Advertisement

ಕದ್ರಿ ಉದ್ಯಾನವನದಲ್ಲಿ ಪುಷ್ಪರಾಶಿಯ ಚೆಲುವು

05:37 AM Jan 27, 2019 | |

ಮಹಾನಗರ: ಕದ್ರಿ ಉದ್ಯಾನವನ ತುಂಬೆಲ್ಲ ಶನಿವಾರ ಪುಷ್ಪರಾಶಿಯ ಚೆಲುವು…ಪಾರ್ಕಿನ ಬಲಭಾಗದಲ್ಲಿ ಹೂಗಳ ನಗು ಚೆಲ್ಲಿದ್ದರೆ, ಎಡಭಾಗದಲ್ಲಿ ವಿಧವಿಧ ತರಕಾರಿ ಗಳ ತರಾವರಿ… ಬಣ್ಣ ಬಣ್ಣದ ಕಾರ್ನೇಷನ್‌ ಮತ್ತು ಗುಲಾಬಿ ಹೂವುಗಳಿಂದ ಅಲಂಕ ರಿಸಿದ ‘ಸಮುದ್ರದಲ್ಲಿ ತೇಲುವ ಹಡಗು’, ಜಗ್‌ನಿಂದ ಲೋಟಕ್ಕೆ ಕಾಫಿ ಸುರಿಯುವ ಮಾದರಿ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ.

Advertisement

ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿ.ಪಂ., ದ.ಕ. ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಜ. 28ರ ವರೆಗೆ ಕದ್ರಿ ಉದ್ಯಾನವನದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿವಿಧ ಮಾದರಿಗಳ ಆಕರ್ಷಣೆ
ಸೇವಂತಿಗೆ, ಜೀನ್ಯ, ಚೆಂಡು ಹೂವು, ಗುಲಾಬಿ ಸಹಿತ ವೈವಿಧ್ಯ ಹೂಗಳ ತೋಟವೇ ಪಾರ್ಕಿನಲ್ಲಿ ನಿರ್ಮಾಣವಾಗಿದೆ. ಬಣ್ಣ ಬಣ್ಣದ ಸೇವಂತಿಗೆ ಬಳಸಿ ಜಗ್‌ನಿಂದ ಲೋಟಕ್ಕೆ ಕಾಫಿ ಸುರಿಯುವ ಮಾದರಿ, ಅಂಥೋರಿಯಂ, ಆರ್ಕಿಡ್‌ ಗಿಡಗಳೂ ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಬಸಲೆ, ಬೆಂಡೆ, ಚೀನಿ, ಪಾಲಕ್‌, ಕ್ಯಾಬೇಜ್‌, ಕೊತ್ತಂಬರಿ ಸೊಪ್ಪು, ಬಸಲೆ, ಕುಂಬಳ, ಹಾಗಲ ಸಹಿತ ಸುಮಾರು 20 ತಳಿಯ ತರಕಾರಿಗಳು ಜನಾಕರ್ಷಣೆ ಪಡೆಯುತ್ತಿವೆ. ಪ್ರತಿ ವರ್ಷ ಫ‌ಲಪುಷ್ಪ ಪ್ರದರ್ಶನವು ಕದ್ರಿ ಉದ್ಯಾನವನದ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಉದ್ಯಾನವನದ ವಿವಿಧ ಭಾಗಗಳಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.

ತೆಂಗಿನ ಮರಕ್ಕೆ ಸ್ಟೆಮ್‌ ಫೀಡ್‌
ಉದ್ಯಾನವನದೊಳಗೆ ಸುಮಾರು 90ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ವಿವಿಧ ನರ್ಸರಿದಾರರು, ಬೀಜ/ಗೊಬ್ಬರಗಳ ಮಾರಾಟಗಾರರು, ಯಂತ್ರಗಳ ಮಾರಾಟಗಾರರು ಮಳಿಗೆಗಳನ್ನು ತೆರೆದಿದ್ದು, ತಮ್ಮ ಉತ್ಪನ್ನಗಳ ಪರಿಚಯದಲ್ಲಿ ತೊಡಗಿದ್ದಾರೆ. ಶಕ್ತಿನಗರದ ಶೆಗ್ರಿ ಏಜೆನ್ಸೀಸ್‌ನ ರಂಜನ್‌ ಅವರು ಪ್ರದರ್ಶನಕ್ಕಿಟ್ಟಿರುವ ತೆಂಗಿನ ಮರಕ್ಕೆ ಸ್ಟೆಮ್‌ ಫೀಡ್‌ ಯಂತ್ರ ವಿಶೇಷವಾಗಿದೆ. ತೆಂಗಿನ ಮರದ ಬುಡದಿಂದ ಸ್ವಲ್ಪ ಮೇಲ್ಭಾಗದಲ್ಲಿ ರಂಧ್ರ ಕೊರೆದು ಇಂಜೆಕ್ಷನ್‌ ಮೂಲಕ ಗೊಬ್ಬರ ಪೂರೈಕೆ ಮಾಡುವ ವಿಧಾನ ಇದಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ರಂಜನ್‌, ‘ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ತೋಟದ ಕೆಲಸಕ್ಕೆ ಸಿಗುವುದಿಲ್ಲ. ಈ ಸಮಸ್ಯೆ ನಿವಾರಣೆಗೆ ಈ ವಿಧಾನ ಅತ್ಯುತ್ತಮ. ಬಾಟಲ್‌ ಮುಖಾಂತರ ಇಂಜೆಕ್ಷನ್‌ ಅಳವಡಿಸಿ ಮರಕ್ಕೆ ರಂಧ್ರ ಕೊರೆದು ಧ್ರವ ರೂಪದ ಗೊಬ್ಬರ ಹಾಯಿಸುವುದರಿಂದ ಹುಲುಸಾಗಿ ಬೆಳೆಯುತ್ತದೆ.

ಮರಕ್ಕೂ ಯಾವುದೇ ಹಾನಿಯಾಗುವುದಿಲ್ಲ. ತಮಿಳಿನಾಡಿನಲ್ಲಿ ಈಗಾಗಲೇ ಇದನ್ನು ಪ್ರಯೋಗಿಸಲಾಗಿದೆ ಎನ್ನುತ್ತಾರೆ.

Advertisement

ಹೂವಿನ ಹಡಗು 
ಸಮುದ್ರದಲ್ಲಿ ತೇಲುವ ಹಡಗಿನ ಮಾದರಿ’ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಗಮನ ಸೆಳೆಯುತ್ತಿದೆ. ಹಡಗಿನ ಜತೆಗೆ ಕಾರು ಮತ್ತು ಐಸ್‌ಕ್ರೀಂ (ಕೋನ್‌) ಮಾದರಿಗಳು ಆಕರ್ಷಕವಾಗಿವೆ. 4 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಡಗಿಗೆ 25,000 ಕಾರ್ನೇಷನ್‌, 5,000 ಗುಲಾಬಿ, 300 ಬಂಡಲ್‌ ಬ್ಲೂ ಮತ್ತು ವೈಟ್ ಡೈಸಿ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ. ಕಾರನ್ನು ಸಂಪೂರ್ಣವಾಗಿ 18,000 ಸೇವಂತಿ ಹೂವುಗಳಿಂದ ಸಿಂಗರಿಸಿರುವುದು ವಿಶೇಷ. ಕೆಟ್ಲ (ಚಹಾ- ಕಾಫಿ ಹಾಕುವ ಪಾತ್ರೆ) ಟೀ ಪಾಟ್‌ಗೆ 22,000 ಸೇವಂತಿಗೆ ಹೂವುಗಳನ್ನು ಬಳಸಿ ನಿರ್ಮಿಸಲಾಗಿದೆ.

1 ರೂ.ಗೆ ತರಕಾರಿ ಗಿಡ!
ತೋಟಗಾರಿಕಾ ಇಲಾಖೆಯಿಂದ ತರಕಾರಿ ಗಿಡಗಳ ಮಾರಾಟವೂ ಇದೆ. ವಿಶೇಷ ವೆಂದರೆ ಕೆಲವ ಗಿಡಗಳಿಗೆ 1 ರೂ.ಗಳನ್ನು ನಿಗದಿಪಡಿಸಲಾಗಿದೆ. ‌ ಪ್ಲಾಸ್ಟಿಕ್‌ ಟ್ರೇನಲ್ಲಿ (98 ಮತ್ತು 101 ಗುಳಿ ಹೊಂದಿರುವ) ಬೆಳೆಸಲಾಗಿರುವ ತರಕಾರಿ ಗಿಡಗಳಿಗೆ ಒಂದು ರೂ. ಬೆಲೆ. ಕೊಕ್ಕೋ 10 ರೂ., ಕರಿಮೆಣಸು 28 ರೂ., ಕಸಿ ಮಾವು 32 ರೂ., ಪಪ್ಪಾಯ 10 ರೂ., ಅಡಿಕೆ ಗಿಡ 20 ರೂ.ಗಳನ್ನು ನೀಡಿ ಇಲ್ಲಿ ಖರೀದಿಸಬಹುದು.

ಜ. 28ರ ವರೆಗೆ ಪ್ರದರ್ಶನ 
ಶನಿವಾರ ಆರಂಭವಾಗಿರುವ ಪ್ರದರ್ಶನ 28 ರವರೆಗೆ ನಡೆಯಲಿದೆ. ಮೂರೂ ದಿನವೂ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ. ಮಕ್ಕಳಿಗೆ 10 ರೂ. ಮತ್ತು ಹಿರಿಯರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಶಾಲೆಗಳಿಂದ ಸಮವಸ್ತ್ರ ಧರಿಸಿ ಬಂದ ಮಕ್ಕಳಿಗೆ, ವಿಕಲಾಂಗಚೇತನರಿಗೆ ಮತ್ತು ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next