ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠಿ ಜಾತ್ರೆಯ ಧ್ವಜಾವರೋಹಣದ ವೇಳೆ ಧ್ವಜಸ್ತಂಭದ ರಾಟೆ ಕಳಚಿ ಅದರೊಂದಿಗೆ ಗರುಡ, ಕಿರುಗಂಟೆ ಕೆಳಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.
ಘಟನೆಯಿಂದ ಭಕ್ತರು ಆತಂಕಿತ ರಾಗಿದ್ದು, ಕೂಡಲೇ ದೇವರಿಗೆ 48 ಕಲಶ ಅಭಿಷೇಕ ಸಹಿತ ಪ್ರಾಯಶ್ಚಿತ್ತ ವಿಧಿಗಳನ್ನು ನೆರವೇರಿಸಲಾಯಿತು.
ಡಿ. 13ರಂದು ಧ್ವಜಾರೋಹಣದ ವೇಳೆ ಹಗ್ಗದ ಗಂಟು ರಾಟೆಯ ಎಡೆಗೆ ಸಿಲುಕಿಕೊಂಡದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಅವರೋಹಣದ ವೇಳೆ ಸೂಕ್ಷ್ಮವಾಗಿ ಗಮನಿಸಿ ಸಾಧ್ಯವಾದಷ್ಟು ಮಟ್ಟಿಗೆ ಆ ಗಂಟನ್ನು ತಪ್ಪಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಈ ಘಟನೆ ನಡೆಯಿತು ಎನ್ನಲಾಗಿದೆ.
ಈ ಬಾರಿಯ ಷಷ್ಠಿ ಉತ್ಸವ ಸಂದರ್ಭ ಕ್ಷೇತ್ರದ ಧೂಮಾವತಿ ದೈವವು “ಬ್ರಹ್ಮಕಲಶವಾಗದೆ 19 ವರ್ಷಗಳೇ ಸಂದಿವೆ; ಅದಕ್ಕಾಗಿ ಯೋಜನೆ ಹಾಕಿಕೊಳ್ಳಿ’ ಎಂದು ಸೂಚಿಸಿತ್ತೆಂದೂ ನನೆಗುದಿಗೆ ಬಿದ್ದಿರುವ ಬ್ರಹ್ಮಕಲಶಾಭಿಷೇಕದ ಬಗ್ಗೆ ಎಲ್ಲರನ್ನೂ ಒಗ್ಗೂಡಿಸಿ ಸೂಕ್ತ ಕ್ರಮಗಳೊಂದಿಗೆ ಮುಂದಡಿ ಇಡಲಾಗುವುದು ಎಂದೂ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.