Advertisement

ಕದ್ರಿ ಸಂಗೀತ ಕಾರಂಜಿ ಪ್ರಾಯೋಗಿಕ ಪ್ರದರ್ಶನ

02:19 AM Dec 12, 2017 | Harsha Rao |

ಕದ್ರಿ : ಬಹುನಿರೀಕ್ಷಿತ ಕದ್ರಿಯ ಜಿಂಕೆ ಪಾರ್ಕ್‌ ಖ್ಯಾತಿಯ ಹಳೆ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಜೀವ್‌ ಗಾಂಧಿ ಸಂಗೀತ ಕಾರಂಜಿಯು ಅಧಿಕೃತವಾಗಿ ಸೋಮವಾರ ಸಂಜೆಯಿಂದ ಪ್ರಾಯೋಗಿಕ ಕಾರ್ಯಾ ಚರಣೆ ಆರಂಭಿಸಿದೆ.

Advertisement

ಇದರ ಉದ್ಘಾಟನೆಗೆ ಡಿಸೆಂಬರ್‌ ಅಂತ್ಯದಲ್ಲಿ  ಮುಖ್ಯಮಂತ್ರಿ ಆಗಮಿಸುವ ನಿರೀಕ್ಷೆಯಿದ್ದು, ಅಲ್ಲಿಯವರೆಗೆ ಪ್ರತಿದಿನ ಸಂಜೆ 6.30ರಿಂದ 7.30ರ ವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಇದರ ಕಾಮಗಾರಿಯನ್ನು ನಿರ್ವಹಿಸಿದ್ದು, ಉದ್ಘಾಟನೆಯ ಬಳಿಕ ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲಿದೆ. 

ಪ್ರಸ್ತುತ ಕಾರಂಜಿಯ ಎಲ್ಲ  ಕಾಮಗಾರಿಗಳೂ ಪೂರ್ಣಗೊಂಡಿದ್ದು,  ಸೂಕ್ತ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಉದ್ಘಾಟನೆ ಬಳಿಕ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಒಂದೆರಡು ವಾರಗಳ ಕಾಲ ಪ್ರಾಯೋಗಿಕ ಪರೀಕ್ಷೆ ನಡೆಸಲು ಮುಡಾ ನಿರ್ಧರಿಸಿದೆ. 

ಗುಣಮಟ್ಟ ಕೊರತೆಯಿಂದ ಉದ್ಘಾಟನೆ ವಿಳಂಬ  
ಸುಮಾರು 5 ಕೋ.ರೂ. ವೆಚ್ಚದಲ್ಲಿ ಈ ಸಂಗೀತ ಕಾರಂಜಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಕಳೆದ ಎಪ್ರಿಲ್‌ನಲ್ಲೇ ಕಾಮಗಾರಿ ಪೂರ್ಣಗೊಂಡಿತ್ತು. ಬಳಿಕ ಶಾಸಕರು, ಮೇಯರ್‌, ಮುಡಾ ಆಯುಕ್ತರು ಸಹಿತ ಪ್ರಮುಖರು ವೀಕ್ಷಿಸಿದ್ದರು. ಆದರೆ ಅದು ಗುಣಮಟ್ಟದಿಂದ ಕೂಡಿರದ ಹಿನ್ನೆಲೆಯಲ್ಲಿ ಶಾಸಕರು ಕಾರಂಜಿ  ಕುರಿತು ಅಸಮಾಧಾನ ವ್ಯಕ್ತಪಡಿಸಿ, ಅದರ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅದರ ಅನುಷ್ಠಾನದಲ್ಲಿ ಬದಲಾವಣೆ ಮಾಡಿಕೊಂಡು ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿದೆ. 

Advertisement

ಉದ್ಘಾಟನೆಗೆ ಮೊದಲು ಸಾರ್ವಜನಿಕರಿಗೆ ಅವಕಾಶವಿಲ್ಲ
ಸಂಗೀತ  ಕಾರಂಜಿಯು  ತನ್ನ ಪ್ರಾಯೋಗಿಕ ಕಾರ್ಯಾಚರಣೆಯನ್ನು ಆರಂಭಿದೆಯಾದರೂ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ. ಉದ್ಘಾಟನೆ ಬಳಿಕವೇ ಅವರು ಕಾರಂಜಿಯನ್ನು ವೀಕ್ಷಿಸಬಹುದಾಗಿದೆ ಎಂದು ಮುಡಾ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಇಂದು ಡಿಸಿ ವೀಕ್ಷಣೆ
ನೂತನವಾಗಿ ಅನುಷ್ಠಾನಗೊಂಡಿರುವ ಸಂಗೀತ ಕಾರಂಜಿಯ ಪ್ರಾಯೋಗಿಕ ಪರೀಕ್ಷೆ ಆರಂಭ ಗೊಂಡಿರುವ ಹಿನ್ನೆಲೆಯಲ್ಲಿ ಡಿ. 12ರಂದು ಸಂಜೆ 6.30ರ ಬಳಿಕ  ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ವೀಕ್ಷಿಸಲಿದ್ದು, ಬಳಿಕ ಗುಣಮಟ್ಟದ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next