ಉಡುಪಿ: ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು.
ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ದೇಗುಲದ ತಂತ್ರಿ ಗೋವರ್ಧನ ತಂತ್ರಿ ಪೂಜಾ ವಿಧಿವಿಧಾನ ನೆರವೇರಿಸಿದರು.
ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು ಮಾತನಾಡಿ, ದೇಗುಲದ ಶಿಲಾಮಯ ಗುಡಿಯ ರಚನೆ, ಸುತ್ತುಪೌಳಿಯ ಕಾರ್ಯಗಳಿಗೆ ಎಲ್ಲ ಭಕ್ತರು ಕೈಜೋಡಿಸಿ ಯಥಾಶಕ್ತಿ ಸಹಾಯ ಹಸ್ತವನ್ನು ನೀಡಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಆಶೀರ್ವಚನ ನೀಡಿದರು.
ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ಶ್ರೀ ದೇಗುಲದ ವಾಸ್ತುಶಿಲ್ಪ, ವಾಸ್ತು ಬಗ್ಗೆ ವಿವರಿಸಿ, ದೇವಳದ ಸುತ್ತುಪೌಳಿಯ ಶಿಲಾಮಯ ನಿರ್ಮಾಣವನ್ನು ತ್ವರಿತವಾಗಿ ನಿರ್ಮಾಣ ಮಾಡಿ ಜೀರ್ಣೋದ್ಧಾರ ಕಾರ್ಯಗಳನ್ನು ಮುಂದಿನ ಯುಗಾದಿ ಒಳಗೆ ಕೈಗೊಳ್ಳುವ ಸಂಕಲ್ಪ ಮಾಡಿರುವುದಾಗಿ ಆಡಳಿತ ಮಂಡಳಿ ತಿಳಿಸಿದ್ದು, ಶೀಘ್ರದಲ್ಲಿ ಈ ಕಾರ್ಯಗಳು ಪೂರ್ಣಗೊಳ್ಳಲೆಂದು ಹಾರೈಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ ಹೆಬ್ಟಾರ್, ವ್ಯವಸಾಯ ಸಹಕಾರಿ ಸಂಘದ ಸದಸ್ಯ ಶ್ರೀಶ ಉಪಾಧ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ಡಿ. ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯ ದರ್ಶಿ ಡಾ| ವಿಜಯೇಂದ್ರ ರಾವ್ ನಿರೂಪಿಸಿದರು.
ಈ ಸಂದರ್ಭ ವ್ಯವಸಾಯ ಸಹಕಾರಿ ಸಂಘದ ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಕೆ. ರಂಜನ್, ನರಸಿಂಹ ಕಾಮತ್, ಸುಭಾಶ್ಚಂದ್ರ ಹೆಗ್ಡೆ, ಕುಮುದಾ, ವಜ್ರಾಕ್ಷಿ ಪಿ., ಶಾರದಾ, ಬಾಲಕೃಷ್ಣ ಜೋಗಿ, ದೇಗುಲದ ಅರ್ಚಕ ವೃಂದ, ಸಿಬಂದಿ ವರ್ಗ, ಭಕ್ತರು ಭಾಗವಹಿಸಿದ್ದರು.