Advertisement

‘ಸಾರ್ಥರಹಿತ ಜೀವನ ಸಾರ್ಥಕ’

11:27 AM Mar 12, 2018 | Team Udayavani |

ಕಡಬ: ಮಾನವ ಜೀವನ ಲಭಿಸಿರುವುದು ಅತ್ಯಮೂಲ್ಯ ಅವಕಾಶ. ಪರಸ್ಪರ ಅನ್ಯೋನ್ಯತೆಯಿಂದ ಬದುಕುವುದೇ ನಿಜವಾದ ಜೀವನ. ಸ್ವಾರ್ಥರಹಿತವಾಗಿದ್ದರೆ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಪುತ್ತೂರು ಮಲಂಕರ ಧರ್ಮ ಪ್ರಾಂತದ ನೂತನ ಧರ್ಮಾಧ್ಯಕ್ಷ ರೈ|ರೆ| ಡಾ| ಗೀವರ್ಗೀಸ್‌ ಮಾರ್‌ ಮಕಾರಿಯೋಸ್‌ ಅವರು ನುಡಿದರು.

Advertisement

ಅವರು ಪುತ್ತೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾಗಿ ಪೀಠಾರೋಹಣಗೈದ ಬಳಿಕ ಕಡಬದ ಸೈಂಟ್‌ ಪೌಲ್ಸ್‌ ಚರ್ಚ್‌ಗೆ ಪ್ರಥಮ ಭೇಟಿ ನೀಡಿ, ದಿವ್ಯ ಬಲಿಪೂಜೆ ನೆರವೇರಿಸಿ, ಚರ್ಚ್‌ ವತಿಯಿಂದ ಸಮ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.

ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ಎನ್ನುವುದು ನಮ್ಮ ದೇಶದ ಸನಾತನ ನಂಬಿಕೆ. ಧಾರ್ಮಿಕ ಚೌಕಟ್ಟಿನ ಸನ್ಮಾರ್ಗದಲ್ಲಿ ನಾವು ಮುನ್ನಡೆದರೆ ಅದು ನಮ್ಮನ್ನು ರಕ್ಷಿಸುತ್ತದೆ ಎನ್ನುವುದು ಅದರ ತಾತ್ಪರ್ಯ ಎಂದು ನುಡಿದರು.

ಚರ್ಚ್‌ನ ಪರಿಸರ ಪಾವನ
ಚರ್ಚ್‌ನ ಧರ್ಮಗುರು ವಂ| ಪೀಟರ್‌ ಜಾನ್‌ ಅವರು ಮಾತನಾಡಿ, ಸರಳತೆ ಮತ್ತು ಸಚ್ಚಾರಿತ್ರ್ಯದ ಪ್ರತಿರೂಪವಾಗಿರುವ ನೂತನ ಧರ್ಮಾಧ್ಯಕ್ಷರ ಪಾದಸ್ಪರ್ಶದಿಂದ ನಮ್ಮ ಚರ್ಚ್‌ನ ಪರಿಸರ ಪಾವನವಾಗಿದೆ. ಅವರ ಎಲ್ಲ ಸತ್ಕಾರ್ಯಗಳಿಗೆ ಸೈಂಟ್‌ ಪೌಲ್ಸ್‌ ಚರ್ಚ್‌ನ ಎಲ್ಲ ಸದಸ್ಯರ ಸಂಪೂರ್ಣ ಬೆಂಬಲವಿದೆ ಎಂದರು.

ಪುತ್ತೂರು ಧರ್ಮಪ್ರಾಂತ್ಯದ ಎಂಸಿವೈಎಂ ನಿರ್ದೇಶಕ ವಂ| ಥಾಮಸ್‌ ನಿರ್ನಾಕುನ್ನೇಲ್‌, ಧರ್ಮಪ್ರಾಂತದ ಭವನಜ್ಯೋತೀಸ್‌ ಅಧ್ಯಕ್ಷ ಸುಜಿತ್‌ ಪಿ.ಕೆ. ಕಡಬ, ಜಿಲ್ಲಾಧ್ಯಕ್ಷ ಜೋಸ್‌ ಕೇಳಾನ್‌ಕುನ್ನೇಲ್‌, ಮಾತೃ ವಿಭಾಗದ ಚಂದ್ರಮ್ಮ ಮ್ಯಾಥ್ಯೂ, ಚರ್ಚ್‌ನ ಎಂಸಿ ವೈಎಂ ಘಟಕಾಧ್ಯಕ್ಷ ಆಕಾಶ್‌ ಎನ್‌. ಶಾಜಿ, ಎಂಸಿಎ ಘಟಕಾಧ್ಯಕ್ಷೆ ಮೇರಿ ಮ್ಯಾಕ್ಸಿಂ ಮಾತನಾಡಿದರು.

Advertisement

ಚರ್ಚ್‌ನ ಧರ್ಮಭಗಿನಿ ಸಿ. ಸುಮಾ, ಆಡಳಿತ ಸಮಿತಿಯ ಸದಸ್ಯರಾದ ಸುರೇಶ್‌, ಜೋಸೆಫ್‌ ಸಿ.ಜೆ., ಶಾಜಿ ಆ್ಯಂಟನಿ, ಪ್ರಿಯಾ ಥಾಮಸ್‌ ಹಾಗೂ ಸಿನಿ ಜೋಸ್‌ ಉಪಸ್ಥಿತರಿದ್ದರು. ಎಂಸಿವೈಎಂ ಅನಿಮೇಟರ್‌ ಆಗಿ ಸುಜಿತ್‌ ಪಿ.ಕೆ. ಕಡಬ ಅವರನ್ನು ನಿಯೋಜಿಸಲಾಯಿತು.

ಎಂಸಿವೈಎಂ ನೂತನ ಪದಾಧಿಕಾರಿಗಳಿಗೆ ಧರ್ಮಾಧ್ಯಕ್ಷರು ಪ್ರತಿಜ್ಞಾವಿಧಿ ಬೋಧಿಸಿದರು. ಎರಡು ವರ್ಷಗಳ ಕಾಲ ಎಂಸಿವೈಎಂ ಅನಿಮೇಟರ್‌ ಆಗಿ ಕಾರ್ಯ ನಿರ್ವಹಿಸಿದ ಕೆ.ಟಿ. ಥಾಮಸ್‌ ಅವರನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಹಣಕಾಸು ಸಲಹಾ ಸಮಿತಿಯ ಸದಸ್ಯ ಸ್ಯಾಮುಯೆಲ್‌ ಜೋಸ್‌ ಸ್ವಾಗತಿಸಿ, ಚರ್ಚ್‌ನ ಕಾರ್ಯದರ್ಶಿ ಪಿ.ಕೆ. ಚೆರಿಯನ್‌ ವಂದಿಸಿದರು. ಅಲಿನಾ ಥಾಮಸ್‌ ಆರಾಧನ ಗೀತೆ ಹಾಡಿದರು. ಜಿಜಿ ಸುಜಿತ್‌ ಅವರು ಕಾರ್ಯಕ್ರಮ ನಿರೂಪಿಸಿದರು.

ಒಳಿತೆ ಧರ್ಮದ ಆಶಯ
ಮಾನವೀಯತೆಯೇ ಜೀವನದ ಪ್ರಮುಖ ಅಂಗ. ನಾನು ಎನ್ನುವ ಅಹಂನಿಂದಾಗಿಯೇ ಮನುಷ್ಯ ಜೀವನದಲ್ಲಿ ಸಾಕಷ್ಟು ನೋವುಗಳನ್ನು ಎದುರಿಸುತ್ತಿದ್ದಾನೆ. ಪ್ರತಿಯೊಂದು ಧರ್ಮವೂ ಒಳಿತನ್ನೇ ಬಯಸಿದೆ. ಪ್ರತಿಯೊಬ್ಬರೂ ತಾವು ಅನುಸರಿಸುವ ಧಾರ್ಮಿಕ ವಿಚಾರಗಳನ್ನು ಸಮರ್ಪಕವಾಗಿ ತಿಳಿದುಕೊಂಡರೆ ಧರ್ಮದ ವಿಚಾರದಲ್ಲಿ ಯಾವುದೇ ಸಂಘರ್ಷಗಳು ನಡೆಯಲು ಸಾಧ್ಯವಿಲ್ಲ ಎಂದು ಧರ್ಮಾಧ್ಯಕ್ಷರು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next