ಚೆನ್ನೈ: ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದ ಹಿರಿಯ ನಟಿ ಕಾಸಿಯಮ್ಮಾಳ್(74) ಅವರು ಮಗನಿಂದಲೇ ಹಲ್ಲೆಗೊಳಗಾಗಿ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಫೆ.3 ರ ಮುಂಜಾನೆ 3 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಯಾರಿದು ಈ ಕಾಸಿಯಮ್ಮಾಳ್?: ʼಕಾಕ ಮೂಟೈʼ ಸಿನಿಮಾದಿಂದ ಗಮನ ಸೆಳೆದ ಮಣಿಕಂಠನ್ ನಿರ್ದೇಶನದ ʼ ಕಡೈಸಿ ವಿವಾಸಾಯಿʼ ಸಿನಿಮಾದಲ್ಲಿ ವಿಜಯ್ ಸೇತುಪತಿ ಅವರ ಪೋಷಕ ಪಾತ್ರದಲ್ಲಿ ಕಾಸಿಯಮ್ಮಾಳ್ ನಟಿಸಿ ಜನಪ್ರಿಯರಾಗಿದ್ದರು. ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ತನ್ನ ಪತ್ನಿಯಿಂದ ದೂರವಾಗಿರುವ ಕಾಸಿಯಮ್ಮಾಳ್ ಅವರ ಮಗ ನಮ್ಮಕೋಡಿ (51) ಕುಡಿತದ ಚಟವನ್ನು ಹೊಂದಿದ್ದ. ಆಗಾಗ ತಾಯಿಯೊಂದಿಗೆ ಜಗಳ ನಡೆಯುತ್ತಿತ್ತು. ಫೆ. 3 ರಂದು ಮದ್ಯ ಸೇವಿಸಲು ಹಣ ನೀಡಿ ಎಂದು ತಾಯಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಇದಕ್ಕೆ ತಾಯಿ ನಿರಾಕರಿಸಿದ ಕಾರಣ ನಮ್ಮಕೋಡಿ ಮರದ ತುಂಡಿನಿಂದ ತೀವ್ರವಾಗಿ ಹಲ್ಲೆಗೈದಿದ್ದಾನೆ. ಪರಿಣಾಮ ಕಾಸಿಯಮ್ಮಾಳ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಆರೋಪದ ಮೇಲೆ ನಮ್ಮಕೋಡಿಯನ್ನು ಬಂಧಿಸಿದ್ದಾರೆ. ಕೃತ್ಯವೆಸಗಿದ ಮರದ ತುಂಡನ್ನು ವಶಪಡಿಸಿಕೊಂಡಿದ್ದಾರೆ.
ರೈತರ ಬದುಕಿನ ಕಥೆಯನ್ನೊಳಗೊಂಡಿರುವ ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. 2022 ರ ಸಾಲಿನಲ್ಲಿ ಕಾಲಿವುಡ್ ಸಿನಿಮಾರಂಗದಲ್ಲಿ ಬಂದ ಅತ್ಯುತ್ತಮ ಸಿನಿಮಾಗಳ ಪೈಕಿ ಈ ಸಿನಿಮಾವೂ ಒಂದು.
ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಲ್ಲಂದಿ ಸಿನಿಮಾ ರಿಲೀಸ್ ಗೂ ಮುನ್ನ ನಿಧನರಾಗಿದ್ದರು. (ಫೆಬ್ರವರಿ 1, 2022 ರಂದು) ಅವರ ಪಾತ್ರಕ್ಕೆ ಮರಣೋತ್ತರವಾಗಿ 69ನೇ ರಾಷ್ಟ್ರೀಯ ಪ್ರಶಸ್ತಿಯಲ್ಲಿ ವಿಶೇಷ ಮೆಚ್ಚುಗೆ ಪ್ರಶಸ್ತಿ ಸಿಕ್ಕಿತ್ತು. ಇದೀಗ ಈ ಸಿನಿಮಾದ ಮತ್ತೊಬ್ಬ ಕಲಾವಿದರು ಮೃತಪಟ್ಟಿರುವುದು ಕಾಲಿವುಡ್ ರಂಗಕ್ಕೆ ಆಘಾತ ನೀಡಿದೆ.