ಕಡಬ : ನೂತನ ಕಡಬ ತಾ| ಅನುಷ್ಠಾನಕ್ಕೆ ಸಂಬಂಧಿಸಿ ಪುತ್ತೂರು ಸಹಾಯಕ ಕಮಿಷನರ್ ಕೃಷ್ಣ ಮೂರ್ತಿ ನೇತೃತ್ವದಲ್ಲಿ ಕಡಬದ ಅಂಬೇಡ್ಕರ್ ಭವನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬುಧವಾರ ಜರಗಿತು. ನೂತನ ತಾ| ಕೇಂದ್ರದಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯುವುದು, ಜಮೀನು ಕಾದಿರಿಸುವುದು, ಸಿಬಂದಿ ನೇಮಕ ಕುರಿತು 10 ದಿನಗಳೊಳಗೆ ಯೋಜನೆ ಸಿದ್ಧಪಡಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರಕಾರ ಹೊಸ ತಾಲೂಕು ಘೋಷಣೆ ಮಾಡಿದೆ. ಅದರ ಅನುಷ್ಠಾನಕ್ಕೆ ಹಲವಾರು ಪೂರಕ ಸಿದ್ಧತೆಗಳು ಆಗಬೇಕಿವೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು. ಹೋಬಳಿ ರಚನೆ ಬಗ್ಗೆಯೂ ಸಹಾಯಕ ಆಯುಕ್ತರು ಮಾಹಿತಿ ಪಡೆದರು.
ಎಲ್ಲ ಗ್ರಾಮಗಳಿಗೆ ಹತ್ತಿರವಾಗುವ ಆಲಂಕಾರನ್ನು ಹೋಬಳಿ ಮಾಡುವ ಬಗ್ಗೆ ಯೋಜನೆ ತಯಾರಿಸುವಂತೆ ಸೂಚನೆ ನೀಡಿದರು.
ಕಡಬ ಪ್ರಭಾರ ತಹಶೀಲ್ದಾರ್ ಅನಂತ ಶಂಕರ, ಪುತ್ತೂರು ತಾ.ಪಂ. ಇಒ ಜಗದೀಶ್, ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಪುತ್ತೂರು ಸಿಡಿಪಿಒ ಶಾಂತಿ ಹೆಗ್ಡೆ, ಪುತ್ತೂರು ಉಪ ನೋಂದಣಾಧಿಕಾರಿ ಸುನೀತಾ ರವಿಶಂಕರ್, ಅಂಗನವಾಡಿ ಮೇಲ್ವಿಚಾರಕಿ ಹೇಮಾ ರಾಮದಾಸ್, ಕ್ಷೇತ್ರ ಶಿಕ್ಷಣ ಸಂಯೋಜಕ ಉದಯ ಶಂಕರ್, ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಕೆ. ತಾರಾನಾಥ, ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸುರೇಶ್ ಭಟ್, ಪಶು ವೈದ್ಯಾಧಿಕಾರಿ ಡಾ| ಧರ್ಮಪಾಲ ಉಪಸ್ಥಿತರಿದ್ದರು. ಸಭೆಯ ಬಳಿಕ ವಿವಿಧ ಇಲಾಖೆಗಳಿಗೆ ಕಾದಿರಿಸಿದ ಮರ್ದಾಳ ಗ್ರಾ.ಪಂ.ಗೆ ಒಳಪಟ್ಟ ಬಂಟ್ರ ಗ್ರಾಮದ ಮುಂಚಿಕಾಪು ಪ್ರದೇಶ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಪಟ್ಟಣ ಪಂ. ಚರ್ಚೆ
ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂ. ಆಗಿ ಮೇಲ್ದರ್ಜೆ ಗೇರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿರುವ ಮಾಹಿತಿಯನ್ನು ಕಡಬ ಪಿಡಿಒ ಚೆನ್ನಪ್ಪ ಗೌಡ ಸಹಾಯಕ ಆಯುಕ್ತರ ಮುಂದಿಟ್ಟರು. ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಪಟ್ಟಣ ಪಂ. ರಚನೆಗೆ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಪಟ್ಟಣ ಪಂ. 10 ಸಾವಿರಕ್ಕಿಂತ ಹೆಚ್ಚು ಜನ ಸಂಖ್ಯೆ ಬೇಕಾಗುತ್ತದೆ. ಕಡಬ, ಕೋಡಿಂಬಾಳದಲ್ಲಿ 9,500ರಷ್ಟು ಜನಸಂಖ್ಯೆ ಇದೆ ಎಂದರು. ಹಾಗಿದ್ದರೆ ಬಂಟ್ರ ಗ್ರಾಮವನ್ನು ಸೇರಿಸಿಕೊಂಡು ಯೋಜನೆ ಸಿದ್ಧಪಡಿಸಿ ಎಂದು ಎಸಿ ಸೂಚಿಸಿದರು.