Advertisement

ಕಾರಂಜಿಯಲ್ಲಿ ನೀರು ಚಿಮ್ಮದಿದ್ದರೂ 60 ಸಾವಿರ ರೂ. ಖರ್ಚು!

09:53 PM Jan 05, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಕದ್ರಿ ಜಿಂಕೆ ಪಾರ್ಕ್‌ನಲ್ಲಿ ವೀಕ್ಷಣೆಗಿರುವ ಜಿಲ್ಲೆಯ ಏಕೈಕ ಸಂಗೀತ ಕಾರಂಜಿ ವರ್ಷದಿಂದ ವರ್ಷಕ್ಕೆ ಸೊರಗುತ್ತಿದೆ. ಕಾರಂಜಿಯಲ್ಲಿ ಪ್ರತಿದಿನ ನೀರು ಚಿಮ್ಮದಿದ್ದರೂ ತಿಂಗಳಿಗೆ ಸಾವಿರಾರು ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿ ತೋಟಗಾರಿಕ ಇಲಾಖೆಯದ್ದು!

Advertisement

ಕದ್ರಿ ಸಂಗೀತ ಕಾರಂಜಿಯಿಂದ ತಿಂಗಳಿಗೆ ಸುಮಾರು 60 ಸಾವಿರ ರೂ. ನಿರ್ವಹಣೆಯ ಖರ್ಚು ತಗಲುತ್ತದೆ. ಖರ್ಚಿನ ಶೇ.10ರಷ್ಟು ಕೂಡ ಆದಾಯ ಬರುವುದಿಲ್ಲ. ತಿಂಗಳಿಗೆ ಸುಮಾರು 35,000 ರೂ. ನಷ್ಟು ವಿದ್ಯುತ್‌ ಬಿಲ್‌ ಬರುತ್ತಿದೆ. ಅದರಂತೆ ಟೆಕ್ನೀಶಿಯನ್‌, ಸಿಬಂದಿ ವರ್ಗದವರಿಗೆಂದು ತಿಂಗಳಿಗೆ ಒಟ್ಟಾರೆ ಸುಮಾರು 60 ಸಾವಿರ ರೂ. ಹಣಬೇಕು. ಸದ್ಯ ವಾರದಲ್ಲಿ ಒಂದು ದಿನ ಮಾತ್ರ ಕಾರಂಜಿ ಶೋ ನಡೆಯುತ್ತಿದೆ. ಕೇವಲ 5-7 ಮಂದಿ ವೀಕ್ಷಣೆಗೆ ಬರುತ್ತಿದ್ದಾರೆ. ಹೀಗಿದ್ದಾಗ ತಿಂಗಳಿಗೆ 5 ಸಾವಿರ ರೂ. ಕೂಡ ಆದಾಯ ಬರುತ್ತಿಲ್ಲ.

ಕದ್ರಿಯ ವಿಶಾಲವಾದ ಪಾರ್ಕ್‌ನ ಒಳಭಾಗದಲ್ಲಿ ಈಗಾಗಲೇ ಕಾರಂಜಿ ಯೊಂದಿದೆ. ಕೆಲವು ವರ್ಷಗಳಿಂದ ಈ ಕಾರಂಜಿ ನಿರ್ವಹಣೆಯಲ್ಲಿಲ್ಲ. ಈ ಹಿಂದೆ ದಿನನಿತ್ಯ ಬರುವ ಪ್ರವಾಸಿಗರು ಇದನ್ನು ಉಚಿತವಾಗಿ ವೀಕ್ಷಿಸುತ್ತಿದ್ದರು. ವರ್ಷ ಕಳೆದಂತೆ ನೀರಿನ ಸಮಸ್ಯೆಯಿಂದಾಗಿ ಕಾರಂಜಿ ನರ್ತನ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕದ್ರಿಯ ಹಳೆಯ ಕಾರಂಜಿ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಹೆಚ್ಚು ಹಣ ವ್ಯಯಿಸದೆ ಕಡಿಮೆ ಖರ್ಚಿನಲ್ಲಿ ಯಾವ ರೀತಿ ಅಭಿವೃದ್ಧಿಗೊಳಿಸಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಕದ್ರಿ ಪಾರ್ಕ್‌ ಅಭಿವೃದ್ಧಿ ಸಮಿತಿ ಸದಸ್ಯ ಜಿ.ಕೆ. ಭಟ್‌ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಸದ್ಯ ಕದ್ರಿಯ ಜಿಂಕೆ ಉದ್ಯಾನವನದಲ್ಲಿರುವ ಲೇಸರ್‌ ಕಾರಂಜಿಯಿಂದಾಗಿ ನಿರ್ವಹಣೆ ಕಷ್ಟ. ಹೊಸ ಹೊಸ ಥೀಮ್‌ ಅಳವಡಿಸಲೂ ಹಣ ಪೋಲಾಗುತ್ತದೆ. ಇದರಿಂದಾಗಿ ಸಾವಿರಾರು ರೂಪಾಯಿ ನಷ್ಟ ಉಂಟಾ ಗುತ್ತಿದೆ. ಇದರ ಬದಲು ಕಾರಂಜಿ ಯನ್ನು ಸರಳವಾಗಿ ಆಯೋಜನೆ ಮಾಡಿದರೆ ಕಡಿಮೆ ಖರ್ಚಿನಲ್ಲಿ ನಿರ್ವಹಣೆ ಸಾಧ್ಯ’ ಎನ್ನುತ್ತಾರೆ.

5 ಕೋಟಿ ರೂ.ನಲ್ಲಿ ನಿರ್ಮಾಣ
ಕದ್ರಿ ಜಿಂಕೆ ಪಾರ್ಕ್‌ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಮ್ಯೂಸಿಕ್‌ ಫೌಂಡೇಶನ್‌ ಅನ್ನು 2018ರ ಜ. 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಕಾಮಗಾರಿ
ಪೂರ್ಣಗೊಂಡು ಆರು ತಿಂಗಳುಗಳ ಬಳಿಕ ಕಾರಂಜಿ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್‌. ಲೋಬೋ ಅವರ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾರಂಜಿ ಕಾಮಗಾರಿಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ, ಲೇಸರ್‌ ಲೈಟ್‌ ತಂತ್ರಜ್ಞಾನ ವ್ಯವಸ್ಥೆಯನ್ನು ಅಲ್ಲಿ ಕೂಡ ಬಳಸಲಾಗಿದೆ.

Advertisement

ದರ ಕಡಿಮೆಯಾದರೂ ಪ್ರಯೋಜನವಾಗಿಲ್ಲ
ಕದ್ರಿ ಸಂಗೀತ ಕಾರಂಜಿ ಉದ್ಘಾಟ ನೆಯಾದ ಬಳಿಕ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. ಆದರೆ 2018ರ ಎ. 20ರಿಂದ ಪ್ರದರ್ಶನಕ್ಕೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಶೋ ದರ ಇಳಿಕೆಯಾಗಿದ್ದು, 6-12 ವರ್ಷ ದೊಳಗಿನವರಿಗೆ 15 ರೂ., ವಯಸ್ಕರಿಗೆ 30 ರೂ. ನಿಗದಿಯಾಗಿದೆ. ಆದರೂ ಪ್ರವಾಸಿಗರ ಸಂಖ್ಯೆ ಗಮನಾರ್ಹ ಏರಿಕೆ ಕಂಡಿಲ್ಲ.

ವರ್ಷದಿಂದ ವರ್ಷಕ್ಕೆ ಆದಾಯ ಇಳಿಕೆ
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಕಾರಂಜಿ ವೀಕ್ಷಣೆಗೆ ಆಗಮಿಸುವ ಮಂದಿ ಕಡಿಮೆಯಾಗುತ್ತಿದ್ದಾರೆ. ಗೇಟ್‌ ಕಲೆಕ್ಷನ್‌ ನಿಂದ 2018-19ರಲ್ಲಿ ಸುಮಾರು 8 ಲಕ್ಷ ರೂ. ಆದಾಯ ಸಂಗ್ರಹವಾದರೆ, 2019-20ರಲ್ಲಿ ಸುಮಾರು 7 ಲಕ್ಷ ರೂ.ಗೆ ಇಳಿದಿತ್ತು. ಈ ವರ್ಷ ಹೆಚ್ಚಿನ ದಿನಗಳು ಕಾ ರಂಜಿ ಶೋ ನಡೆಯಲಿಲ್ಲ. ಇದೇ ಕಾರಣಕ್ಕೆ ಆದಾಯದಲ್ಲಿ ಮತ್ತಷ್ಟು ಇಳಿಕೆ ಕಂಡಿದೆ.

ಜಿಲ್ಲಾಧಿಕಾರಿ ಜತೆ ಚರ್ಚೆ
ಕದ್ರಿ ಕಾರಂಜಿ ಅಭಿವೃದ್ಧಿಯ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಅವರ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ತೋಟಗಾರಿಕ ಇಲಾಖೆ ಹೇಳುವಂತೆ ಕಾರಂಜಿ ವ್ಯವಸ್ಥೆಯ ನಿರ್ವಹಣೆಗೆ ವರ್ಷಕ್ಕೆ ಲಕ್ಷಾಂತರ ರೂ. ಖರ್ಚು ಇದೆ. ಟಿಕೆಟ್‌ ವ್ಯವಸ್ಥೆ ಮಾಡಿದರೂ ಖರ್ಚಿನ ಅರ್ಧದಷ್ಟೂ ಆದಾಯ ಬರುತ್ತಿಲ್ಲ. ಇದೇ ಕಾರಣಕ್ಕೆ ಪ್ರಾಯೋಜಕರನ್ನು ಸೆಳೆಯುವ ಪ್ರಯತ್ನವೂ ನಡೆಯುತ್ತಿದೆ.
-ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next