಯ ಮುಗಿಸಿ ಧನ್ಯರಾದರು. ಧಾನ್ಯ ನೀಡುವುದರ ಮೂಲಕ ಯುಗಾದಿ ಹಬ್ಬಕ್ಕೆ ಚಾಲನೆ ನೀಡಲಾಯಿತು.

ತಾಲೂಕಿನಲ್ಲಿರುವ ಎಲ್ಲಾ ಮುಜುರಾಯಿ ಮತ್ತು ಇತರೆ ದೇಗುಲ ಗಳಲ್ಲಿ ಅರ್ಚಕರು, ಸಹಾಯಕ ಅರ್ಚಕರು ಪೂಜೆ ಮಾಡಿ ದೇಗುಲಗಳ ಬಾಗಿಲು ಹಾಕುವಂತೆ ನಿರ್ದೇಶನ ನೀಡಲಾಗಿದೆ. ಭಕ್ತಾ ದಿಗಳು ಯಾವುದೇ ದೇವಾಲಯಕ್ಕೆ ಹೋಗಬಾರದು. ಜಾತ್ರೆ ಮತ್ತಿತರ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ.ಮಾ.31ರ ವರೆಗೆ ಯಾರು ಹೊರಬಾರದಂತೆ ಎಚ್ಚರ ವಹಿಸಬೇಕು. ಯುಗಾದಿ ಹಬ್ಬ ಮನೆಯಲ್ಲಿಯೇ ಆಚರಿಸಿ ಎಲ್ಲರಿಗೂ ಶುಭವಾಗಲಿ ಎಂದು ತಹಶೀಲ್ದಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next