ಕದ್ರಿ: ಪ್ರವಾಸೋದ್ಯಮಕ್ಕೆ ಪೂರಕವೆಂಬಂತೆ ನಗರದ ಕದ್ರಿ ಪಾರ್ಕ್ ಮುಂಭಾಗ ಸ್ಮಾರ್ಟ್‌ಸಿಟಿ ವತಿಯಿಂದ ಸ್ಮಾರ್ಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಸದ್ಯ ಮುಕ್ತಾಯ ಹಂತದಲ್ಲಿದೆ. ಇನ್ನೇನು ಎರಡು ತಿಂಗಳೊಳಗೆ ರಸ್ತೆಯನ್ನು ಸಾರ್ವಜನಿಕ ಮುಕ್ತಗೊಳಿಸುವ ನಿರ್ಧಾರ ಸ್ಮಾರ್ಟ್‌ಸಿಟಿ ಮಾಡುತ್ತಿದೆ. ಸುಮಾರು 12 ಕೋ.ರೂ. ವೆಚ್ಚದಲ್ಲಿ ಈ ರಸ್ತೆ ಸಂಪೂರ್ಣ ಅಭಿವೃದ್ಧಿಯಾಗುತ್ತಿದ್ದು, ಈ ಪರಿಸರದಲ್ಲಿರುವ ಮರಗಳನ್ನು ಹಾಗೇ ಉಳಿಸಿ, ಪರಿಸರಕ್ಕೆ ಪೂರಕವಾದಂತಹ ಯೋಜನೆ ರೂಪಿಸಲಾಗಿದೆ.
ರಸ್ತೆಯಲ್ಲಿ ಕಾಂಕ್ರೀಟ್, ಚರಂಡಿ ನಿರ್ಮಾಣ, ಭೂಗತ ಕೇಬಲ್ ಅಳವಡಿಕೆ, ರ್‍ಯಾಂಪ್ ನಿರ್ಮಾಣ ಫೌಂಟೈನ್, ಮ್ಯೂರಲ್, ಪೈಂಟಿಂಗ್, ಟೈಲಿಂಗ್, ಪ್ಲಾಂಟೇಶನ್, ಪರ್ಗೋಲಾ ಮುಂತಾದ ಕಾಮಗಾರಿಯೂ ಮುಕ್ತಾಯದ ಹಂತಕ್ಕೆ ಬಂದಿದೆ. ಕೆಲವೊಂದು ಸಿವಿಲ್ ಕಾಮಗಾರಿ, ಗಿಡಗಳ ನಾಟಿ ಸಹಿತ ಸಣ್ಣ ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ.
ಈ ರಸ್ತೆಯನ್ನು ಈಸ್ಟ್, ವೆಸ್ಟ್ ಮತ್ತು ಮಿಡಲ್ ಜೋನ್ ಎಂದು ಮೂರು ವಿಭಾಗ ಮಾಡಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈಸ್ಟ್ ಜೋನ್ ಅಂದರೆ ಕದ್ರಿ ಪೋಲಿಸ್ ಸ್ಟೇಶನ್‌ನಿಂದ ಆಕಾಶವಾಣಿ ತನಕ ಹೋಗಿ ವಾಹನಗಳು ಯೂ ಟರ್ನ್ ಮಾಡಿ ಬರಬೇಕು. ವೆಸ್ಟ್ ಜೋನ್‌ನಲ್ಲಿ ಪದವು ಹೈಸ್ಕೂಲ್ ಪ್ರಾರಂಭದಿಂದ ಗೋರಕ್ಷನಾಥ ಹಾಲ್ ತನಕ ಹೋಗಿ ಯೂ ಟರ್ನ್ ಹಾಕಬೇಕು. ಮಿಡಲ್ ಜೋನ್‌ನಲ್ಲಿ ಯಾವುದೇ ವಾಹನ ಚಲಿಸುವಂತಿಲ್ಲ. ಅಲ್ಲಿ ಮಕ್ಕಳಿಗೆ ಆಟ ಆಡುವ ವ್ಯವಸ್ಥೆ ಸಹಿತ, ವಾಕಿಂಗ್ ಟ್ರ್ಯಾಕ್, ನೀರಿನ ಕಾರಂಜಿಗಳನ್ನು ರಚಿಸಲು ಉದ್ದೇಶಿಸಲಾಗಿತ್ತು. ಆದರೆ ಸದ್ಯ ಯೋಜನೆಯಿಂದ ಮಿಡಲ್ ಜೋನ್ ಕೈಬಿಡಲಾಗಿದ್ದು, ಮಧ್ಯದಲ್ಲಿ ನಿರ್ಮಿಸಬೇಕಾಗಿದ್ದ ಫ್ಲ್ಯಾಟ್ ಫಾರಂ ಬದಲು ರಸ್ತೆಯನ್ನೇ ರಚಿಸಲಾಗಿದೆ. ಇದರಿಂದಾಗಿ ವಾಹನಗಳು ರಸ್ತೆಯಲ್ಲಿ ಯೂ ಟರ್ನ್ ಮಾಡುವ ಬದಲು ನೇರವಾಗಿ ಮುಂದುವರಿಯಬಹುದಾಗಿದೆ.
ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಕದ್ರಿ ಹಳೆಯ ಪಾರ್ಕ್, ಕದ್ರಿ ಜಿಂಕೆ ಪಾರ್ಕ್ ಅನ್ನು ಒಂದೇ ಪಾರ್ಕ್ ಆಗಿ ರೂಪಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನ ಪರಿಚಯಿಸುವ ಕುರಿತು ಚಿಂತನೆ ನಡೆಯುತ್ತಿದೆ. ಸಂಚಾರ ನಿರ್ಬಂಧ ಕೈಬಿಡುವ ಸಾಧ್ಯತೆ ಕದ್ರಿ ಪಾರ್ಕ್ ಸ್ಮಾಟ್ ರಸ್ತೆಯಾದ ಬಳಿಕ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಪ್ರಸ್ತಾವ ಈ ಹಿಂದೆ ಇತ್ತು. ಆದರೆ ಸದ್ಯ ಈ ಪ್ರಸ್ತಾವ ಬಹುತೇಕ ಕೈ ಬಿಡುವ ಸಾಧ್ಯತೆ ಇದೆ.
ನೂತನ ರಸ್ತೆಯಲ್ಲಿ ಲಘು ವಾಹನಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಏಕೆಂದರೆ, ರಾಷ್ಟ್ರೀಯ ಹೆದ್ದಾರಿ 66ರ ನಂತೂರು, ಪದವು, ಕೆಪಿಟಿ ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಲಘು ವಾಹನಗಳು ಪಾರ್ಕ್ ರಸ್ತೆಯ ಮೂಲಕ ಬರುತ್ತವೆ. ಆ ವೇಳೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ ತುಸು ಕಡಿಮೆಯಾಗುತ್ತಿತ್ತು. ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಿದರೆ, ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಬಹುದು.
ಸಿವಿಲ್ ಕಾಮಗಾರಿ ಬಾಕಿ
ಕದ್ರಿ ಪಾರ್ಕ್ ಮುಂಭಾಗ ಸ್ಮಾರ್ಟ್ ಸಿಟಿ ವತಿಯಿಂದ ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದೆ. ಸದ್ಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನು ಕೆಲವೊಂದು ಸಿವಿಲ್ ಕಾಮ ಗಾರಿ ಬಾಕಿ ಇದೆ. ಎರಡು ತಿಂಗಳೊ ಳಗಾಗಿ ಕಾಮಗಾರಿ ಮುಕ್ತಾಯ ಗೊಳ್ಳುವ ಸಾಧ್ಯತೆ ಇದೆ.
–ಅರುಣ್‌ಪ್ರಭ, ಸ್ಮಾರ್ಟ್‌ಸಿಟಿ ಜನರಲ್ ಮ್ಯಾನೇಜರ್