ನಿಜಕ್ಕೂ ಆತ ಕೃತಿಚೌರ್ಯ ಮಾಡಿದ್ದಾನಾ ಅಥವಾ ಅದು ಸುಳ್ಳು ಆರೋಪನಾ, ಆ ಆರೋಪದ ಹಿಂದೆ ಬೇರೆ ಉದ್ದೇಶವಿದೆಯಾ… ಇಂತಹ ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಮುಂದೆ ಸಾಗುವ ಸಿನಿಮಾ ಈ ವಾರ ತೆರೆಕಂಡಿರುವ “ಕದ್ದ ಚಿತ್ರ’.
ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ಈ ಸಿನಿಮಾ ಒಂದು ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನಡಿ ಮೂಡಿಬಂದಿದೆ. ಪ್ರೇಕ್ಷಕರನ್ನು ಕುತೂಹಲದ ತುತ್ತತುದಿಗೆ ಕೊಂಡೊಯ್ಯಬೇಕೆಂಬುದು ಪರಮ ಉದ್ದೇಶ. ಅದೇ ಕಾರಣಕ್ಕಾಗಿ ಸಾಕಷ್ಟು ಟ್ವಿಸ್ಟ್-ಟರ್ನ್ಗಳೊಂದಿಗೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಚಿತ್ರದಲ್ಲಿ ನಾಯಕನ ಮೇಲೆ ಬರುವ ಆರೋಪ ಆತನ ಫ್ಯಾಮಿಲಿ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಅದರಿಂದ ಆತ ಪಡುವ ಪಾಡೇನು ಎಂಬ ಅಂಶದ ಮೂಲಕ ಚಿತ್ರಕ್ಕೆ ಸೆಂಟಿಮೆಂಟ್ ಟಚ್ ಕೂಡಾ ಕೊಟ್ಟಿದ್ದಾರೆ. ಮೊದಲೇ ಹೇಳಿದಂತೆ ಆರಂಭದಲ್ಲಿ ಬರಹಗಾರನೊಬ್ಬನ ಬದುಕಿನ ಏಳು-ಬೀಳಿನ ಕಥೆಯಾಗಿ ತೆರೆದುಕೊಳ್ಳುವ ಸಿನಿಮಾ, ಮುಂದೆ ಸಾಗುತ್ತಾ ಹಲವು ಅಸ್ಪಷ್ಟ ಪ್ರಶ್ನೆಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತದೆ. ಈ ಹಂತದಲ್ಲಿ ಪ್ರೇಕ್ಷಕನ ತಲೆಗೆ ಹುಳ ಹೊಕ್ಕ ಅನುಭವ. ಆದರೆ, ನಿರ್ದೇಶಕರು ಮುಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಪ್ರೇಕ್ಷಕನನ್ನು ಸಮಾಧಾನಪಡಿಸಿ ಕಳುಹಿಸುತ್ತಾರೆ. ಆ ಮಟ್ಟಿಗೆ “ಕದ್ದ ಚಿತ್ರ’ ಒಂದೊಳ್ಳೆಯ ಪ್ರಯತ್ನ.
ಇಡೀ ಸಿನಿಮಾದ ಕಥೆ ನಿಂತಿರೋದು ದ್ವಿತೀಯಾರ್ಧದಲ್ಲಿ. ಇಲ್ಲಿ ಸಿನಿಮಾದ ಹಲವು ಆಯಾಮಗಳು ತೆರೆದುಕೊಳ್ಳುತ್ತಾ ಪ್ರೇಕ್ಷಕನ ಕುತೂಹಲಕ್ಕೆ ಉತ್ತರ ಸಿಗುತ್ತಾ ಹೋಗುತ್ತದೆ. ಕೆಲವೇ ಕೆಲವು ಪಾತ್ರಗಳ ಮೂಲಕ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವುದು ವಿಜಯ ರಾಘವೇಂದ್ರ. ಖುಷಿ, ದುಃಖ, ವೇದನೆ, ಸಿಟ್ಟು, ಪಶ್ಚಾತ್ತಾಪ.. ಹೀಗೆ ನಾನಾ ಭಾವನೆಗಳನ್ನು ಹೊತ್ತು ಸಾಗುವ ಪಾತ್ರದಲ್ಲಿ ವಿಜಯ ರಾಘವೇಂದ್ರ ಗಮನ ಸೆಳೆಯುತ್ತಾರೆ. ಉಳಿದಂತೆ ಚಿತ್ರದ ಸಂಗೀತ, ಛಾಯಾಗ್ರಹಣ ಕಥೆಯ ಆಶಯಕ್ಕೆ ತಕ್ಕುದಾಗಿದೆ.
ರವಿ ರೈ