ಹೊಸದಿಲ್ಲಿ: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಬಾಲಿವುಡ್ ನಟ ಕಾದರ್ ಖಾನ್ ಅವರು ಮಂಗಳವಾರ ಕೆನಡಾದ ಟೊರಾಂಟೋದಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಕಾದರ್ ಖಾದ್ ಅವರ ಪುತ್ರ ಸರ್‌ಫರಾಜ್ ಅವರು ತಂದೆಯ ಸಾವಿನ ಸುದ್ದಿಯನ್ನು ಖಚಿತ ಪಡಿಸಿದ್ದು, ಕೆನಡಾದಲ್ಲೇ ಅಂತ್ಯಕ್ರಿಯೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಡಿಸೆಂಬರ್ 28 ರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ವಿಶೇಷ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು.
ಕೆಲ ದಿನಗಳಿಂದ ಕಾದರ್ ಖಾನ್ ಅವರು ನಿಧನ ಹೊಂದಿದ್ದಾರೆ ಎನ್ನುವ ಸುದ್ದಿ ಕೆಲ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ , ಸಾಮಾಜಿಕ ತಾಣಗಳಲ್ಲೂ ಹರಿದಾಡಿ ಗೊಂದಲಕ್ಕೆ ಕಾರಣವಾಗಿತ್ತು.
ತನ್ನ ಸಾಟಿಯಿಲ್ಲದ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ನೆಚ್ಚಿನ ನಟನಾಗಿ ಕಾದರ್ ಖಾನ್ ಅವರು ಪ್ರಖ್ಯಾತಿ ಪಡೆದಿದ್ದರು. ಹಾಸ್ಯ ನಟನಾಗಿ, ಚಿತ್ರಕಥೆ ಬರಹಗಾರರಾಗಿ ಬಾಲಿವುಡ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.
1937 ರ ಅಕ್ಟೋಬರ್ 22 ರಂದು ಅಫ್ಘಾನಿಸ್ಥಾನದ ಕಾಬೂಲ್‌ನಲ್ಲಿ ಜನಿಸಿದ್ದ ಕಾದರ್ ಅವರು 1970 ರಲ್ಲಿ ಯಶ್ ಚೋಪ್ರಾ ಅವರ ದಾಗ್ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿರಿಸಿದ್ದರು. ಇದಕ್ಕೂ ಮುನ್ನ ಅವರು ಮುಂಬಯಿ ಎಂ.ಎಚ್.ಸಾಬೂ ಸಿದ್ಧಿಕ್ ಕಾಲೇಜ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.
ಅನಾರಿ, ಜುದ್ವಾ, ಜುದಾಯಿ, ಮಿಸ್ಟರ್ ನಟವರ್‌ಲಾಲ್, ಸುಹಾಗ್, ಮುಜ್‌ಸೇ ಶಾದಿ ಕರೋಗಿ, ಲಕ್ಕಿ ನೋ ಟೈಮ್ ಫೋರ್ ಲವ್, ಹಸೀನಾ ಮಾನ್ ಜಾಯೇಗಿ, ದುಲ್‌ಹೇ ರಾಜಾ, ಸಾಜನ್, ಚಲೇ ಸಸುರಾಲ್, ಮೈ ಕಿಲಾಡೀ ತು ಅನಾರೀ , ಕೂಲಿ ನಂಬರ್ 1 ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು.
ರಾಜೇಶ್ ಖನ್ನಾ ಅವರು ರೋಟಿ ಚಿತ್ರಕ್ಕಾಗಿ ಕಾದರ್ ಖಾನ್ ಅವರಿಂದ ಸಂಭಾಷಣೆ ಬರೆಸಿ ಇನ್ನೊಂದು ಪ್ರತಿಭೆಯನ್ನು ಹೊರ ಹಾಕಿದ್ದರು.ಆ ಬಳಿಕ ಹಲವು ಚಿತ್ರಗಳಿಗೆ ಕಾದರ್ ಖಾನ್ ಅವರು ಸಂಭಾಷಣೆ ಬರೆದಿದ್ದರು.
2013 ರಲ್ಲಿ ಅವರಿಗೆ ಸಾಹಿತ್ಯ ಶಿರೋಮಣಿ ಪದವಿ ನೀಡಿ ಗೌರವಿಸಲಾಗಿತ್ತು. ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿತ್ತು.