Advertisement
ನಾಲ್ಕು ವರ್ಷಗಳ ಹಿಂದೆ ಕದ್ರಿಯಲ್ಲಿ ಸಂಗೀತ ಕಾರಂಜಿ ಉದ್ಘಾಟನೆ ಗೊಂಡಿತ್ತು. ಈ ಪೈಕಿ ಎರಡು ವರ್ಷಗಳ ಕಾಲ ಕೋವಿಡ್ ಕಾರಣ ದಿಂದ ಪ್ರದರ್ಶನ ಸ್ಥಗಿತಗೊಂಡಿತ್ತು. ಉಳಿದ ಎರಡು ವರ್ಷಗಳಲ್ಲಿ ಮಳೆಗಾಲದ ನಿಟ್ಟಿನಲ್ಲಿ ಪ್ರತೀ ವರ್ಷ ಸುಮಾರು 4 ತಿಂಗಳ ಬಾಗಿಲು ಮುಚ್ಚಿತ್ತು. ಕೋವಿಡ್ ತೀವ್ರತೆ ಕಡಿಮೆಯಾದರೂ ಸಂಗೀತ ಕಾರಂಜಿಯಲ್ಲಿ ಸದ್ಯಕ್ಕೆ ನೀರು ಚಿಮ್ಮುವುದು ಅನುಮಾನ ಎನ್ನಲಾಗಿದೆ. ಕಾರಂಜಿ ಶೋ ಸಹಿತ ಮೂಲಸೌಕರ್ಯಕ್ಕೆಂದು ಟೆಂಡರ್ ಕರೆದರೂ, ಅದನ್ನು ವಹಿಸಲು ಬಿಡ್‌ದಾರರು ಮುಂದೆ ಬರದೆ ಅಂತಿಮಗೊಳ್ಳುತ್ತಿಲ್ಲ. ಮತ್ತೂಂದೆಡೆ ಸಂಘ-ಸಂಸ್ಥೆಗಳ ಸಿಎಸ್‌ಆರ್ ಅನುದಾನದಲ್ಲಿ ಅಥವಾ ಮುಡಾ ಮುಖೇನ ಅಭಿವೃದ್ಧಿ ಮಾಡಲು ಮಾತುಕತೆ ನಡೆಯುತ್ತಿದೆ. ಆದರೂ ಇನ್ನೂ ಅಂತಿಮಗೊಂಡಿಲ್ಲ.
Related Articles
ನೀರಿನ ನರ್ತನ ಜತೆಗೆ ಯಕ್ಷಗಾನ, ಭೂತಾರಾಧನೆ, ಕಂಬಳ, ನಾಗಮಂಡಲ ಸಹಿತ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸೇರಿದಂತೆ ವಿವಿಧ ಬಗೆಯ ಥೀಮ್‌ನಲ್ಲಿ ಸಂಗೀತ ಕಾರಂಜಿ ಪ್ರದರ್ಶನಗೊಳಿಸಲಾಗುತ್ತಿತ್ತು. ಶೋ ಪ್ರಾರಂಭವಾದಾಗಿನಿಂದಲೂ ಒಂದೇ ಕಲ್ಪನೆಯಲ್ಲಿ ಶೋ ಪ್ರದರ್ಶನಗೊಳಿಸಲಾಗುತ್ತಿದ್ದು, ವೀಕ್ಷಕರು ಕಡಿಮೆಯಾಗಲು ಇದು ಕೂಡ ಕಾರಣ ಎಂದು ಹೇಳಬಹುದು.
Advertisement
ಕದ್ರಿ ಸಂಗೀತ ಕಾರಂಜಿ ಉದ್ಘಾಟನೆಯಾದ ಬಳಿಕ ಮೂರು ತಿಂಗಳುಗಳ ಕಾಲ ಪ್ರವೇಶ ದರ ನಿಗದಿಪಡಿಸಿರಲಿಲ್ಲ. ಆದರೆ 2018ರ ಎ. 20 ರಿಂದ ಪ್ರದರ್ಶನಕ್ಕೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ಶೋ ದರ ಇಳಿಕೆಯಾಗಿದ್ದು, 6-12 ವರ್ಷದೊಳಗಿನವರಿಗೆ 15 ರೂ., ವಯಸ್ಕರಿಗೆ 30 ರೂ. ನಿಗದಿಯಾಗಿದೆ. ದರ ಕಡಿಮೆಯಾದರೂ, ಪ್ರವಾಸಿಗರ ಸಂಖ್ಯೆಯಲ್ಲೇನೂ ಗಮನಾರ್ಹ ಏರಿಕೆ ಕಂಡಿರಲಿಲ್ಲ.
5 ಕೋಟಿ ರೂ.ನಲ್ಲಿ ನಿರ್ಮಾಣಕದ್ರಿ ಜಿಂಕೆ ಪಾರ್ಕ್ ಬಳಿ ಹಳೆ ಮೃಗಾಲಯದಲ್ಲಿ ಮುಡಾ ವತಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸಂಗೀತ ಕಾರಂಜಿಯನ್ನು 2018ರ ಜ. 7ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳ ಬಳಿಕ ಕಾರಂಜಿ ಉದ್ಘಾಟಿಸಲಾಗಿತ್ತು. ಅಂದಿನ ಶಾಸಕ ಜೆ.ಆರ್. ಲೋಬೋ ಅವರ ನೇತೃತ್ವದಲ್ಲಿ ಸಂಗೀತ ಕಾರಂಜಿ ತಲೆ ಎತ್ತಿತ್ತು. ಕಾರಂಜಿ ಕಾಮಗಾರಿಯನ್ನು ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕಂಪೆನಿ ವಹಿಸಿತ್ತು. ಇಲ್ಲಿ ಬಣ್ಣದ ಕಾರಂಜಿ ಮಾತ್ರವಲ್ಲದೆ, ಲೇಸರ್ ಲೈಟ್ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಲಾಗಿದೆ. ಸೊಳ್ಳೆ ಉತ್ಪತ್ತಿ ತಾಣವಾಗುತ್ತಿದೆ ಕಾರಂಜಿ ಕೊಳ
ಕದ್ರಿಯ ಜಿಂಕೆ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿಯಲ್ಲಿ ನೀರು ಚಿಮ್ಮದೆ ಎರಡು ವರ್ಷ ಕಳೆಯುತ್ತಿದೆ. ಕಾರಂಜಿ ಕೊಳದಲ್ಲಿ ಪೈಪ್‌ಲೈನ್ ಸುತ್ತಮುತ್ತ ಕೊಳಚೆ ನೀರು ತುಂಬಿಕೊಂಡಿದೆ. ಸುತ್ತಲೂ ಪಾಚಿಯಿಂದಾಗಿ ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಹೊಂದಿಕೊಂಡಿರುವ ಪಾರ್ಕ್‌ಗೆ ಪ್ರತೀ ದಿನ ಹತ್ತಾರು ಮಂದಿ ಆಗಮಿಸುತ್ತಿದ್ದು, ಆ ಪ್ರದೇಶದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು. ಕಾರಂಜಿ ಆರಂಭಗೊಂಡಿಲ್ಲ
ಕದ್ರಿಯ ಜಿಂಕೆ ಪಾರ್ಕ್ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸಂಗೀತ ಕಾರಂಜಿ ಇನ್ನೂ ಆರಂಭಗೊಂಡಿಲ್ಲ. ಕಾರಂಜಿಯ ನಿರ್ವಹಣೆಯ ಕುರಿತಂತೆ ಟೆಂಡರ್ ಇನ್ನೂ ಅಂತಿಮಗೊಂಡಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
-ಜಾನಕಿ,
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕಿ