Advertisement

ಮುಳಿ ಹುಲ್ಲಿನ ಜೋಪಡಿಯಲ್ಲಿ ಆರಂಭಗೊಂಡ ಕಡಂದಲೆ ಹಿ.ಪ್ರಾ. ಶಾಲೆಗೆ 123 ವರ್ಷ

11:40 PM Nov 17, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಮೂಡುಬಿದಿರೆ: ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ, ಕೇಮಾರು ಈಶ ವಿಟಲದಾಸ ಸ್ವಾಮೀಜಿಯವರು ಕಲಿತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಂದಲೆ ಮೈನ್‌ಗೆ 123 ವರ್ಷ ತುಂಬಿದೆ.

ಇದು “ಬೊಳಂತೆ ಶಾಲೆ ‘ ಎಂದೇ ಪರಿಚಿತ. 1896ರಲ್ಲಿ ಮರದ ಕಂಬಗಳ ಮೇಲೆ ಮುಳಿಹುಲ್ಲಿನ ಸೂರು ಹೊದೆಸಿಕೊಂಡ ಜೋಪಡಿಯಲ್ಲಿ ಸುಮಾರು 20-25 ಮಂದಿ ಮಕ್ಕಳೊಂದಿಗೆ ಪ್ರಾರಂಭವಾದ ಈ ಶಾಲೆಯ ಸ್ಥಾಪಕರು ಮತ್ತು ಪ್ರಥಮ ಮುಖ್ಯೋಪಾಧ್ಯಾಯರು ಉಳ್ಳನಡ್ಕ ಓಮಯ್ಯ ಶೆಟ್ಟಿ. ಆಗ, ಸಚ್ಚೇರಿಪೇಟೆಯ ಪೊಸ್ರಾಲು, ಬೋಳ, ಪಾಲಡ್ಕ, ಕೇಮಾರು, ಮದಕ, ವರ್ಣಬೆಟ್ಟು, ಕಾಂತಾವರ, ಪುತ್ತಿಗೆ, ಕಲ್ಲಮುಂಡ್ಕೂರು ಮೊದಲಾದ ಪ್ರದೇಶಗಳಲ್ಲಿ ಪ್ರಾಥಮಿಕ ಶಾಲೆಗಳೇ ಇರದ ಕಾಲದಲ್ಲಿ ಖಾಸಗಿ ಪ್ರಯತ್ನದಿಂದ ಈ ಶಾಲೆ ತೆರೆದುಕೊಂಡಿತ್ತು.

1971ರಲ್ಲಿ ಮಾದರಿ ಶಾಲೆ
2 ವರ್ಷಗಳಲ್ಲಿಯೇ ಶಾಲೆಯ ಪ್ರಗತಿ ಕಂಡು ಆಗಿನ ಕಾರ್ಕಳ ತಾಲೂಕು ಬೋರ್ಡ್‌, ಮುಂದೆ ಜಿಲ್ಲಾ ಬೋರ್ಡ್‌ ಈ ಶಾಲೆಯನ್ನು ವಹಿಸಿಕೊಂಡಿತು. ಪಟೇಲರಾಗಿದ್ದ ಕಡಂದಲೆಗುತ್ತು ದಿ| ದೇಜು ಶೆಟ್ಟಿ ಅವರು ಮಟ್ಟಾಕಾರದ ಹಳೆಯ ಕಟ್ಟಡವನ್ನು ಹಂತಹಂತವಾಗಿ ರಚಿಸಿಕೊಟ್ಟರು. 1930ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ವಿಸ್ತರಣೆಯಾದಾಗ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾತ್ಕಾಲಿಕವಾಗಿ ನೆಲೆಗೊಂಡದ್ದಿದೆ. 1934ರಲ್ಲಿ ಖಾಯಂ ಮಂಜೂರಾತಿ ಲಭಿಸಿತು. 8ನೇ ತರಗತಿ ವರೆಗಿನ ಶಿಕ್ಷಣವಿದ್ದು, 1971ರಲ್ಲಿ ಮಾದರಿ ಹಿ.ಪ್ರಾ. ಶಾಲೆಯಾಯಿತು.

8ನೇ ತರಗತಿಗೆ ಪಬ್ಲಿಕ್‌ (ಇಎಸ್‌ಎಲ್‌ಸಿ)ಪರೀಕ್ಷೆವಿದ್ದಾಗ ನಿರಂತರವಾಗಿ ನಾಲ್ಕಾರು ವರ್ಷ ಶೇ. 100 ಫಲಿತಾಂಶ ಬಂದ ಹೆಗ್ಗಳಿಕೆ ಈ ಶಾಲೆಗಿದೆ.

Advertisement

ಸುಸಜ್ಜಿತ ಸೌಲಭ್ಯಗಳು
ಕಡಂದಲೆ ಶೀನ ಶೆಟ್ಟಿ ದಾನವಾಗಿತ್ತ ಜಾಗದಲ್ಲಿ ದಿ| ಸಂಜೀವ ಶೆಟ್ಟಿ ಅವರ ಪುತ್ರ ಡಾ| ಕೆ. ರವೀಂದ್ರ ಶೆಟ್ಟಿ ರಂಗಮಂಟಪ ನಿರ್ಮಿಸಿಕೊಟ್ಟಿದ್ದಾರೆ. ಕಡಂದಲೆಗುತ್ತು ದೇಜು ಶೆಟ್ಟಿ ದಾನವಾಗಿತ್ತ 34 ಸೆಂಟ್ಸ್‌ ಸೇರಿದಂತೆ ಈಗ 1.50 ಎಕ್ರೆಯಷ್ಟು ಜಾಗ ಶಾಲೆಯ ಹೆಸರಿನಲ್ಲಿದೆ. 1955ರಲ್ಲಿ ಸಂಜೀವ ಶೆಟ್ಟಿ ಅವರ ಪ್ರಯತ್ನ, ರಾಷ್ಟ್ರೀಯ ವಿಸ್ತರಣ ಯೋಜನೆಯ ಸಹಕಾರದಿಂದ 3 ಕೊಠಡಿಗಳು ನಿರ್ಮಾಣಗೊಂಡವು. 1979ರಿಂದ ಸುಮಾರು 20 ವರ್ಷ ಬಾಲವಾಡಿ ಇದೇ ಆವರಣದಲ್ಲಿತ್ತು. ಆವರಣ ಗೋಡೆ, ಕುಡಿಯುವ ನೀರು, ಶೌಚಾಲಯ, ಅಕ್ಷರ ದಾಸೋಹ ಕೊಠಡಿ ಸಹಿತ ಮೂಲಅವಶ್ಯಕತೆಗಳಿಲ್ಲಿವೆ. ಹೂದೋಟ, ತರಕಾರಿ ಬೆಳೆಸಲಾಗುತ್ತಿದೆ. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಕೆ. ಅಮರನಾಥ ಶೆಟ್ಟಿ, ಅಧ್ಯಕ್ಷರಾಗಿ ಕಡಂದಲೆಗುತ್ತು ಸುದರ್ಶನ ಶೆಟ್ಟಿ ಕಾರ್ಯನಿರ್ವಹಿಸಿದ್ದರು. ಜಿ.ಪಂ. ಸುಚರಿತ ಶೆಟ್ಟಿ ಈ ವರ್ಷ ಶಾಲಾಭಿವೃದ್ಧಿಗಾಗಿ ರೂ. 3.50 ಲಕ್ಷ ಅನುದಾನ ಮೀಸಲಿರಿಸಿದ್ದಾರೆ.

ಮುಖ್ಯ ಶಿಕ್ಷಕರು
ಮಹಾಲಿಂಗ ಶೆಟ್ಟಿ, 1946ರಿಂದ ನಿಡ್ಡೋಡಿ ಶ್ಯಾಮರಾಯ ಶೆಟ್ಟಿ, ನಾರಾಯಣ ಶೆಟ್ಟಿ ನಲ್ಲೆಗುತ್ತು,ದೇವೇಂದ್ರ ನಾಯ್ಕ, ಪುಂಡಲೀಕ ಮಲ್ಯ, ಭಾಸ್ಕರ ಶೆಟ್ಟಿ, ವಿನಾಯಕ ಶೆಣೈ, ಉಳ್ಳನಡ್ಕ ರಾಮಕೃಷ್ಣ ಶೆಟ್ಟಿ , ಚಂದಪ್ಪ , ಸಕೀನಾ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ 3 ವರ್ಷಗಳಿಂದ ಲಿಡಿಯಾ ಸೆರಾವೋ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಶಾಲೆಯ ಮಕ್ಕಳ ಸಂಖ್ಯೆ ಈಗ 37.

ಸಾಧಕ ಹಳೆ ವಿದ್ಯಾರ್ಥಿಗಳು
ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ, ಕೇಮಾರು ಈಶ ವಿಟuಲದಾಸ ಸ್ವಾಮೀಜಿ, ಕೃಷ್ಣ ಭಟ್‌, ಸಾಹಿತಿ ದಿ| ಕೆ.ಜೆ. ಶೆಟ್ಟಿ, ಕಡಂದಲೆ ಸುಬ್ರಹ್ಮಣ್ಯ ದೇವಳದ ಅರ್ಚಕ ಕೆ.ವಿ. ಕೃಷ್ಣಭಟ್‌, ಮಹಾರಾಷ್ಟ್ರ ಹೈಕೋರ್ಟ್‌ ವಕೀಲ, ಎನ್‌ಐಎ (ರಾಷ್ಟ್ರೀಯ ತನಿಖಾ ದಳ)ದ ಕಾನೂನು ಸಲಹೆಗಾರ ಕೆ.ಪಿ. ಪ್ರಕಾಶ್‌ ಎಲ್‌. ಶೆಟ್ಟಿ, ವಿದೇಶೀ ಕಂಪೆನಿಯಲ್ಲಿ ಪ್ರಮುಖ ಹುದ್ದೆ ಗೇರಿದ ಎಸ್‌. ಎಂ. ಜಯರಾಮ್‌, ಹೃದ್ರೋಗ ತಜ್ಞ ಡಾ| ಪ್ರವೀಣ್‌ ಶೆಟ್ಟಿ, ಉದ್ಯಮಿ ಜೆ.ಎನ್‌. ಶೆಟ್ಟಿ, ಕೆ. ಪ್ರಭಾಕರ ಎಲ್‌. ಶೆಟ್ಟಿ, ವಿಜಯಾ ಬ್ಯಾಂಕ್‌ ಅಧಿಕಾರಿ ಬಲ್ಲಾಡಿ ಸಾಗುಮನೆ ಕಿಶೋರ್‌ ಶೆಟ್ಟಿ, ಮೋಹನ್‌ ಶೆಟ್ಟಿ, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ ಶಾಲೆಯ ಹಳೆ ವಿದ್ಯಾರ್ಥಿಗಳು.

ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರಣೆ ನೀಡಲಾಗುತ್ತಿದೆ. ಎಲ್ಲರಸಹಕಾರದಿಂದ ಈ ಶಾಲೆ ಅಭಿವೃದ್ಧಿ ಹೊಂದುವಂತಾಗಲಿ.
-ಲಿಡಿಯಾ ಸೆರಾವೋ,
ಪ್ರಭಾರ ಮುಖ್ಯಶಿಕ್ಷಕಿ.

1942ರ ಕಾಲದ ಹಳೆ ವಿದ್ಯಾರ್ಥಿ ಯಾಗಿದ್ದೆ. ಆಗ 8ನೇ ತರಗತಿಯ ಪಬ್ಲಿಕ್‌ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಬಂದಿತ್ತು. ಶಿಸ್ತು, ಸರಳತೆಗಳ ಪ್ರತಿರೂಪವಾಗಿದ್ದ ಗುರುಗಳ ಬಗ್ಗೆ ನಮಗೆ ಈಗಲೂ ಗೌರವಭಾವ ಇದೆ. ನಮ್ಮಂಥವರ ಸಾಧನೆಗೆ ಈ ಶಾಲೆಯಲ್ಲಿ ಲಭಿಸಿದ ಶಿಕ್ಷಣವೇ ಮೂಲ ಕಾರಣ.
-ಕೆ.ಪಿ. ಆನಂದ ಶೆಟ್ಟಿ, ಹಳೆ ವಿದ್ಯಾರ್ಥಿ.

 -ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next