Advertisement

Kadalekai Parishe: ಕಡಲೆಕಾಯಿ.. ಹಸಿ ಬಿಸಿ ಕಡಲೆಕಾಯಿ..

09:30 AM Dec 03, 2023 | Team Udayavani |

ಬೆಂಗಳೂರು: ಅಮ್ಮಾ, ಅಕ್ಕ ಬನ್ನಿ ಕಡಲೆಕಾಯಿ ತೆಗೆದುಕೊಳ್ಳಿ, ಸುಟ್ಟಿರೋದು ಬೇಕಾ, ಬೇಯಿಸಿರೋದು ಬೇಕಾ ಅಥವಾ ಹಸಿ ಕಾಯಿ ಬೇಕಾ…ಹೀಗೆ ಜನರನ್ನು ಕೂಗಿ ಕರೆಯುತ್ತಿದ್ದ ದೃಶ್ಯ ಕಂಡು ಬಂದದ್ದು ನಗರದ ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯದ ಮುಂಭಾಗ.

Advertisement

ಕರ್ನಾಟಕ ಮಾತ್ರವಲ್ಲದೇ, ನೆರೆ ರಾಜ್ಯಗಳ ರೈತರು ತಂದಿದ್ದ ತರಹೇವಾರಿ ಕಡಲೆಕಾಯಿಗಳ ರಾಶಿ ಪರಿಷೆಯ ಉದ್ದಗಲಕ್ಕೂ ಹರಡಿಕೊಂಡಿದ್ದು, ಬೇಯಿಸಿದ ಶೇಂಗಾದ ಘಮ ಎಲ್ಲೆಡೆ ಆವರಿಸಿತ್ತು. ಜೊತೆಗೆ ಅಲೆಮಾರಿ ಜನರು ತಯಾರಿಸಿದ್ದ ಬಾಗಿಲ ತೋರಣ, ರಾಧಾ-ಕೃಷ್ಣ, ಬುದ್ಧ, ಸರಸ್ವತಿ, ಶಿವಾಜಿ, ಆನೆ.. ಮುಂತಾದ ಪಿಂಗಾಣಿ ಆಕೃತಿಗಳು, ಗೃಹಾ ಲಂಕಾರಿಕ ವಸ್ತುಗಳು, ಕುಂಬಾರಿಕೆ ವಸ್ತುಗಳು, ಆಟೋಪಕರಣಗಳು, ಕಡ್ಲೆಪುರಿ, ಬತ್ತಾಸು, ಕುರುಕಲ ತಿಂಡಿಗಳು ಕಾಡುಮಲ್ಲೇಶ್ವರ ಗೆಳೆಯರ ಬಳಗ ಹಮ್ಮಿಕೊಂಡಿರುವ ಈ ಕಡಲೆಕಾಯಿ ಪರಿಷೆಯ ಸಂಭ್ರಮವನ್ನು ಹೆಚ್ಚಿಸಿವೆ.

ಕಾಡುಮಲ್ಲೇಶರಂ ಆವರಣದಲ್ಲಿರುವ ಗಂಗಮ್ಮ, ನರಸಿಂಹ ಸ್ವಾಮಿ, ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ದೇವಾಲಯ ಸನ್ನಿಧಿಯನ್ನು ಕಡಲೆಕಾಯಿ, ಹೂವು, ತೋರಣಗಳಿಂದ ಸಿಂಗರಿ ಸಿದ್ದು, ಪರಿಷೆಗೆ ಬಂದಿದ್ದ ಜನರನ್ನು ಆಕರ್ಷಿಸುತ್ತಿದೆ. ಸ್ಥಳದಲ್ಲಿಯೇ ಕಡಲೆಕಾಯಿಯನ್ನು ಉರಿದು ಬೇಯಿಸಿಕೊಡುವ ವ್ಯವಸ್ಥೆ ಮಾಡಲಾಗಿದ್ದು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ನೂರಾರು ರೈತರು ತಾವು ಬೆಳೆದ ಕಡಲೆಕಾಯಿಯನ್ನು ಪರಿಷೆಗೆ ತಂದಿದ್ದಾರೆ.

ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ, ನೇರ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಬೀದಿಬದಿ ವ್ಯಾಪಾರಿಗಳೂ ಇಲ್ಲಿ ಅವಕಾಶ ನೀಡಲಾಗಿದೆ. 300 ಮಳಿಗೆಗಳನ್ನು ತೆರೆಯಲಾಗಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧ ಕುರಿತು ಜಾಗೃತಿ: ಪಾಸ್ಟಿಕ್‌ ಬಳಕೆ ನಿಷೇಧಿಸಿ, ಪರಿಸರ ಉಳಿಸಿ ಎಂಬ ಧ್ಯೇಯದಿಂದ ಭರವಸೆ ಎಂಬ ಸರ್ಕಾರೇತರ ಸಂಸ್ಥೆ ಜತೆಗೆ ನಿಟ್ಟೆ, ಎನ್‌ಇಎಸ್‌ ಕಾಲೇ ಜಿನ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸೇರಿಕೊಂಡು, ಪ್ಲಾಸ್ಟಿಕ್‌ ನಿಷೇಧದ ಸ್ಲೋಗನ್‌ಗಳ ಫ‌ಲಕ ಹಿಡಿದು, ಲಕ್ಷಾಂತರ ಜನ ಆಗಮಿಸುವ ಕಡಲೆಕಾಯಿ ಪರಿಷೆಯ ಬೀದಿಯಲ್ಲಿ ಜಾಗೃತಿ ಮೂಡಿ ಸಿದರು.

Advertisement

ಪರಿಷೆಗೆ ಬರುವ ಜನರ ಕೈಯಲ್ಲಿರುವ ಪ್ಲಾಸ್ಟಿಕ್‌ ಕವರ್‌ ಅನ್ನು ತೆಗೆದುಕೊಂಡು, ಅವರಿಗೆ ಬಟ್ಟೆ ಚೀಲವನ್ನು ಉಚಿತವಾಗಿ ಕೊಡಲಾಗುತ್ತದೆ ಎಂದು ಭರವಸೆಯ ಸುನೀಲ್‌ ಹೇಳಿದರು.

800 ಕೆ.ಜಿ. ಕಡಲೆಕಾಯಿಗಳಿಂದ ಸಿಂಗಾರಗೊಂಡ ನಂದಿ ವಿಗ್ರಹ:  ‌ಗಂಗಮ್ಮ ದೇವಸ್ಥಾನದ ಆವರಣದಲ್ಲಿ 20 ಅಡಿ ಉದ್ದ ಮತ್ತು 20 ಅಡಿ ಅಗಲದ ನಂದಿ(ಬಸವಣ್ಣ)ಯನ್ನು 800 ಕೆ.ಜಿ. ಕಡಲೆಕಾಯಿಯಿಂದ ಅಲಂಕರಿಸಲಾಗಿದೆ. ಇದನ್ನು 10ರಿಂದ 15 ಜನ ಕಲಾವಿದರ ತಂಡ ವಾರದಿಂದ ಅಲಂಕರಿಸಿದೆ. ಥರ್ಮಕೋಲಿನಿಂದ ಬೃಹತ್‌ ನಂದಿಯನ್ನು ತಯಾರಿಸಿ, ನಂತರ ಗಟ್ಟಿ ಹಾಗೂ ಉತ್ತಮವಾಗಿರುವ 800 ಕೆ.ಜಿ. ಶೇಂಗಾ ಕಾಯಿಗಳನ್ನು ಅದಕ್ಕೆ ಅಂಟಿಸುವ ಮೂಲಕ ಶೃಂಗಾರಿಸಲಾಗಿದೆ. ವಿದ್ಯಾರ್ಥಿಗಳು ಈ ನಂದಿ ಮುಂದೆ ನಿಂತು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ, ಕುಟುಂಬ ಸಮೇತ ಬಂದಿದ್ದವರು ಗ್ರೂಪ್‌ ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದರು.

ನಾಲ್ಕೈದು ವರ್ಷಗಳಿಂದ ಕಡಲೆಕಾಯಿ ಪರಿಷೆಗೆ ತಮಿಳುನಾಡಿನ ಧರ್ಮಪುರಿ ಯಿಂದ ಬರುತ್ತಿದ್ದೇವೆ. ನಮ್ಮಲ್ಲಿ ಸುಟ್ಟಿರುವ, ಬೇಯಿಸಿರುವ ಹಾಗೂ ಹಸಿ ಕಡಲೆ ಕಾಯಿ ಮತ್ತು ಮೂರೂಂಡೆ ಕಾಯಿಯೂ ಸಿಗಲಿದೆ. ಕೆಲವರು ಸುಟ್ಟಿರುವ ಕಾಯಿ ತೆಗೆದು ಕೊಂಡರೆ, ಹಲವರು ಹಸಿ ಕಾಯಿಯನ್ನು ಖರೀದಿಸುತ್ತಾರೆ. ವ್ಯಾಪಾರವೂ ಚೆನ್ನಾಗಿದೆ. ರಾಜೇಶ್ವರಿ, ಕಡಲೆಕಾಯಿ ವ್ಯಾಪಾರಿ.

Advertisement

Udayavani is now on Telegram. Click here to join our channel and stay updated with the latest news.

Next