ಕಿರುತೆರೆ ನಟ ವಿಜಯ್ ಸೂರ್ಯ ಹಾಗೂ ಯುವ ನಟಿ ಮೇಘಶ್ರೀ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ “ಕದ್ದು ಮುಚ್ಚಿ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಚಿತ್ರದ ಬಹುತೇಕ ಕಲಾವಿದರು, ತಂತ್ರಜ್ಞರು ಹೊಸಬರಾದರೂ ಚಿತ್ರದಲ್ಲಿರುವ ಸದಭಿರುಚಿಯ ಅಂಶಗಳನ್ನು ಕಂಡು ಚಿತ್ರರಂಗದ ಅನೇಕ ಹಿರಿಯರು ಸಾಥ್ ನೀಡುತ್ತಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಚಿತ್ರತಂಡ ಹಮ್ಮಿಕೊಂಡಿದ್ದ ಪ್ರಮೋಷನ್ ಕೆಲಸಗಳಲ್ಲಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹಾಜರಾಗಿ ಚಿತ್ರದ ಬಗ್ಗೆ ಮಾತನಾಡಿದರು.
“ಇಂದು ಚಿತ್ರಗಳಲ್ಲಿ ಜೀವನ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂಬ ಗಂಭೀರ ಆರೋಪವಿದೆ. ಇಂಥ ಸಂದರ್ಭದಲ್ಲಿ ಒಂದಷ್ಟು ಮೌಲ್ಯಗಳನ್ನು ಸಾರುವ ಚಿತ್ರಗಳಿಗೆ ಎಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು’ ಎನ್ನುವ ಹಂಸಲೇಖ, “ಹೊಸಬರ ಚಿತ್ರವಾದರೂ ಯಾವ ಅನುಭವಿಗಳಿಗೂ ಕಡಿಮೆ ಇಲ್ಲದಂತೆ ಚಿತ್ರವನ್ನು ಮಾಡಿದ್ದಾರೆ. ಚಿತ್ರದಲ್ಲಿರುವ ಸದಭಿರುಚಿ ಅಂಶಗಳು ನನ್ನನ್ನು ಚಿತ್ರದ ಬಗ್ಗೆ ಮಾತನಾಡುವಂತೆ ಮಾಡಿವೆ. ಪೋಸ್ಟ್ ಪ್ರೊಡಕ್ಷನ್ ವೇಳೆ ಚಿತ್ರವನ್ನು ನೋಡಿದ್ದು, ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ.
ಇನ್ನು “ಕದ್ದುಮುಚ್ಚಿ’ ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಸ್ವತಃ ಹಂಸಲೇಖ ಅವರೇ ಹಾಡುಗಳಿಗೆ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ. ಹಲವು ವರ್ಷಗಳ ಕಾಲ ಹಂಸಲೇಖ ಅವರ ಗರಡಿಯಲ್ಲಿ ಶಿಷ್ಯನಾಗಿ ಪಳಗಿರುವ ವಸಂತ ರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಮಂಜುನಾಥ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಸೂರ್ಯ, ಮೇಘಶ್ರೀ ಅವರೊಂದಿಗೆ ಹಿರಿಯ ನಟ ಉಮೇಶ್, ಅಶ್ವಿನಿ ಗೌಡ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ “ಕದ್ದು ಮುಚ್ಚಿ’ ಚಿತ್ರದ ಹಾಡುಗಳಿಗೆ ಮತ್ತು ಟ್ರೇಲರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ಒಟ್ಟಾರೆ “ಕದ್ದು ಮುಚ್ಚಿ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ ಅನ್ನೋದು ಇದೇ ವಾರಾಂತ್ಯಕ್ಕೆ ಗೊತ್ತಾಗಲಿದೆ.