Advertisement

ಕಡಬ: ಆಂಗ್ಲ ಮಾಧ್ಯಮ ತರಗತಿ ಕೈ ತಪ್ಪದು

09:36 PM May 19, 2019 | Team Udayavani |

ಕಡಬ: ಇಲ್ಲಿನ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಮುಂದಾಗಿರುವ ಆಂಗ್ಲ ಮಾಧ್ಯಮ ತರಗತಿ ಕೈ ತಪ್ಪದು ಎಂದು ಶಿಕ್ಷಣ ಇಲಾಖಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ತಿಳಿಸಿದ್ದಾರೆ.

Advertisement

ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಯೋಜನೆಗೆ ಆಯ್ಕೆಯಾಗಿದ್ದ ಕಡಬ ಸರಕಾರಿ ಮಾದರಿ ಶಾಲೆಯಿಂದ ಶಿಕ್ಷಕರು ತರಬೇತಿಗೆ ಹಾಜರಾಗದ ಕಾರಣ ಕಡಬ ಶಾಲೆಯನ್ನು ಪಟ್ಟಿಯಿಂದ ಕೈಬಿಟ್ಟು ಬೇರೆ ಶಾಲೆಯನ್ನು ಸೇರಿಸಲಾಗುವುದು ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಕಡಬ ಗ್ರಾ.ಪಂ.ಸಭಾಂಗಣದಲ್ಲಿ ಶಾಲಾ ಶಿಕ್ಷಕರ ಜತೆ ತುರ್ತು ಸಭೆ ನಡೆಸಿದ ಅವರು, ಶಿಕ್ಷಣ ಇಲಾಖಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಚರ್ಚಿಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಅನಾರೋಗ್ಯದ ಕಾರಣದಿಂದಾಗಿ ಗೈರಾಗಿದ್ದ ಶಿಕ್ಷಕಿ ಮೇ 16ರಿಂದ ತರಬೇತಿಗೆ ಹಾಜರಾಗಿದ್ದಾರೆ. ಹೀಗಾಗಿ, ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಶಾಲೆಗಳ ಪಟ್ಟಿಯಿಂದ ಕಡಬ ಶಾಲೆಯನ್ನು ಕೈಬಿಡುವುದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆ ನೀಡಿದ್ದಾರೆ. ಈ ಭಾಗದ ಬಡ ಮಕ್ಕಳಿಗೆ ಅನುಕೂಲಕರವಾಗಿರುವ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ನಿಟ್ಟಿನಲ್ಲಿ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.

ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಮಾತನಾಡಿ ಕಡಬ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಎಲ್ಲ ಸೌಕರ್ಯಗಳಿದ್ದು, ಯಾವುದಾದರೂ ನೆರವು ಬೇಕಿದ್ದಲ್ಲಿ ಅದನ್ನು ನೀಡಲು ಗ್ರಾ.ಪಂ. ಆಡಳಿತ ಸಿದ್ಧವಿದೆ ಎಂದರು.ಸಾಮಾಜಿಕ ಮುಂದಾಳು ಎಸ್‌. ಅಬ್ದುಲ್‌ ಖಾದರ್‌ ಮಾತನಾಡಿದರು.

ಕಡಬ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಗ್ರಾ.ಪಂ. ಸದಸ್ಯೆ, ಶಾಲಾಭಿವೃದ್ಧಿ ಸಮಿತಿಯ ನಾಮ ನಿರ್ದೇಶಿತ ಸದಸ್ಯೆ ಶಾಲಿನಿ ಸತೀಶ್‌ ನಾೖಕ್‌, ಗ್ರಾ.ಪಂ. ಸದಸ್ಯರಾದ ಸೈಮನ್‌ ಸಿ.ಜೆ., ಎ.ಎಸ್‌. ಶರೀಫ್‌, ಮಾದರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ವಿಜಯ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಮುಖ್ಯ ಶಿಕ್ಷಕ ತರಾಟೆಗೆ
ಶಿಕ್ಷಕರು ತರಬೇತಿಗೆ ಹಾಜರಾಗದ ಕಾರಣ ಆಂಗ್ಲ ಮಾಧ್ಯಮ ತರಗತಿ ಕೈತಪ್ಪಲಿದೆ ಎನ್ನುವ ವಿಚಾರದ ಹಿನ್ನೆಲೆಯಲ್ಲಿ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಅವರು ಶಾಲಾ ಮುಖ್ಯ ಶಿಕ್ಷಕ ಹಮೀದ್‌ ಕೋಡಿಂಬಾಳ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಶಾಲೆಯ ಛಾವಣಿ ಕುಸಿದರೆ, ಗೋಡೆ ಬಿರುಕು ಬಿಟ್ಟರೆ, ಶಾಲೆಯಲ್ಲಿ ನೀರಿಲ್ಲದಿದ್ದರೆ ಕೂಡಲೇ ನಮಗೆ ದೂರು ಕೊಡುವ ನೀವು ಶಾಲೆಯಲ್ಲಿ ಸರಕಾರದ ಮಹತ್ವಾಕಾಂಕ್ಷೆಯ ಆಂಗ್ಲ ಮಾಧ್ಯಮ ತರಗತಿ ಆರಂಭಗೊಳ್ಳುವ ವಿಚಾರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಶಿಕ್ಷಕರು ತರಬೇತಿಗೆ ಹಾಜರಾಗದೇ ಇದ್ದುದರಿಂದ ಈ ಅವಕಾಶ ಕೈತಪ್ಪುವ ಹಂತದವರೆಗೆ ಹೋಗಿರುವುದು ನಿಮ್ಮ ಬೇಜವಾಬ್ದಾರಿತನ ಎಂದು ಹರಿಹಾಯ್ದರು.

ಸಮಸ್ಯೆ ಬಗೆ ಹರಿದಿದೆ: ಮುಖ್ಯ ಶಿಕ್ಷಕ
ತರಬೇತಿಗೆ ನಿಯೋಜನೆಗೊಂಡಿದ್ದ ಶಿಕ್ಷಕಿಯ ಮಗಳಿಗೆ ಮದುವೆ ಇದ್ದುದರಿಂದ ಅವರ ನಿಯೋಜನೆಯನ್ನು ರದ್ದುಪಡಿಸಿ ಮತ್ತೂಬ್ಬರನ್ನು ನಿಯೋಜಿಸಲಾಗಿತ್ತು. ಅವರಿಗೂ ಅನಾರೋಗ್ಯ ಇದ್ದುದರಿಂದ ತರಬೇತಿಗೆ ಹಾಜರಾಗಲು ತೊಡಕಾಯಿತು. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದುದರಿಂದ ನನಗೂ ತರಬೇತಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಇದೀಗ ನಿಯೋಜನೆಗೊಂಡಿರುವ ಶಿಕ್ಷಕಿ ತರಬೇತಿಗೆ ಹಾಜರಾಗಿರುವುದರಿಂದ ಸಮಸ್ಯೆ ಬಗೆಹರಿದಿದೆ ಎಂದು ಮುಖ್ಯ ಶಿಕ್ಷಕ ಹಮೀದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next