Advertisement
ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಸೋಮವಾರ (ಡಿ.11) ದಿಂದ ಅಧಿಕೃತವಾಗಿ ಆರಂಭವಾಗಲಿದ್ದು, ರಜಾ ದಿನವಾದ ಭಾನುವಾರವೇ ಸಾವಿರಾರು ಸಂಖ್ಯೆಯಲ್ಲಿ ಜನ ಪರಿಷೆಗೆ ಬಂದಿದ್ದರು. ವಿದ್ಯಾರ್ಥಿಗಳು, ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದು ವಿಶೇಷವಾಗಿತ್ತು. ಕಡಲೆಕಾಯಿ ಪರಿಷೆ ಆರಂಭವಾಗುವ ಒಂದು ದಿನ ಮೊದಲೇ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಷೆಯ ಸಂಭ್ರಮ ಮೇಳೈಸಿದ್ದು, ಕಾಂಕ್ರೀಟ್ ಕಾಡಿನಲ್ಲಿ ಹಳ್ಳಿಯ ಸೊಗಡು ಗರಿಬಿಚ್ಚಿಕೊಂಡಿದೆ.
Related Articles
Advertisement
ಜೊತೆಗೆ ಕೈ ಚೀಲ ತನ್ನಿ : ಈ ಬಾರಿ ಪರಿಷೆಯ ಘೋಷವಾಕ್ಯ “ಪರಿಷೆಗೆ ಬನ್ನಿ , ಕೈ ಚೀಲ ತನ್ನಿ’ ಎಂಬುದಾಗಿದೆ. ಪ್ಲಾಸ್ಟಿಕ್ ನಿಯಂತ್ರಿಸುವ ಸಲುವಾಗಿ ಬಟ್ಟೆ ಬ್ಯಾಗ್ ಬಳಕೆ ಮಾಡಿ ಎಂದು ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಈ ಹಿಂದಿನ ಪರಿಷೆಗಳಲ್ಲಿ 2.5 ಲಕ್ಷ ಪ್ಲಾಸ್ಟಿಕ್ ಬ್ಯಾಗ್‌ಗಳು ಸೇಲ್ ಆಗುತ್ತಿದ್ದವು. ಈಗ ಕಡಿಮೆ ಆಗಿದೆ. ಕೆಲವು ಜಾತ್ರೆಗಳಲ್ಲಿ ಹತ್ತರಿಂದ ಇಪ್ಪತ್ತು ಲಕ್ಷ ಜನರು ಸೇರುತ್ತಾರೆ. ಅಲ್ಲಿ ಕೂಡ ಬಟ್ಟೆ ಕೈ ಚೀಲ ಬಳಕೆ ಮಾಡಲಿ ಎಂಬುವುದು ಕೂಡ ಈ ಘೋಷ ಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕಡಲೆಕಾಯಿ ಪರಿಷೆ ಯಶಸ್ಸಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 7 ಲಕ್ಷ ಜನ ಸೇರುವ ಸಾಧ್ಯತೆಯಿದೆ. ಪ್ರತಿ ಪಾಳಿಯಲ್ಲಿ 500 ಪೊಲೀಸರು ಭದ್ರತೆಗೆ ನೋಡಿಕೊಳ್ಳಲಿದ್ದಾರೆ. ಜತೆಗೆ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ನೇರ ದರ್ಶನದ ಅವಕಾಶ ಒದಗಿಸಲಾಗಿದೆ ಎಂದು ವಿವರಿಸಿದರು.
ಶಬ್ದಮಾಲಿನ್ಯ ಮಾಡದಂತೆ ಮನವಿ: ಪರಿಷೆ ನಡೆಯುವ ಸುತ್ತಮುತ್ತ ಆಸ್ಪತ್ರೆಗಳು ಇರುವ ಹಿನ್ನೆಲೆಯಲ್ಲಿ ಶಬ್ದಮಾಲಿನ್ಯ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ವಿಶೇಷವಾಗಿ ಸಂಜೆ ವೇಳೆ ಸ್ವಲ್ಪ ಗೊಂದಲ ಉಂಟಾಗುತ್ತದೆ. ಇದರಿಂದ ಸ್ಥಳೀಯರೂ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ಅದನ್ನು ತಪ್ಪಿಸಲು ಪ್ರಯತ್ನಿಸುತ್ತೇವೆ. ಕಳೆದ ವರ್ಷ ಕೂಡ ಶಬ್ದಮಾಲಿನ್ಯದ ಬಗ್ಗೆ ಬೆಳಕು ಚೆಲ್ಲವಾಗಿತ್ತು. ಈ ವರ್ಷ ಮಾಲಿನ್ಯ ಮಾಡದಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೂಲಕ ಮನವಿ ಮಾಡಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪರಿಷೆಗೆ ಪೊಲೀಸ್ ಬಂದೋಬಸ್ತ್ : ಐತಿಹಾಸಿಕ ಬಸವನಗುಡಿ ಕಡ್ಲೆಕಾಯಿ ಪರಿಷೆ ಸುಸೂತ್ರವಾಗಿ ನಡೆಯಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಸಜ್ಜಾಗಿದ್ದಾರೆ. ಸಂಚಾರ ದಟ್ಟಣೆ ಆಗದಂತೆ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಪರಿಷೆ ಹಿನ್ನೆಲೆಯಲ್ಲಿ ಹಲವು ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿದೆ. ಆಯಾ ಕಟ್ಟಿನ ಪ್ರದೇಶದಲ್ಲಿ 200ಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಕಡ್ಲೆಕಾಯಿ ಜತೆಗೆ “ಬೆಲ್ಲದ ಪರಿಷೆ’ : ಪ್ರತಿ ವರ್ಷ ಕೇವಲ ಕಡಲೆಕಾಯಿ ಪರಿಷೆ ನಡೆಯುತ್ತಿತ್ತು. ಆದರೆ, ಈ ಬಾರಿ ಬೆಲ್ಲದ ಪರಿಷೆ ಆಯೋಜಿಸಲಾಗಿದೆ. ದೊಡ್ಡಗಣಪತಿ ದೇವಸ್ಥಾನದ ಬಳಿ ಕೃಷಿ ಇಲಾಖೆ ಮಂಡ್ಯ ವಿಭಾಗವು ಮಳಿಗೆ ತೆರೆದಿದ್ದು, ನಗರದ ಜನರ ಗಮನ ಸೆಳೆಯುತ್ತಿದೆ. ಅಲ್ಲಿ ಮಂಡ್ಯದ ರೈತರು ವಿವಿಧ ಬಗೆಯ ಬೆಲ್ಲದ ಅಚ್ಚುಗಳನ್ನು ಮಾರಾಟಕ್ಕೆ ಇರಿಸಿದ್ದಾರೆ. ಜನರು ನೇರ ರೈತರಿಂದಲೇ ಉತ್ತಮ ಬೆಲ್ಲ ಖರೀದಿಸಬಹುದು ಎಂದು ಬಸವನಗುಡಿಯ ದೊಡ್ಡಗಣಪತಿ ಮತ್ತು ಸಮೂಹ ದೇಗುಲಗಳ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಬಾಬು ಹೇಳಿದರು. 10 ರೈತರು ವಿಭಿನ್ನ ರೀತಿಯ ಅಚ್ಚು ಬೆಲ್ಲ ಮಾರಾಟಕ್ಕೆ ಇರಿಸಿದ್ದಾರೆ. “ಕುರಿಕಾಲು ಅಚ್ಚು, ಕ್ಯೂಬ್, ಕುಲ್ಫಿ ಬೆಲ್ಲ, ಬಕೆಟ್ ಬೆಲ್ಲ, ಗರಿ ಅಚ್ಚು ಹೀಗೆ 20ಕ್ಕೂ ಹೆಚ್ಚು ಬಗೆಯ ಬೆಲ್ಲ ಇಲ್ಲಿ ಲಭ್ಯ. ಕೆಜಿ ಬೆಲ್ಲದ ಬೆಲೆ 80 ರೂ.ನಿಂದ 120 ರೂ. ವರೆಗೂ ಇದೆ. ಜನರು ಕೂಡ ಬೆಲ್ಲದ ಅಚ್ಚು, ಉಪಯೋಗದ ಬಗ್ಗೆ ಮಾಹಿತಿ ಪಡೆದು ಖರೀದಿ ಮಾಡುತ್ತಿದ್ದಾರೆ ಎಂದು ಮಂಡ್ಯದ ರೈತ ವೆಂಕಟೇಶ್ ಮಾಹಿತಿ ನೀಡಿದರು.
ಮಂಡ್ಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಅವರ ಕಲ್ಪನೆ ಇದರ ಹಿಂದಿದೆ. ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ “ಬೆಲ್ಲದ ಪರಿಷೆ”ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅಲೆಮನೆ ಮಾಲೀಕ ಸೋಮಶೇಖರ್ ಮಾಹಿತಿ ನೀಡಿದರು.
ಬಿಳಿ ಬೆಲ್ಲದ ಅಚ್ಚು ಆರೋಗ್ಯಕ್ಕೆ ಒಳ್ಳೆಯದಲ್ಲ: ರಾಸಾಯನಿಕಗಳನ್ನು ಉಪಯೋಗಿಸಿ ತಯಾರಿಸುವ ಬಿಳಿಬೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಜನರು ಕಪ್ಪು ಅಚ್ಚಿನ ಬೆಲ್ಲ ಖರೀದಿಸಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಕಡಲೆಕಾಯಿ ಪರಿಷೆಯಲ್ಲಿ ಬೆಲ್ಲದ ಮಾರಾಟ ನಡೆಯುತ್ತಿರುವುದು ಹೊಸ ಪ್ರಯೋಗವಾಗಿದೆ. ಕಬ್ಬು ಬೆಳೆಗಾರರಿಗೆ ಇದು ಖುಷಿ ಕೊಟ್ಟಿದೆ ಎಂದು ಹೇಳಿದರು.
ಕಡಲೆಕಾಯಿ ಪರಿಷೆ ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆ ಮಾಡಲು ಈ ಸಲ “ಪರಿಷೆಗೆ ಬನ್ನಿ ಕೈ ಚೀಲ ತನ್ನಿ’ ಎಂಬ ಘೋಷವಾಕ್ಯದಡಿ ಅರಿವು ಮೂಡಿಸಲಾಗುತ್ತಿದೆ. ಬಿಎಂಟಿಸಿ ಬಸ್ ಸೇರಿ ಹಲವು ಕಡೆಗಳಲ್ಲಿ ಅರಿವು ಮೂಡಿಸಲಾಗಿದೆ. – ಎಚ್.ಬಸವರಾಜೇಂದ್ರ, ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ.
ಸೋಮವಾರ ತರಗತಿ ಇರುವುದರಿಂದ ಪರಿಷೆಗೆ ಬರಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಗೆಳೆತಿಯರ ಜನತೆ ಭಾನುವಾರೇ ಪರಿಷೆ ಆಗಮಿಸಿ ಇಲ್ಲಿನ ಸಂಭ್ರಮ ಸವಿಯುತ್ತಿದ್ದೇನೆ. –ಸೋನಾಲಿ, ವಿದ್ಯಾರ್ಥಿ, ಬಿಎಂಎಸ್ ಮಹಿಳಾ ಕಾಲೇಜು.
–ದೇವೇಶ ಸೂರಗುಪ್ಪ