Advertisement

ಮದುವಣಗಿತ್ತಿಯಂತೆ ಸಜ್ಜಾದ ಉಡುಪಿ

02:05 PM May 31, 2022 | Team Udayavani |

ಉಡುಪಿ: ದೇಗುಲಗಳ ನಗರಿ ಉಡುಪಿಯಲ್ಲಿ ಜೂ. 1ರಿಂದ 10ರ ತನಕ ನಡೆಯಲಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ಹೆಜಮಾಡಿಯಿಂದ ಬೈಂದೂರು, ಮಲ್ಪೆ ಸಮುದ್ರ ಕಿನಾರೆಯಿಂದ ಧರ್ಮಸ್ಥಳದವರೆಗೂ ಮತ್ತು ಜಿಲ್ಯಾದ್ಯಂತ ವಿಶಿಷ್ಟ ರೀತಿಯ ಕೊಡೆಗಳು, ಕೇಸರಿ ಧ್ವಜಗಳು, ಸ್ವಾಗತ ಕಮಾನುಗಳು, ಕೇಸರಿ ಪತಾಕೆಗಳನ್ನು ಕಟ್ಟಿ ಶೃಂಗರಿಸಲಾಗಿದೆ.

Advertisement

ಆಕರ್ಷಕ ಕೊಡೆಗಳ ಮೆರುಗು

ಹೆಚ್ಚಿನ ಎಲ್ಲ ದೇವಸ್ಥಾನಗಳ ಮುಂಭಾಗ ಮತ್ತು ರಸ್ತೆಗಳ ವಿಭಾಜಕಗಳಲ್ಲಿ ಬ್ರಹ್ಮಕಲಶೋತ್ಸವ ಪ್ರಚಾರದ ಕೊಡೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಈ ಕೊಡೆಗಳನ್ನು ಬ್ರಹ್ಮಕಲಶೋತ್ಸವದ ಅನಂತರ ಬಡವರಿಗೆ ಉಚಿತವಾಗಿ ನೀಡಲಾಗುವುದು. ನಗರಾದ್ಯಂತ ಬ್ರಹ್ಮಕಲಶೋತ್ಸವಕ್ಕೆ ಶುಭ ಹಾರೈಸುವ ಬ್ಯಾನರ್‌ಗಳು, ಕೇಸರಿ ಧ್ವಜ ಮತ್ತು ಕೇಸರಿ ಪತಾಕೆಗಳನ್ನು ಹಾಕಲಾಗಿದೆ. ಕಲ್ಸಂಕ ಜಂಕ್ಷನ್‌ನಿಂದ ಶಾರದಾ ಕಲ್ಯಾಣ ಮಂಟಪದ ವರೆಗೆ ವಿದ್ಯುದ್ದೀಪಾಲಂಕಾರದ ಚಪ್ಪರ ಕಂಗೊಳಿಸುತ್ತಿದೆ.

ರಾರಾಜಿಸುತ್ತಿರುವ ಕೇಸರಿ ಪತಾಕೆಗಳು

Advertisement

ಉಡುಪಿಗೆ ಪ್ರವೇಶಿಸುವ ಕರಾವಳಿ ಬೈಪಾಸ್‌ನಿಂದ ಮಣಿಪಾಲದ ತನಕ ಡಿವೈಡರ್‌ಗಳಿಗೆ ಹಾಕಿದ ಕೇಸರಿ ಬಾವುಟ ವಂತೂ ಹಿಂದೆಂದೂ ಉಡುಪಿ ನಗರ ಕಂಡಿಲ್ಲ ಎನ್ನುವಂತೆ ಭಾಸವಾಗುತ್ತಿದೆ. ನಗರದಲ್ಲಿ ಅಳವಡಿಸಲಾದ ಕೇಸರಿ ಪತಾಕೆಗಳ ವಿಶಿಷ್ಟ ರೀತಿಯ ಕಮಾನುಗಳು, ದೇಗುಲದ ಒಳಾಂಗಣದಲ್ಲಿರುವ ಸೆಣಬಿನ ಕಮಾನುಗಳನ್ನು ಬಳ್ಳಾರಿಯ ಹೊಸಪೇಟೆ ಯಿಂದ ತರಿಸಲಾಗಿದೆ. ದೇಗುಲಕ್ಕೆ ಸಾಗುವ ದಾರಿಯುದ್ದಕ್ಕೂ ರಾಜಸ್ಥಾನದಿಂದ ತರಿಸಲಾದ ಸಾಂಪ್ರದಾಯಿಕ ಕೊಡೆಗಳ ಚಪ್ಪರ ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ. 1,500 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲದ ಬ್ರಹ್ಮಕಲಶೋತ್ಸವಕ್ಕೆ ಲಕ್ಷಾಂತರ ಜನರು ಬರುವ ನಿರೀಕ್ಷೆಯಿದೆ.

ಸ್ವಯಂಸೇವಕರ ದಂಡು

ಸುಮಾರು 200 ಮಂದಿ ಸ್ವಯಂಸೇವಕರು 5 ತಂಡಗಳನ್ನಾಗಿ ರಚಿಸಿಕೊಂಡು ರಾತ್ರಿ 8 ಗಂಟೆಯಿಂದ ಮುಂಜಾನೆ 6ರ ತನಕ ನಗರದಾದ್ಯಂತ ಅಲ್ಲಲ್ಲಿ ಕೇಸರಿ ಚಪ್ಪರಗಳನ್ನು ಹೊದಿಸುತ್ತಿದ್ದಾರೆ. ಪುರ ಶೃಂಗಾರಗೊಳಿಸುವ ನೆಲೆಯಲ್ಲಿ ಹಿಂದೂ ಸಮಾಜೋತ್ಸವವನ್ನು ನೆನಪಿಸುವಂತೆ ಬ್ಯಾನರ್‌ಗಳು, ಕೇಸರಿ ಧ್ವಜ ಮತ್ತು ಕೇಸರಿ ಪತಾಕೆಗಳನ್ನು ಸ್ವಯಂಸೇವಕರು ತಮ್ಮ ಸ್ವಂತ ಖರ್ಚಿನಿಂದಲೇ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕಾಗಿ ದೇಗುಲದಿಂದ ಯಾವುದೇ ವೆಚ್ಚ ಭರಿಸುತ್ತಿಲ್ಲ.

ಪಾರ್ಕಿಂಗ್‌ ವ್ಯವಸ್ಥೆ

ದೇಗುಲಕ್ಕೆ ಆಗಮಿಸುವ ಎಲ್ಲ ದ್ವಿಚಕ್ರವಾಹನಗಳು ಕುಂಜಿಬೆಟ್ಟು ಮೀನು ಮಾರುಕಟ್ಟೆ ಬಳಿ (ಬಿಜೆಪಿ ಕಚೇರಿ) ಮತ್ತು ಕಾರುಗಳಿಗೆ ಎಂಜಿಎಂ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಎಂಜಿಎಂ ಮೈದಾನದಿಂದ ದೇಗುಲಕ್ಕೆ ಬರಲು ಉಚಿತವಾಗಿ ಎಲೆಕ್ಟ್ರಿಕ್‌ ರಿಕ್ಷಾ ಮತ್ತು ಕಾರಿನ ಸೇವೆ ಒದಗಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಮಾಹಿತಿ ನೀಡಿದರು.

ಕಡಿಯಾಳಿಗೆ ಸಿಎಂ

ಕಡಿಯಾಳಿ ದೇಗುಲದಲ್ಲಿ ಆಕರ್ಷಕ ವಾಗಿ ಮೂಡಿ ಬಂದ ರಾಜ್ಯದಲ್ಲಿಯೇ ಪ್ರಥಮವೆನಿಸಿದ ಕಾಷ್ಠಶಿಲ್ಪದ ಅತ್ಯಾಕರ್ಷಕ ಸ್ವಯಂಚಾಲಿತ ತಿರುಗುವ ಮುಚ್ಚಿಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್‌ 1ರ ಬೆಳಗ್ಗೆ 9ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ.ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next